ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಬರುತ್ತೇನೆ ಎಂದುಕೊಂಡಿರಲಿಲ್ಲ; ಅವಳಿ ನಗರ ಅಭಿವೃದ್ಧಿಗೆ ಪ್ರಾಶಸ್ತ್ಯ ಎಂದ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದೆ. ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿ, ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಷೇಶ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳುವ ಮುನ್ನ ವಿಮಾನ ನಿಲ್ದಾಣದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಹುಬ್ಬಳ್ಳಿ ನನಗೆ ಅತ್ಯಂತ ಪ್ರೀತಿಯ ಊರು. ನನ್ನ ಶೈಕ್ಷಣಿಕ ಜೀವನದ ಅಪಾರ ಪ್ರಮಾಣದ ಸ್ನೇಹಿತರ ಬಳಗ ಇಲ್ಲಿದೆ. ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಆಗಮಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಪಕ್ಷ ಹಾಗೂ ಕೇಂದ್ರದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆರ್ಶೀವಾದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇನೆ. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಹಿರಿಯ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಅನೇಕ ಶಾಸಕ ಮಿತ್ರರು ಇಲ್ಲಿರುವುದರಿಂದ ಪಕ್ಷ ಇಲ್ಲಿ ಬಲಿಷ್ಠವಾಗಿದೆ. ಪಕ್ಷ ಹಾಗೂ ಪರಿವಾರದ ಹಿರಿಯರೊಂದಿಗೆ ಚರ್ಚೆ ಮಾಡಿ ಅವರ ಸಲಹೆ ಸೂಚನೆಗಳನ್ನು ಅನುಷ್ಠಾನ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಾಳೆ ಬೆಳಗ್ಗೆ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತೇನೆ ಎಂದು ಹೇಳಿದರು.
ಶೆಟ್ಟರ್ ಸಮಸ್ಯೆ ಬಗೆಹರಿಸುತ್ತೇನೆ ಎಂದ ಸಿಎಂ ಬೊಮ್ಮಾಯಿ