Latest

ಜಿಲ್ಲಾ ಪಂಚಾಯತ್ ಸಿಇಓ ಗಳಿಗೆ ಸಿಎಂ ಮಹತ್ವದ ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ (CEO’s) ಸಭೆ ನಡೆಯಿತು.

ಸಭೆಯ ಪ್ರಮುಖಾಂಶಗಳು ಈ ಕೆಳಗಿನಂತಿವೆ:

• ಜಲಜೀವನ್ ಮಿಷನ್ ಯೋಜನೆಯಡಿ ಬ್ಯಾಚ್ 1 ಹಾಗೂ 2ರ ಕಾಮಗಾರಿಗಳು ಪ್ರಾರಂಭವಾಗಿದೆ. ಬ್ಯಾಚ್ 1 ರಡಿ ಶೇ. 88 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿದರು.

• ಓವರ್ ಹೆಡ್ ಟ್ಯಾಂಕ್ಗಳ ನಿರ್ಮಾಣಕ್ಕೆ ಕಂದಾಯ ಇಲಾಖೆ ನೆರವಿನೊಂದಿಗೆ ಜಾಗ ಪಡೆದು ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.

• ಬ್ಯಾಚ್-3ರ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಹಾಗೂ ಬ್ಯಾಚ್-4ರ ಡಿ.ಪಿ.ಆರ್. ತಯಾರಿಕೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

• ಜಲಜೀವನ್ ಮಿಷನ್ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈ ಯೋಜನೆಯ ಪ್ರಗತಿಯನ್ನು ನಿಯಮಿತವಾಗಿ ಪ್ರತಿ ತಿಂಗಳು ಪರಿಶೀಲಿಸಲು ಸೂಚಿಸಲಾಯಿತು.

• ಮಹಾತ್ಮಾ ಗಾಂಧಿ ನರೇಗಾದಲ್ಲಿ 13 ಕೋಟಿ ಮಾನವ ದಿನಗಳ ಗುರಿಯಲ್ಲಿ ಈಗಾಗಲೇ ಶೇ. 88 ರಷ್ಟು ಗುರಿಸಾಧನೆಯಾಗಿದೆ.

• ಶಾಲಾ ಕಟ್ಟಡ ಮತ್ತಿತರ ಸಾರ್ವಜನಿಕರ ಬಳಕೆಯ ‘ಕಾಮಗಾರಿಗಳನ್ನು, ಚರಂಡಿ ವ್ಯವಸ್ಥೆ ಮೊದಲಾದ ಮೂಲಸೌಕರ್ಯಗಳನ್ನು ಮಹಾತ್ಮಾ ಗಾಂಧಿ ನರೇಗಾ ಅಡಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

• ರಾಜ್ಯದ 5946 ಪಂಚಾಯಿತಿಗಳ ಪೈಕಿ 5200 ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯಾರಂಭ ಮಾಡಿದೆ. ಉಳಿದ ಪಂಚಾಯಿತಿಗಳಲ್ಲಿಯೂ ಶೀಘ್ರವೇ ಪ್ರಾರಂಭಿಸಲು ಸೂಚಿಸಿದರು.

• ದ್ರವ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 24,172 ಗ್ರಾಮಗಳ ಡಿ.ಪಿ.ಆರ್.ಗಳಿಗೆ ಅನುಮೋದನೆ ನೀಡಲಾಗಿದ್ದು, 14,580 ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭವಾಗಿವೆ.

• ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಿಗೆ ನಾಮಫಲಕ ಹಾಕಿರಬೇಕು. ಶೇ 92 ರಷ್ಟು ಪ್ರಗತಿ ಆಗಿದೆ. ಕಲಬುರಗಿ, ಬೀದರ್, ಹಾಸನ, ಮಂಡ್ಯ, ಹಾವೇರಿ, ಬಳ್ಳಾರಿ ಜಿಲ್ಲೆಗಳು ಪ್ರಗತಿಯಲ್ಲಿ ಹಿಂದುಳಿದಿರುವುದರಿಂದ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.

• ಅಮೃತ ಗ್ರಾಮ ಪಂಚಾಯಿತಿ ಹಂತ-2ರಡಿ ಈ ಆರ್ಥಿಕ ವರ್ಷದೊಳಗೆ ಎಲ್ಲಾ ಕಾಮಗಾರಿಗಳು ಪ್ರಾರಂಭವಾಗಬೇಕು ಎಂದು ಸೂಚಿಸಿದರು.

• ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಮಂಜೂರಾದ ಕಾಮಗಾರಿಗಳನ್ನು ಈ ಆರ್ಥಿಕ ವರ್ಷದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.

• 5 ಸಾವಿರ ಕೋಟಿ ರೂ.ಗಳ ಕಾರ್ಯಕ್ರಮ ಇದಾಗಿದ್ದು, ಮಾರ್ಚ್ 31ರೊಳಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಖ್ಯ ಮಂತ್ರಿಗಳು ಸೂಚಿಸಿದರು.

• ನವೆಂಬರ್ 14 ರೊಳಗೆ ಶಾಲಾ ಕೊಠಡಿಗಳ ನಿರ್ಮಾಣ ಪ್ರಾರಂಭವಾಗಬೇಕು ಎಂದು ಸೂಚಿಸಿದರು.

• ಅಮೃತ ಶಾಲಾ ಸೌಲಭ್ಯ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟವನ್ನೂ ಖಾತರಿಪಡಿಸಬೇಕು.

• ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವ ಯೋಜನೆಯನ್ನು ಆಗಸ್ಟ್ 15ರಂದು ಘೋಷಿಸಲಾಗಿದ್ದು, ಶೀಘ್ರವೇ ಬೇಡಿಕೆಯನ್ನು ಗುರುತಿಸಿ, ಯೋಜನೆ ರೂಪಿಸಲು ಸೂಚಿಸಿದರು.

• ನೋಂದಾಯಿತ ಗರ್ಭಿಣಿಯರ ತಪಾಸಣೆ: ಯಾವ ಆಸ್ಪತ್ರೆಗಳಲ್ಲಿ ಹೆಚ್ಚಿನ ಹೊರೆಯಾಗುತ್ತಿದೆ, ಎಲ್ಲಿ ಸೌಲಭ್ಯವಿದ್ದರೂ ಜನ ಬರುತ್ತಿಲ್ಲ ಎಂದು ವಿಸ್ತೃತ ಸಮೀಕ್ಷೆ ಮಾಡಿ, ಕಾರಣಗಳನ್ನು ಪತ್ತೆ ಹಚ್ಚಿ ವರದಿ ಸಲ್ಲಿಸಿ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಎಂಎಂ ಆರ್/ ಐ.ಎಂ ಆರ್ ಅನುಪಾತ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿದ್ದು, ವೈಜ್ಞಾನಿಕವಾಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ಸಿಇಒಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು . ಶಿಕ್ಷಣ ಮತ್ತು ಆರೋಗ್ಯ ಜಿಲ್ಲಾ ಪಂಚಾಯಿತಿಯ ಪ್ರಾಥಮಿಕ ವಲಯ. ಈ ಬಗ್ಗೆ ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.

• ಕೃಷಿ ಯಂತ್ರಧಾರೆ ಯೋಜನೆ ಯಡಿ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕುವಾರು ಎಷ್ಟು ಯಂತ್ರೋಪಕರಣಗಳನ್ನು ನೀಡಬೇಕೆಂದು ನಿರ್ಧರಿಸುವಂತೆ ಸೂಚಿಸಿದರು.

• ಕಿಸಾನ್ ಕ್ರೆಡಿಟ್ ಕಾರ್ಡ್ ಹಂಚಿಕೆ ಬ್ಯಾಂಕ್ ವಾರು ಪರಿಶೀಲಿಸಲು ಸೂಚಿಸಲಾಯಿತು.

• ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಒಂದು ಗ್ರಾಮದಲ್ಲಿ 2 ಸಂಘಗಳು ಹಾಗೂ 2 ಸ್ತ್ರೀ ಶಕ್ತಿ ಸಂಘಗಳಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಸ್ವಯಂ ಉದ್ಯೋಗಕ್ಕೆ ಅವಕಾಶವಿದೆ. ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈಗಾಗಲೇ 2659 ಗ್ರಾಮ ಪಂಚಾಯಿತಿಗಳಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘಗಳು ಸ್ಥಾಪನೆಯಾಗಿವೆ. ತಾಲೂಕಿನ ಇಒ ಹಾಗೂ ಪಿಡಿಒ ಗಳಿಗೆ ಜವಾಬ್ದಾರಿ ವಹಿಸಿ, ಶಾಸಕರ ನೇತೃತ್ವದಲ್ಲಿ ನವೆಂಬರ್ ನಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಸೂಚಿಸಿದರು.

• ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮ ಗಂಟು ರೋಗ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಜಿಲ್ಲಾ ಪಂಚಾಯತ್ನಲ್ಲಿ 30 ಕೋಟಿ ರೂ. ಗಳಷ್ಟು ಅನುದಾನ ಲಭ್ಯವಿದ್ದು, ಅದರಲ್ಲಿ ಲಸಿಕೆ, ಔಷಧಿ ಹಾಗೂ ಪೌಷ್ಟಿಕ ಆಹಾರದ ವೆಚ್ಚ ಭರಿಸಲು ಸೂಚಿಸಿದರು.

ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ವರ್ಗಾವಣೆ

https://pragati.taskdun.com/politics/pm-kisan-samman-yojnakarnataka-farmers1007-26-crore-release/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button