ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಂದು ಮಧ್ಯಾಹ್ನ ಹಲವು ಸಚಿವರೊಂದಿಗೆ ಮಹತ್ವದ ಸಭೆ ನಡೆಯಲಿದೆ. ಅದರಲ್ಲಿ ಮೇಕೆದಾಟು ಯೋಜನೆ, ಪಾದಯಾತ್ರೆ ಸೇರಿದಂತೆ ಇನ್ನು ಅನೇಕ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀರಾವರಿ ಯೋಜನೆಗಳಿಗಾಗಿ ಏನೂ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದರು. ಆಗಲೂ ಕೂಡ ಮೇಕೆದಾಟು ಯೋಜನೆಗೆ ಡಿಪಿಆರ್ ಸಲ್ಲಿಸಲಿಲ್ಲ. ಕಳೆದ ಮೂರು ವರ್ಷಗಳಿಂದ ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ನಿಂದ ಯಾವುದೇ ಚರ್ಚೆಯೂ ನಡೆದಿಲ್ಲ. ಈಗ ಚುನಾವಣೆ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ರಾಜಕೀಯ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತ ಎಂಬುದರಲ್ಲಿ ಸಂಶಯವಿಲ್ಲ ಎಂದರು.
ನಾವು ಅಧಿಕಾರದಲ್ಲಿದ್ದಾಗ ಯೋಜನೆಗಾಗಿ ಕೆಲಸ ಮಾಡಿಲ್ಲ ಎಂಬ ಅಪರಾಧಿ ಮನೋಭಾವ ಕಾಂಗ್ರೆಸ್ ನವರನ್ನು ಕಾಡುತ್ತಿದೆ. ಈ ಅಪರಾಧಿ ಮನೋಭಾವ ಸುಳ್ಳು ಮಾಡಲು, ಜನರನ್ನು ಮರಳು ಮಾಡುವ ಸಲುವಾಗಿ ರಾಜಕೀಯ ಪಾದಯಾತ್ರೆ ಆರಂಭಿಸಿದ್ದಾರೆ. ಕೃಷ್ಣೆಯ ಬಗ್ಗೆ ಪಾದಯಾತ್ರೆ ಮಾಡಿದರು. ಕೂಡಲ ಸಂಗಮದಲ್ಲಿ ಆಣೆ ಮಾಡಿ ಪ್ರತಿವರ್ಷ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಘೋಷಿಸಿದರು. ಆದರೆ ಏನಾಯಿತು? 5 ವರ್ಷದಲ್ಲಿ 7 ಕೋಟಿ ಹಣವನ್ನೂ ಕೊಡಲಿಲ್ಲ. ಕಾಂಗ್ರೆಸ್ ನಾಯಕರು ನೀರಾವರಿಗಾಗಿ ಬದ್ಧತೆಯಿಂದ ಕೆಲಸ ಮಾಡಿಲ್ಲ ಎಂಬುದು ಜನರಿಗೂ ಗೊತ್ತು. ಎಲ್ಲರನ್ನೂ ಎಲ್ಲಾ ಸಂದರ್ಭದಲ್ಲೂ ಮರಳು ಮಾಡಲಾಗದು ಎಂಬ ಮಾತಿದೆ. ಹಾಗೆಯೇ ಜನರು ಪ್ರತಿ ಬಾರಿ ಮರುಳಾಗಲ್ಲ ಎಂದು ವಾಗ್ದಾಳಿ ನದೆಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ ಮೇಕೆದಾಟು ಯೋಜನೆಗಾಗಿ ಡಿಪಿಆರ್ ಅಪ್ರೂವಲ್ ಗೆ ಸಿಡಬ್ಲು ಸಿಗೆ ಕಾವೇರಿ ಮಾನಿಟರಿ ಬೋರ್ಡ್ ಗೆ ಮನವಿ ಸಲ್ಲಿಸಲಾಗಿದೆ. ಸಭೆಗಳು ಕೂಡ ನಡೆಯುತ್ತಿವೆ. ನೀರಾವರಿ ಯೋಜನೆಗಳ ಕುರಿತಾಗಿ ಸುಪ್ರೀಂ ಕೋರ್ಟ್ ನಲ್ಲಿ ಹಲವು ಅರ್ಜಿಗಳು ವಿಚಾರಣೆ ಹಂತದಲ್ಲಿವೆ. ಎಲ್ಲಾ ವಿಚಾರಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಮಹಾರಾಷ್ಟ್ರದಲ್ಲಿ ಫೆ.15ರವರೆಗೆ ಶಾಲೆ, ಕಾಲೇಜು ಬಂದ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ