ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎಂಇಎಸ್ ಪುಂಡರ ವಿರುದ್ಧ ಖಂಡನಾ ನಿರ್ಣಯ ಮಂಡಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ರಾಯಣ್ಣ ಪ್ರತಿಮೆ ವಿರೂಪಗೊಳಿಸಿದವರ ವಿರುದ್ಧ ದೇಶದ್ರೋಹ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಘೋಷಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಎಂಇಎಸ್ ಪುಂಡಾಟ ಪ್ರಕರಣದ ಬಗ್ಗೆ ಚರ್ಚೆಯಾಗಿದ್ದು, ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ವಪಕ್ಷಗಳ ನಾಯಕರು ಸರ್ಕಾರವನ್ನು ಒಕ್ಕೋರಲಿನಿಂದ ಒತ್ತಾಯಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಭಾಷೆಯ ನೆಪದಲ್ಲಿ ಶಾಂತಿ ಕಡಡಲು ಯತ್ನಿಸಿರುವ ಎಂಇಎಸ್ ಪುಂಡರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಗಡಿ ಪಾರು ಮಾಡುವ ನಿಟ್ಟಿನಲ್ಲಿಯೂ ಚರ್ಚಿಸಲಾಗುವುದು. ಪುಂಡರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಂಇಎಸ್ ಕೃತ್ಯದ ವಿರುದ್ಧ ಖಂಡನಾ ನಿರ್ಣಯ ಮಂಡಿಸಿದ ಸಿಎಂ. ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಶಿವಾಜಿ ಪ್ರತಿಮೆಗಳಿಗೆ ಅವಮಾನ ಮಾಡಿರುವುದನ್ನು ಸದನ ಖಂಡಿಸುತ್ತದೆ. ಇಂತಹ ಕೃತ್ಯ ದೇಶದ್ರೋಹವೆಂದು ಪರಿಗಣಿಸಲಾಗುವುದು ಎಂದರು.
ಎಂಇಎಸ್ ಪುಂಡಾಟದ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ಕೇಂದ್ರ ಗೃಹ ಇಲಾಖೆಗೂ ವರದಿ ಕಳುಹಿಸಲಾಗುವುದು. ಉಭಯ ರಾಜ್ಯಗಳ ನಡುವೆ ಸಾಮರಸ್ಯವಿರಬೇಕು ಎಂದು ಕರ್ನಾಟಕ ಸರ್ಕಾರ ಬಯಸುತ್ತದೆ. ಆದರೆ ಗಡಿಯಾಚೆಗೂ ಪುಂಡಾಟಿಕೆಗೆ ಪ್ರೋತ್ಸಾಹ ಸಿಗುತ್ತಿರುವುದು ಖಂಡನೀಯ. ಮಹಾರಾಷ್ಟ್ರ ಸಿಎಂ ಜೊತೆಯೂ ಮಾತನಾಡುತ್ತೇವೆ. ಎಂಇಎಸ್ ನಿಷೇಧವಾಗದಿದರೂ ನಿಯಂತ್ರಣ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಸುವರ್ಣ ವಿಧಾನಸೌಧದ ಒಳಗೆ ಪ್ರಮುಖ ಸ್ಥಾನಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.
ಎಂಇಎಸ್ ವಿರುದ್ಧದ ಖಂಡನಾ ನಿರ್ಣಯವನ್ನು ಸದನ ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.
ಎಂಇಎಸ್ ನಿಷೇಧಕ್ಕೆ ಸಿದ್ದರಾಮಯ್ಯ ಆಗ್ರಹ; ಅವರಿಗೆ ಮಾನ, ಮರ್ಯಾದೆ ಏನೂ ಇಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ