Kannada NewsKarnataka News

ಇ ಲೈಬ್ರರಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ (Updated News)

ರವೀಂದ್ರ ಕೌಶಿಕ್ ಇ-ಗ್ರಂಥಾಲಯ ಕೌಶಿಕ್ ಲೋಕಾರ್ಪಣೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –   ಇಡೀ ಭಾರತವೇ ಬೆಳಗಾವಿಯಲ್ಲಿದೆ. ಬೆಳಗಾವಿಯ ಜನತೆ ಕನ್ನಡನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ದೇಶಾಭಿಮಾನಿಗಳು ಕೂಡ ಹೌದು. ಯಾವುದೇ ರೀತಿಯ ಸಂಕುಚಿತ ಭಾವನೆ ಹಾಗೂ ವಿಚಾರಗಳಿಗೆ ಇಲ್ಲಿ ಜಾಗವಿಲ್ಲ ಎಂಬುದನ್ನು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನೀವು‌ ತೋರಿಸಿದ್ದೀರಿ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ನಲ್ಲಿ ಶಿವಾಜಿ ಉದ್ಯಾನದ ಹತ್ತಿರವಿರುವ ರವೀಂದ್ರ ಕೌಶಿಕ್ ಇ-ಗ್ರಂಥಾಲಯವನ್ನು ರವಿವಾರ (ಸೆ.26) ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆ ಕರ್ನಾಟಕ ರಾಜ್ಯದ ಕಿರೀಟ ಪ್ರಾಯವಾಗಿದೆ. ಆದ್ದರಿಂದ ಬೆಳಗಾವಿ ಗೌರವ ಹೆಚ್ಚಿಸುವ ಕೆಲಸವನ್ನು ಸರಕಾರ ಸದಾ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಬೆಳಗಾವಿಯ ಎಲ್ಲಾ ಕಾರ್ಯಕ್ರಮಕ್ಕೂ ಒಂದು ವೈಶಿಷ್ಟ್ಯತೆ ನೀಡುವ ಶಾಸಕ ಅಭಯ್ ಪಾಟೀಲ್ ಅವರು ಗಾಳಿಪಟ ಉತ್ಸವ ಸೇರಿದಂತೆ  ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ; ಬೆಳಗಾವಿ ಮೊದಲ‌ ಸ್ಥಾನ ಪಡೆಯಲಿ:
ಬೆಳಗಾವಿಯ ಶಾಸಕರಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೆನಕೆ ಅವರ ಶ್ರಮದಿಂದ ಬೆಳಗಾವಿಯು ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ಎರಡನೇ ಸ್ಥಾನದಲ್ಲಿದ್ದು, ಅದನ್ನು ಮೊದಲ ಸ್ಥಾನಕ್ಕೆ ತರಲು ಸರಕಾರ ಎಲ್ಲ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.
 ಮೊದಲನೇ ಸ್ಥಾನಕ್ಕೆ ಬರಲು ಬೇಕಾದ ಎಲ್ಲಾ ಪ್ರೋತ್ಸಾಹವನ್ನು ಸರಕಾರ ನೀಡುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.
ಇ-ಗ್ರಂಥಾಲಯ ಜ್ಞಾನವನ್ನು ನೀಡುವ ಕೇಂದ್ರ :
ಬದುಕಿನ ಸಾರ್ಥಕತೆಗೆ ಜ್ಞಾನ ಮತ್ತು ಧ್ಯಾನ ಅವಶ್ಯಕ. ರವೀಂದ್ರ ಕೌಶಿಕ್ ಅವರ ಜೀವನ, ಅವರ ದೇಶಭಕ್ತಿ ನಮಗೆ ಆದರ್ಶವಾಗಿದೆ. ಅವರ ಹೆಸರಿನಲ್ಲಿ ಗ್ರಂಥಾಲಯ ನಾಮಕರಣ ಮಾಡಿರುವುದು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಅವರು  ಹೇಳಿದರು.
ಡಿಜಿಟಲ್ ಲೈಬ್ರರಿ ಜ್ಞಾನವನ್ನು ನೀಡುವ ಒಂದು ದೇವಾಲಯವಾಗಿದೆ. “ಗ್ರಂಥಾಲಯಕ್ಕೆ ಬನ್ನಿ ಅಥವಾ ಗ್ರಂಥಾಲಯವೇ ನಿಮ್ಮ ಕಡೆ ಬರುವುದು” ಇದು ಒಂದು ಹೊಸ ಪ್ರಯೋಗ.  ಈ ಪ್ರಯೋಗ ಯಶಸ್ವಿಯಾದರೆ  ಪ್ರತಿ ಮಹಾನಗರ ಪಾಲಿಕೆಗಳಲ್ಲಿ ಇ-ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಸ್ಮಾರ್ಟ್ ಸಿಟಿ ಯೋಜನೆ ಈ ಹಂತಕ್ಕೆ ತಲುಪಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ನೀಡಿದ ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಹಿಂದೆ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಆಗಿದ್ದಾಗಲೂ ಬೆಳಗಾವಿ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡಿದ್ದರು ಎಂದು ಸ್ಮರಿಸಿದರು.
ಅಭಿವೃದ್ಧಿಗೆ ಸದಾ ಬೆಂಬಲವಾಗಿ ನಿಂತಿರುವ ಮುಖ್ಯಮಂತ್ರಿಗಳಿಗೆ ಬೆಳಗಾವಿ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ, ರವೀಂದ್ರ ಕೌಶಿಕ್ ಅವರ ಸಹೋದರನ ಪತ್ನಿಯಾದ ಕುಸುಮಾ ಕೌಶಿಕ್ ಅವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಅರಣ್ಯ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ, ನಗರಾಭಿವೃದ್ಧಿ ಸಚಿವ ಭೈರತಿ‌ ಬಸವರಾಜ್ , ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಶಾಸಕ ದುರ್ಯೋಧನ ಐಹೊಳೆ, ಪರಿಷತ್ ಸದಸ್ಯ ಹಣಮಂತ ನಿರಾಣಿ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕ ಅಭಯ ಪಾಟೀಲ ಅವರ ಮನೆಯಲ್ಲಿ ಉಪಹಾರ ಸೇವಿಸಿದರು. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಉಮೇಶ ಕತ್ತಿ, ಬೈರತಿ ಬಸವರಾಜ, ಗೋವಿಂದ ಕಾರಜೋಳ, ಸಂಸದ ಅಣ್ಣಾ ಸಾಹೇಬ ಜೊಲ್ಲೆ ಮೊದಲಾದವರಿದ್ದರು.

ಅತ್ಯಾಧುನಿಕ ಇ-ಗ್ರಂಥಾಲಯ ಸೆ.26 ರಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ

ಪ್ರತಿಭಟನೆ ಹೆಸರಲ್ಲಿ ತೊಂದರೆ ಬೇಡ; ರೈತ ಮುಖಂಡರಿಗೆ ಸಿಎಂ ಮನವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button