ಕೋರೆ ವ್ಯಕ್ತಿಯಲ್ಲ, ಜನಾಂದೋಲನ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಮಾತನಾಡಿ, ಪ್ರಭಾಕರ ಕೋರೆ ಕೇವಲ ವ್ಯಕ್ತಿಯಲ್ಲ, ಕೇವಲ ರಾಜಕಾರಣಿಯಲ್ಲ, ಕೇವಲ ಉದ್ಯಮಿಯಲ್ಲ, ಅವರೊಬ್ಬ ಬಹುದೊಡ್ಡ ಜನಾಂದೋಲನ. ಪ್ರಭಾಕರ ಕೋರೆ ಅವರ ಹೆಸರಿನಲ್ಲಿ ದೇವರೇ ಸದಾಚಾರ ಆದೋಲನ ನಡೆಸುತ್ತಿದ್ದಾನೆ ಎಂದರು.
ಬಸವಣ್ಣ ಆರಂಭಿಸಿದ ಸಮಾಜ ಸುಧಾರಣೆಯನ್ನು ಪ್ರಭಾಕರ ಕೋರೆ ಮುಂದುವರಿಸಿದ್ದಾರೆ. ಬಸವಣ್ಣ, ರಾಣಿ ಚನ್ನಮ್ಮರ ಪವಿತ್ರ ಭೂಮಿಯಲ್ಲಿ ಡಾ.ಪ್ರಭಾಕರ ಕೋರೆ ಅವರ ಅಮೃತಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಸುಧೈವ ಎಂದರು.
ಬಡವರ ಪಾಲಿನ ದೇವರು:
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕೆಲವು ಜನರನ್ನು ನೋಡಿದ ತಕ್ಷಣ ನಮ್ಮಲ್ಲಿ ಜೀವನೋತ್ಸಾಹ ಉಕ್ಕುತ್ತದೆ. ಕೆಎಲ್ಇ ಸಂಸ್ಥೆಯನ್ನು ಏಷ್ಯಾ ಖಂಡದಲ್ಲೇ ಮುಂಚೂಣಿಯಾಗಿ ಬೆಳೆಸಿದ್ದು ಕೋರೆಯವರ ಅಮಿತೋತ್ಸಾಹ ಕಾರಣ. ಅವರು ಬಡವರ ಪಾಲಿಗೆ ದೇವರೆನಿಸಿದ್ದಾರೆ. ಸಂಸ್ಥೆಯ ಇತಿಹಾಸದಲ್ಲಿ ಕೋರೆಯವರ ಅಧಿಕಾರಾವಧಿ ಸುವರ್ಣಾಕ್ಷರಗಳಿಂದ ಬರೆಯಬೇಕು. ಕೆಎಲ್ಇ ದೇವಾಲಯಕ್ಕೆ ಚಿನ್ನದ ಕಳಶ ಇಟ್ಟವರು ಅವರು. ಹೊಸ ಇತಿಹಾಸವನ್ನು ಬರೆದಿದ್ದಾರೆ. ಸರಕಾರಗಳಿಂದ ಮಾಡಲಾಗದ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.
ಬೆಳಗಾವಿಯಲ್ಲಿ ಮೊಟ್ಟ ಮೊದಲ ಬಾರಿಗೆ ವಿಧಾನಸಭೆಯ ಅಧಿವೇಶನ ನಡೆಸಲು ತಕ್ಷಣ ಮುಂದೆ ಬಂದರು. ಇಡೀ ಕೆಎಲ್ಇ ಸಂಸ್ಥೆಯನ್ನು ಅಧಿವೇಶನದ ಕೆಲಸದಲ್ಲಿ ತೊಡಗಿಸಿದರು. ಅವರಿಗೆ ಪಕ್ಷಾತೀತ, ಜಾತ್ಯತೀತ, ಧರ್ಮಾತೀತ ಅಭಿಮಾನಿಗಳಿದ್ದಾರೆ. ಇವರನ್ನು ಬಿಟ್ಟು ಉತ್ತರ ಕರ್ನಾಟಕದಲ್ಲಿ ಏನನ್ನಾದರೂ ಸಾಧಿಸುವುದು ಅಸಾಧ್ಯದ ಕೆಲಸ ಎಂದು ಯಡಿಯೂರಪ್ಪ ಹೇಳಿದರು.
ನಿಜವಾದ ಸತ್ಪುರುಷರು:
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹಲ್ಲಾದ ಜೋಶಿ ಅವರು ಅನನ್ಯ ಸಾಧಕ ಪ್ರಭಾಕರ ಕೋರೆ ಪುಸ್ತಕ ಬಿಡುಗಡೆ ಮಾಡಿ, ಸ್ವಾತಾಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೇ ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ನಡೆಯುತ್ತಿರುವುದು ಯೋಗಾ ಯೋಗ. ಮಾತಿನಲ್ಲಿ, ಕೃತಿಯಲ್ಲಿ, ಮನಸ್ಸಿನಲ್ಲಿ ಏಕರೂಪವಾಗಿರುವವರೇ ನಿಜವಾದ ಸತ್ಪುರುಷರು. ಹಾಗಾಗಿಯೇ ಕೋರೆಯವರ ಎಲ್ಲ ಕೆಲಸಗಳು ಸಿದ್ದಿಯಾಗುತ್ತವೆ. ಕೋರೆಯವರು ಎಲ್ಲ ವರ್ಗದ ಜನರನ್ನು ಬೆಳೆಸಿದ್ದಾರೆ. ದೇಶವಿದೇಶಗಳಲ್ಲಿ ಸಂಸ್ಥೆಯ ಶಾಲೆಗಳನ್ನು ಕಟ್ಟಿದ್ದಾರೆ ಎಂದರು.
ಕೆಎಲ್ಇ ಕಾಲೇಜುಗಳಿಲ್ಲದಿದ್ದರೆ ನಾವೆಲ್ಲ ಪದವೀಧರರಾಗುತ್ತಿದ್ದವೋ ಇಲ್ಲವೋ ಎನ್ನುವ ಸಂಶಯವಿದೆ. ಸಹಸ್ರಾರು ಜನರಿಗೆ ವಿದ್ಯಾಧಾನ ಮತ್ತು ಅನ್ನಧಾನ ಮಾಡಿದ ಕೀರ್ತಿ ಕೋರೆ ಅವರಿಗೆ ಸಲ್ಲುತ್ತದೆ. ಅವರು ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಅವರು ನಿಗರ್ವಿ ಮನುಷ್ಯ. ಎಲ್ಲರ ಜೊತೆ ಹೊಂದಿಕೊಳ್ಳುವ ಸ್ವಭಾವ ಅವರದ್ದು ಎಂದು ಪ್ರಹ್ಲಾದ ಜೋಶಿ ಹೇಳಿದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಕೋರೆ ಒಬ್ಬ ಸರಳ, ಸಜ್ಜನ ವ್ಯಕ್ತಿ. ಕಳೆದ 40 ವರ್ಷದಲ್ಲಿ ಕೋರೆಯವರು ಕೆಎಲ್ಇ ಸಂಸ್ಥೆ ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆ. ಸಂಸ್ಥೆ ಇನ್ನಷ್ಟು ಬೆಳೆಯಲಿ. ನೂರಾರು ವರ್ಷ ಅವರು ಬಾಳಲಿ ಎಂದರು.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಡಾ.ಪ್ರಭಾಕರ ಕೋರೆ ಅವರು ಕೆಎಲ್ಇ ಸಂಸ್ಥೆಯ ಮೂಲಕ ಸರ್ವ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಮೋದಿಯವರ ನವಭಾರತ ಸ್ವಪ್ನವನ್ನು ಸಾಕಾರ ಮಾಡುತ್ತಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲ ಕಡೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ವಿಧಾನ ಮಂಡಳದ ಅಧಿವೇಶನ, ವಿಶ್ವಕನ್ನಡ ಸಮ್ಮೇಳನಗಳನ್ನು ಬೆಳಗಾವಿಯಲ್ಲಿ ನಡೆಸಿದವರು ಅವರು. ನೂರು ವರ್ಷದ ಕಾರ್ಯಕ್ರಮವನ್ನು ಸಹ ಇದೇ ರೀತಿ ಮಾಡೋಣ ಎಂದರು.
ಡಾ.ಪ್ರಭಾಕರ ಕೋರೆ ಅವರನ್ನು ಗ್ರಂಥ (ಪುಸ್ತಕಗಳಿಂದ) ತುಲಾಭಾರ ಮಾಡಲಾಯಿತು. ಈ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಲಾಗುವುದು ಎಂದು ಪ್ರಕಟಿಸಲಾಯಿತು. ಡಾ.ಪ್ರಭಾಕರ ಕೋರೆ ಮತ್ತು ಪತ್ನಿ ಆಶಾ ಕೋರೆ ಅವರನ್ನು ಗಣ್ಯರು ಸನ್ಮಾನಿಸಿದರು.
ಶಾಸಕರ ಭವನ ಕಟ್ಟಿ, ಪರಿಪೂರ್ಣ ಅಧಿವೇಶನ ನಡೆಸಿ – ಕೋರೆ
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ.ಪ್ರಭಾಕರ ಕೋರೆ, ಇಡೀ ಜೀವನದಲ್ಲಿ ಈ ದಿನ ಅತ್ಯಂತ ಮಹತ್ವದ್ದಾಗಿದೆ. ವಯಸ್ಸು 75 ಆದರೂ ನಾನು ಮನಸ್ಸಿನಲ್ಲಿ 57 ವರ್ಷದವನು. ಎಲ್ಲರ ಹಾರೈಕೆಯಿಂದ ನಾನು ಅಲ್ಪಸ್ವಲ್ಪ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಶಿಕ್ಷಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಇಷ್ಟು ಸಮಯವನ್ನು ನಾನು ರಾಜಕೀಯಕ್ಕೆ ನೀಡಿದ್ದರೆ ಮಂತ್ರಿಯಾದರೂ ಆಗುತ್ತಿದ್ದೆ. 1984ರಲ್ಲಿ ಚೇರಮನ್ ಆಗಿ 6 ತಿಂಗಳಲ್ಲಿ 300 ಹಾಸಿಗೆಗಳ ಆಸ್ಪತ್ರೆ ಆರಂಭಿಸಿದೆ. ಇಂದು 2400 ಹಾಸಿಗೆಗಳ ಆಸ್ಪತ್ರೆಯಾಗಿದೆ. ಲಕ್ಷಾವದಿ ಜನರು ಆಸ್ಪತ್ರೆಯಿಂದ ಪ್ರಯೋಜನ ಪಡೆದರು. ಇಂದು ಪ್ರತಿ ಅಂಗಾಂಗ ಬದಲಾವಣೆ ಮಾಡುವಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದು ಹೆಮ್ಮೆಯಿಂದ ಹೇಳಿದರು.
ಆರೋಗ್ಯ ಸೇವೆ ಇಲ್ಲದ ಭಾಗದಲ್ಲಿ ವಿಶ್ವದ ಯಾವುದೇ ಭಾಗಕ್ಕೆ ಕಡಿಮೆ ಇಲ್ಲದಂತೆ ಆರೋಗ್ಯ ಸೇವೆ ಬೆಳೆಸಲಾಗಿದೆ. ಇದು ಜನರ ಆಶಿರ್ವಾದ, ಪಕ್ಷಾತೀತವಾಗಿ ಮುಖಂಡರ ಆಶಿರ್ವಾದದಿಂದ ಆಗಿದೆ. ಉತ್ತಮ ಕೆಲಸ ಮಾಡುವವರಿಗೆ ಎಲ್ಲರ ಸಹಕಾರ ಸಿಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದ ಅವರು, ಕೆಎಲ್ಇ ಒಂದು ಕುಟುಂಬವಾಗಿ ಬೆಳೆದಿದೆ ಎಂದರು.
ನನಗೆ ಗುಂಡು ಹೊಡೆದಾಗ ನಾನು ಸಾಯುತ್ತೇನೆಂದು ತಿಳಿದು ಆಡಳಿತ ಮಂಡಳಿಯವರು ಆಸ್ಪತ್ರೆಯನ್ನು ನನ್ನ ಹೆಸರಿಗೆ ಮಾಡಿದ್ದಾರೆ. ಸಾಧ್ಯವಿದ್ದಷ್ಟು ಜನರ, ರೈತರ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಶಾಸಕರ ಭವನ ಕಟ್ಟಿ ಪರಿಪೂರ್ಣ ವಿಧಾನಮಂಡಳದ ಅಧಿವೇಶನ ನಡೆಸಿ ಎಂದು ಪ್ರಭಾಕರ ಕೋರೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಗೋವಾದಲ್ಲಿ ಕನ್ನಡ ಭವನ ಕಟ್ಟಲು ಜಾಗ ಕೊಡುವುದಾಗಿ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರಿಂದ ಮಾತು ಪಡೆದಿದ್ದೇನೆ ಎಂದು ಕೋರೆ ಹೇಳಿದರು.
ರೈತರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡಲು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಿದರು.
ಭಾಗಿಯಾದ ಗಣ್ಯರು:
ಮಹಾರಾಷ್ಟ್ರ ಸಚಿವ ರಾಧಾಕೃಷ್ಣ ವಿಖೆ ಪಾಟೀಲ, ಸಚಿವರಾದ ಮುರುಗೇಶ ನಿರಾಣಿ, ಭೈರತಿ ಬಸವರಾಜ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಸಿ.ನಾಗೇಶ, ಕೋಟಾ ಶ್ರೀನಿವಾಸ ಪೂಜಾರಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಮಂಗಲಾ ಅಂಗಡಿ, ಶಿವಕುಮಾರ ಉದಾಸಿ, ಸಿದ್ದೇಶ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಗೋವಾ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲ್ಮಾಡೋ, ಕೊಲ್ಲಾಪುರ ಸಂಸದ ಜಯಸಿದ್ದೇಶ್ವರ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ವಿಶ್ವನಾಥ ಪಾಟೀಲ, ಮಹಾಂತೇಶ ದೊಡ್ಡಗೌಡರ್, ಶ್ರೀಮಂತ ಪಾಟೀಲ, ಇಚಲಕರಂಜಿ ಶಾಸಕ ಪ್ರಕಾಶ ಅವಾಡೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೊದಲಾದವರು ಭಾಗವಹಿಸಿದ್ದರು.
ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಸ್ವಾಗತಿಸಿದರು. ಕೆಎಲ್ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಪ್ರಾಸ್ತಾವಿಕ ಮಾತನಾಡಿ, ಕೆಎಲ್ಇ ಸಂಸ್ಥೆ ಮತ್ತು ಡಾ.ಪ್ರಭಾಕರ ಕೋರೆ ಅವರ ಜೀವನ ಸಾಧನೆ ಮತ್ತು ಯೋಜನೆಯನ್ನು ವಿವರಿಸಿದರು. ಕೆಎಲ್ಇ ನಿರ್ದೇಶಕ ಅಮಿತ್ ಕೋರೆ ಕೆಂದ್ರ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಸನ್ಮಾನಿಸಿದರು. ಕೆಎಲ್ಇ ಸಂಸ್ಥೆಯ ನಿರ್ಧೇಶಕರು, ಅಭಿಮಾನಿಗಳು ವಿವಿಧ ಗಣ್ಯರನ್ನು ಸನ್ಮಾನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ