Kannada NewsKarnataka NewsPolitics

*ಚಿತ್ರಮಂದಿರಕ್ಕೆ ಇಂದಿರಾ ಗಾಂಧಿ ಹೆಸರಿಟ್ಟ ಸಂದರ್ಭ ನೆನಪಿಸಿಕೊಂಡ ಸಿಎಂ*

ಪ್ರಗತಿವಾಹಿನಿ ಸುದ್ದಿ: “ರಾಜ್ಯದಲ್ಲಿರುವ ಎಲ್ಲಾ ನಗರಗಳಲ್ಲೂ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಕಾರಣಕ್ಕೆ ನಮ್ಮ ಸರ್ಕಾರ ಹೊಸ ನಗರ ಯೋಜನೆ ರೂಪಿಸಿದೆ. ಇದರಲ್ಲಿ ಶಿಸ್ತು ಬದ್ಧ ರಸ್ತೆ ನಿರ್ಮಾಣಕ್ಕೆ ‘ನೂತನ ರಸ್ತೆ ಗ್ರಿಡ್ ವ್ಯವಸ್ಥೆ’ ಜಾರಿ ಮಾಡುವ ಚಿಂತನೆಯಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯ ಸಭಾಂಗಣದಲ್ಲಿ ನಡೆದ ರಾಜ್ಯದ ವಿವಿಧೆಡೆ ನಿರ್ಮಿಸಿರುವ 16 ಇಂದಿರಾ ಕ್ಯಾಂಟೀನ್ ಗಳು, ಸ್ವಚ್ಛಭಾರತ್ ಮಿಷನ್ (ನಗರ) ಯೋಜನೆಯಡಿ ಕಾಮಗಾರಿಗಳು ಹಾಗೂ ಯಂತ್ರೋಪಕರಣಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

“ಮೈಸೂರು, ಬೆಳಗಾವಿಯಲ್ಲಿ ರಸ್ತೆಗಳು ವಿಶಾಲವಾಗಿವೆ. ಆದರೆ, ಬೆಂಗಳೂರಿನ ಲ್ಲಿ ಈ ರೀತಿ ಇಲ್ಲ. ಇವೆಲ್ಲ ಯೋಜಿತವಾಗಿ ನಗರವನ್ನು ಅಭಿವೃದ್ಧಿ ಪಡಿಸುವುದರಿಂದ ಮಾತ್ರ ಸಾಧ್ಯ. ಅಗತ್ಯವಿರುವ ಪ್ರಮಾಣ ಪತ್ರಗಳನ್ನು ನಗರಯೋಜನೆ ಇಲಾಖೆಯಲ್ಲಿ ಪಡೆದುಕೊಳ್ಳಿ. ಇಂಧನ ಇಲಾಖೆಯವರು ಇಲ್ಲಿಗೆ ಬಂದು ಪ್ರಮಾಣ ಪತ್ರ ಪಡೆದುಕೊಳ್ಳುವುದು ನಡೆಯುತ್ತಿದೆ. ಎಲ್ಲವೂ ಇನ್ನು ಮುಂದೆ ಕೊನೆಗೊಳ್ಳಲಿದೆ. ಯೋಜಿತವಾಗಿ ನಗರ ನಿರ್ಮಾಣಕ್ಕಾಗಿಯೇ ನಾಡಪ್ರಭು ಕೆಂಪೇಗೌಡರ ಹೆಸರಲ್ಲಿ ನಗರಯೋಜನಾ ಕಾಲೇಜು ಆರಂಭಿಸಿದ್ದೇವೆ. ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ” ಎಂದರು.

ನಗರಸಭೆಗಳಿಗೆ ಹೆಚ್ಚಿನ ಅನುದಾನ

‘ನಮ್ಮ ಸರ್ಕಾರ ನಗರಸಭೆಗಳು ಹಾಗೂ ಕಾರ್ಪೋರೇಷನ್ ಗಳಿಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದೆ. ಕಳೆದ 3 ವರ್ಷಗಳಿಂದ ಅನುದಾನದಲ್ಲಿ ವ್ಯತ್ಯಾಸವಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ದೊರೆಯಲಿದೆ. ಆದರೆ, ಪ್ರತಿಯೊಂದು ಪೈಸೆಗೂ ಲೆಕ್ಕ ಇಡಬೇಕು. ಯೋಜನೆಯ ಫೋಟೋ, ವೀಡಿಯೋ ಮಾಡಬೇಕು. ಉದಾಹರಣೆಗೆ ಶಿವಕುಮಾರ್ ಮನೆಯಿಂದ ಯತೀಂದ್ರ, ಯತೀಂದ್ರ ಮನೆಯಿಂದ ಶಿವಕುಮಾರ್ ಮನೆಯ ರಸ್ತೆಗಳನ್ನು ತೋರಿಸಿ ಬಿಲ್ ಮಾಡುವಂತಿಲ್ಲ. ಗುಣಮಟ್ಟದಲ್ಲಿ ರಾಜಿ ಇಲ್ಲ. ಅಕ್ರಮ ವ್ಯವಹಾರಗಳಿಗೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಶಾಸಕರು, ಕಾರ್ಪೊರೇಟರ್ ಗಳು ಹೇಳಿದರು ಅಂತ ಕಳ್ಳಲೆಕ್ಕ, ಕಳ್ಳಬಿಲ್ ಗಳು ಮಾಡಿದರೇ ನೀವೇ ಜವಾಬ್ದಾರರು” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಿಜೆಪಿ ಜೆಡಿಎಸ್ ನಿಂದ ಹಸಿವಿನ ಮೇಲೆ ರಾಜಕಾರಣ

“ಬಡವನ ತಟ್ಟೆಯಲ್ಲಿ ಅನ್ನ ಇದ್ದಾಗ ಮಾತ್ರ ಅಭಿವೃದ್ಧಿಗೆ ಬೆಲೆ ಬರುತ್ತದೆ. ದುಡಿಯುವವರ ಮುಖದಲ್ಲಿ ನಗು ಇದ್ದರೆ ನಮ್ಮ ಕೆಲಸ ಸಾರ್ಥಕವಾಗುತ್ತದೆ. ಹಸಿವಿಗೆ ಜಾತಿ, ಧರ್ಮ ಅನ್ನೋದು ಇಲ್ಲ. ಎಷ್ಟೇ ದೊಡ್ಡ ಶ್ರೀಮಂತರಾಗಿದ್ದರೂ ಹಸಿವಾದಾಗ ಜಾತಿ ಧರ್ಮ ನೋಡಲ್ಲ. ಎಲ್ಲಿ, ಏನು ಸಿಗುತ್ತದೆಯೋ ಅದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಕೆಲವರು ಹಸಿವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ನಾವು ಆ ರೀತಿ ಮಾಡಲ್ಲ. ಬಿಜೆಪಿ, ಜನತಾದಳದ ಕ್ಷೇತ್ರದಲ್ಲಿ ಎಷ್ಟೋ ಕಡೆ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಿದ್ದಾರೆ” ಎಂದು ಹೇಳಿದರು.

“ಇಂದಿರಾ ಕ್ಯಾಂಟೀನ್ ನಲ್ಲಿ ಸಿಸಿ ಟಿವಿ ಕ್ಯಾಮೆರ ಹಾಕಿ ಕೇಂದ್ರೀಕೃತ ವ್ಯವಸ್ಥೆ ಮಾಡಬೇಕು. ಇದರಿಂದ ಪ್ರತಿದಿನ ಎಷ್ಟು ಜನ ಬಂದು ಹೋಗುತ್ತಾರೆ ಎನ್ನುವ ಮಾಹಿತಿ ದೊರೆಯುತ್ತದೆ. ದಿನಕ್ಕೆ ಒಬ್ಬರಂತೆ ಸರತಿಯಲ್ಲಿ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ, ಊಟ ಚೆನ್ನಾಗಿದೆಯೋ ಇಲ್ಲವೋ ಅಂತ ಗುಣಮಟ್ಟ ಪರೀಕ್ಷೆ ಮಾಡಿ ಸಹಿ ಹಾಕಿ ಬರಬೇಕು. ಹೀಗೆ ಮಾಡುವುದರಿಂದ ಅಲ್ಲಿ ಕೆಲಸ ಮಾಡುವವರಿಗೆ ಭಯ, ಭಕ್ತಿ ಇರುತ್ತದೆ. ಇದು ಬಡವರಿಗಾಗಿ ಮಾಡುತ್ತಿರುವ ಕೆಲಸವಾದ್ದರಿಂದ ಪಾರದರ್ಶಕವಾಗಿರಿ” ಎಂದು ಕಿವಿಮಾತು ಹೇಳಿದರು.

“ನಾನು ನಗರಾಭಿವೃದ್ಧಿ ಸಚಿವನಾಗಿದ್ದೆ. ಸ್ವಚ್ಛತೆ ಸವಾಲಿನ ಕೆಲಸ ಅನ್ನೋ ಅನುಭವ ಆಗಿದೆ. ಪೌರಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ತಂತ್ರಜ್ಞಾನ ಬಳಸಿಕೊಂಡು ವೇಗವಾಗಿ ಕೆಲಸ ಮಾಡಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ನಿಮ್ಮ ನೆರವಿಗೆ ನಿಲ್ಲಲಿವೆ” ಎಂದರು.

ಬಡವರಿಗೆ ನಿವೇಶನಗಳ ಹಂಚಿಕೆ

“ನಮ್ಮ ಸರ್ಕಾರ ಪೌರಕಾರ್ಮಿಕರಿಗಾಗಿ ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಪ್ರತಿ ಕ್ಷೇತ್ರದಲ್ಲೂ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ದಿಟ್ಟ ತೀರ್ಮಾನ ಮಾಡಿದೆ. ನಿಮಗೂ ಎಲ್ಲಾ ಸೌಕರ್ಯಗಳು ನೀಡುತ್ತಿದ್ದೇವೆ. ನೀವು ನಿಷ್ಠೆಯಿಂದ ಕೆಲಸ ಮಾಡಬೇಕು. ಜನರಿಗಾಗಿ ಕೆಲಸ ಮಾಡಲು ಇದು ಒಳ್ಳೆ ಅವಕಾಶ. ನಮಗೆ 5 ವರ್ಷಕ್ಕೊಂದು ಬಾರಿ ಜನರ ಮುಂದೆ ಹೋಗಿ ಅಧಿಕಾರ ನವೀಕರಣ ಮಾಡಿಕೊಳ್ಳಬೇಕು. ನಿಮಗೆ ಆ ರೀತಿ ಇಲ್ಲ. ಬದ್ದತೆಯಿಂದ, ಆತ್ಮತೃಪ್ತಿಯಿಂದ ಕೆಲಸ ಮಾಡಿ. ನಮ್ಮ ಸರ್ಕಾರ ನಿಮ್ಮನ್ನು ನಂಬಿದೆ, ನೀವು ಸರ್ಕಾರವನ್ನು ನಂಬಿ” ಎಂದರು.

“ಇಂದಿರಾ ಅಂದರೆ ಹಸಿವು ದೂರ. ಇಂದಿರಾ ಅಂದರೆ ಬಡತನ ದೂರ. ಈ ದೇಶದ ಹಸಿದ ಹೊಟ್ಟೆಗಳಿಗೆ, ದುಡಿಯುವ ಕೈಗಳಿಗೆ ಶಕ್ತಿ ತುಂಬಿದ್ದು ಇಂದಿರಾಗಾಂಧಿ. ಈ ದೇಶದ ಆರ್ಥಿಕತೆಗೆ, ಅಭಿವೃದ್ಧಿಗೆ, ಸಾಮಾನ್ಯ ಜನರ ಬಡವರ ಬದುಕಿಗೆ ಬಲ ತುಂಬಿದ ಧೀಮಂತ ಮಹಿಳೆ ಇಂದಿರಾಗಾಂಧಿ. ಅವರ ಹೆಸರು ಉಳಿಸಿಕೊಂಡು ಹೋಗುವುದು ನಮ್ಮ, ನಿಮ್ಮ ಕರ್ತವ್ಯ. ಈ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕು. ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವುದು ನಮ್ಮ ಗುರಿ. ಎಷ್ಟೇ ಕಷ್ಟ ಇರಲಿ. 5 ಗ್ಯಾರಂಟಿ ಕೊಟ್ಟಿದ್ದೇವೆ. ಬೆಲೆ ಗಗನಕ್ಕೆ ಏರುತ್ತಿದೆ. ಆದಾಯ ಪಾತಾಳಕ್ಕೆ ಹೋಗುತ್ತಿದೆ. ಆದರೂ ನಾವು ಅನ್ನಭಾಗ್ಯವನ್ನು ನೀಡುತ್ತಿದ್ದೇವೆ. ಇಂದಿರಾ ಕ್ಯಾಂಟೀನ್ ಅನ್ನು ಮುಂದುವರಿಸುತ್ತಿದ್ದೇವೆ” ಎಂದರು.

ಭಾವನೆ ಮೇಲೆ ರಾಜಕಾರಣ ಮಾಡೋದಿಲ್ಲ

“ಸೋನಿಯಾಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆ ಜಾರಿ ಮಾಡುವ ಮೂಲಕ ದೇಶದ ಬಡವರಿಗಾಗಿ ದಿಟ್ಟ ತೀರ್ಮಾನ ಕೈಗೊಂಡರು. ಎಸ್. ಎಂ. ಕೃಷ್ಣ ಅವರು ಬಿಸಿಯೂಟ ಕಾರ್ಯಕ್ರಮ ಆರಂಭಿಸಿದರು. ಹೀಗೆ ಬಡವರ ಪರವಾಗಿ ಚಿಂತಿಸುವವರು ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ. ಬೇರೆಯವರಿಗೆ ಇಂಥ ಆಲೋಚನೆ ಬರುವುದಿಲ್ಲ.
ನಾವು ಭಾವನೆ ಮೇಲೆ ರಾಜಕಾರಣ ಮಾಡೋದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. 1 ಕೋಟಿ 22 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಕೊಡುತ್ತಿದ್ದೇವೆ. ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಟ್ಟಿರುವುದರಿಂದ ಅವರ ಆರ್ಥಿಕ ಸಾಮರ್ಥ್ಯ ಹೆಚ್ಚಾಗಿದೆ. ಇಂಥ ಜನಪರ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದು, ಇ-ಖಾತೆ, ಭೂಮಿ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಹೇಳಿದರು.

ಚಿತ್ರಮಂದಿರಕ್ಕೆ ಇಂದಿರಾ ಹೆಸರು ಇಟ್ಟಿದ್ದೆ

“ಯುವ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದೆವು. ರೈಲು ದೊಡ್ಡಬಳ್ಳಾಪುರದ ತನಕ ಹೋಗಿ ಸ್ಥಗಿತಗೊಂಡಿತು. ಆಗ ತಿಳಿಯಿತು ಇಂದಿರಾಗಾಂಧಿ ಅವರ ಹತ್ಯೆಯಾಗಿದೆ ಎಂದು. ನಂತರ ಗಲಾಟೆ ಶುರುವಾಯಿತು. ಒಂದಷ್ಟು ದಿನಗಳ ಹಿಂದೆಯಷ್ಟೇ ನನ್ನ ಚಿತ್ರಮಂದಿರ ಲೈಸೆನ್ಸಿಗೆ ಅರ್ಜಿ ಸಲ್ಲಿಸಿದ್ದೆ. ಅಂದಿನ ಜಿಲ್ಲಾಧಿಕಾರಿ ಪುಟ್ಟರಂಗಪ್ಪ ಅವರ ಬಳಿ ಲೈಸೆನ್ಸ್ ಗೆ ಮನವಿ ಮಾಡಿದ್ದೆ. ಅವರು ಇಂದಿರಾಗಾಂಧಿ ಎಂದು ಹೆಸರಿಡಿ ಎಂದು ಸಲಹೆ ನೀಡಿದರು. ನಾನು ಇಂದಿರಾ ಚಿತ್ರಮಂದಿರ ಅಂತ ನಾಮಕರಣ ಮಾಡಿದ್ದೇ. ಹೀಗೆ ನನ್ನ ಕಾಂಗ್ರೆಸ್ ನಂಟು ಆಗಲೇ ಇತ್ತು. ಆವತ್ತು ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟೀಕರಣ ಮಾಡಿದ್ದರಿಂದ ಇಂದು ಮನೆ ಬಾಗಿಲಿಗೆ ಬಂದು ಬ್ಯಾಂಕ್ ನವರು ಸಾಲ ನೀಡುತ್ತಿದ್ದಾರೆ. ಅಂದು ರಾಜೀವ್ ಗಾಂಧಿ ಅವರು ತಂತ್ರಜ್ಞಾನ ಕ್ರಾಂತಿ ಮಾಡಿದ್ದರಿಂದ ಇಂದು ನಾವು ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಬಳಸುತ್ತಿದ್ದೇವೆ” ಎಂದು ನೆನಪಿಸಿಕೊಂಡರು.

Related Articles

Back to top button