ಅಸಮಾಧಾನಕ್ಕೆ ಕಾರಣವಾಗುತ್ತಾ ಸೀಕ್ರೆಟ್ ಮೀಟಿಂಗ್?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನ ಪರಿಷತ್ ಚುನಾವಣೆಗೆ 3 ದಿನಗಳಿರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಮೂವರು ಮುಖಂಡರೊಂದಿಗೆ ಗುಪ್ತ ಸಭೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಲಖನ್ ಜಾರಕಿಹೊಳಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಬಿಜೆಪಿಗೆ ಹಿನ್ನಡೆಯುಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೊಮ್ಮಾಯಿ ಈ ಸಭೆ ನಡೆಸಿದ್ದಾರೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ, ಸಚಿವ ಉಮೇಶ ಕತ್ತಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಜೊತೆಗೆ ಬೊಮ್ಮಾಯಿ ಸೀಕ್ರೆಟ್ ಮೀಟಿಂಗ್ ನಡೆಸಿದ್ದಾರೆ. ಈ ಮೂವರೂ ಬೆಳಗಾವಿ ಬಿಜೆಪಿಯಲ್ಲಿ ಮೂರು ದಿಕ್ಕುಗಳೆಂದೇ ಪರಿಗಣಿಸಲಾಗುತ್ತಿದೆ. ಇದರಿಂದಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯುಂಟಾಗಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ಬೊಮ್ಮಾಯಿ ಈ ಸಭೆ ನಡೆಸಿದ್ದಾರೆ.
ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಿರುವುದು ಬಿಜೆಪಿಯಲ್ಲಿ ದೊಡ್ಡ ಕಂದಕವನ್ನೇ ನಿರ್ಮಾಣ ಮಾಡಿದೆ. ಅನೇಕ ಮುಖಂಡರು ಪ್ರಚಾರ ಕಾರ್ಯದಿಂದಲೇ ದೂರ ಉಳಿದಿದ್ದಾರೆ. ಹೈಕಮಾಂಡ್ ಈಗಾಗಲೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಹಲವು ಬಾರಿ ಸೂಚನೆಯನ್ನೂ ನೀಡಿದೆ. ಇದೀಗ ಸಿಎಂ ಸಭೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಒಟ್ಟಾರೆ, ಚುನಾವಣೆಗೆ 3 ದಿನಗಳಿರುವಾಗ ಎಲ್ಲವನ್ನೂ ಸರಿಪಡಿಸುವ ಪ್ರಯತ್ನವನ್ನು ಬೊಮ್ಮಾಯಿ ಮಾಡಿದ್ದಾರೆ. ಆದರೆ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಹೊರಗಿಡಲಾಗಿದ್ದು, ಕೇವಲ ಮೂವರು ಮುಖಂಡರೊಂದಿಗೆ ಸಿಎಂ ಚರ್ಚಿಸಿರುವುದು ಪಕ್ಷದೊಳಗೆ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ನಾವು ಮಾಡುತ್ತಿರುವುದರಲ್ಲಿ ತಪ್ಪೇನಿದೆ? – ಸಿಎಂ ಎದುರೇ ಪ್ರಶ್ನಿಸಿದ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ