ಸೋಂಕುರಹಿತ ಹಳ್ಳಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ನಿರೀಕ್ಷೆಗೂ ಮೀರಿ ಹರಡಿದ್ದು, ಸದ್ಯಕ್ಕೆ ಸೋಂಕುಗಳ ತೀವ್ರತೆ ಕಡಿಮೆಯಾಗಿದೆ.
ಆದರೆ ಕೊವಿಡ್ ಸೋಂಕು ತಡೆಗಟ್ಟಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿನ ಸೋಂಕಿತರನ್ನು ಹೋಮ್ ಐಸೋಲೇಷನ್ ಬದಲಾಗಿ ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚನೆ ನೀಡಿದರು.
ಕೋವಿಡ್ ಸೋಂಕು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಬೆಳಗಾವಿ ಸೇರಿದಂತೆ ಐದು ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರ ಜತೆ ಶನಿವಾರ (ಮೇ 29) ಅವರು ವಿಡಿಯೋ ಸಂವಾದದ ಮೂಲಕ ಚರ್ಚೆ ನಡೆಸಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯ ಔಷಧಿ ಸಮರ್ಪಕವಾಗಿ ಹಂಚಿಕೆಯಾಗಬೇಕು. ಇದುವರೆಗೆ ಸೋಂಕು ಕಂಡುಬರದ ಹಳ್ಳಿಗಳ ಮೇಲೆ ಇನ್ನಷ್ಟು ನಿಗಾ ವಹಿಸಿ, ಸೋಂಕು ಬರದಂತೆ ಎಚ್ಚರಿಕೆಯನ್ನು ವಹಿಸಬೇಕು ಎಂದು ಸೂಚನೆ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ವೇತನಾನುದಾನ ಬಿಡುಗಡೆ ಮಾಡಲಾಗಿದೆ.
ಸಾವಿರ ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ವೈದ್ಯರ ನಿಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬೆಳಗಾವಿಯಿಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.
ಲಕ್ಷ್ಮಿ ಹೆಬ್ಬಾಳಕರ್ ಆಗ್ರಹ
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವೈದ್ಯರ ನಡೆ ಹಳ್ಳಿ ಕಡೆ ಎಂದು ಸರಕಾರ ಘೋಷಿಸಿದೆ. ಆದರೆ ವೈದ್ಯರ ಸಂಖ್ಯೆ ಕೊರತೆಯಿದೆ. ಆದ್ದರಿಂದ ಕೂಡಲೇ ವೈದ್ಯರ ನೇಮಕಾತಿ ಮಾಡಬೇಕು. ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳ ವೇತನ ನೀಡಿರುವುದಿಲ್ಲ. ವೇತನ ಪಾವತಿಸಿ ಅವರಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಲಸಿಕಾಕರಣ ಮತ್ತು ಮಾದರಿ ಪರೀಕ್ಷೆಗೆ ಇನ್ನಷ್ಟು ಆದ್ಯತೆ ನೀಡಬೇಕಿದೆ ಎಂದು ಹೆಬ್ಬಾಳಕರ್ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಈಗಾಗಲೇ ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಭಯ ಪಾಟೀಲ್ ಪ್ರಶ್ನೆ
ಬಿಮ್ಸ್ ಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ವಿನಾಯಿತಿ ನೀಡಿರುವುದಿಲ್ಲ. ಆದ್ದರಿಂದ ಕೆಲಸ ಆರಂಭಿಸುವುದು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಅಭಯ್ ಪಾಟೀಲ ಅವರು, ತುರ್ತು ಸಂದರ್ಭದಲ್ಲಿ ಸಿಗಬೇಕಾದ ಸೌಲಭ್ಯ ಸಿಗದಿದ್ದರೆ ಅನುದಾನ ಬಿಡುಗಡೆಯ ಪ್ರಯೋಜನ ಏನು ಎಂದು ಪ್ರಶ್ನಿಸಿದರು.
ರಾಜ್ಯಮಟ್ಟದಲ್ಲಿ ಟೆಂಡರ್ ಮಾಡುವ ಬದಲು ಜಿಲ್ಲಾಮಟ್ಟದಲ್ಲಿ ಟೆಂಡರ್ ಗೆ ಅವಕಾಶ ನೀಡಬೇಕು ಎಂದು ಶಾಸಕ ಅಭಯ್ ಪಾಟೀಲ ಒತ್ತಾಯಿಸಿದರು.
ಚಿಕ್ಕೋಡಿ ಭಾಗದಲ್ಲಿ ಇನ್ನೊಂದು ಕೋವಿಡ್ ಮಾದರಿ ಪರೀಕ್ಷೆಗೆ ಪ್ರಯೋಗಾಲಯ ಆರಂಭಿಸಬೇಕು.
ಬಿಮ್ಸ್ ನಲ್ಲಿ 800 ಬೆಡ್ ಇದ್ದರೂ ಆಕ್ಸಿಜನ್ ಸಂಗ್ರಹಣೆಗೆ ಅವಕಾಶ ಇಲ್ಲದಿರುವುದರಿಂದ 300 ಬೆಡ್ ಗಳಿಗೆ ಮಾತ್ರ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ಸ್ಥಳೀಯವಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಅವಕಾಶ ನೀಡಬೇಕು ಎಂದು ಅಭಯ್ ಪಾಟೀಲ್ ಒತ್ತಾಯಿಸಿದರು.
ವೈದ್ಯರ ಕೊರತೆ ಇರುವುದರಿಂದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳನ್ನು ಕೂಡ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಮತಿಯನ್ನು ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
ದೊಡ್ಡಗೌಡರ್ ಮನವಿ
ಅವಶ್ಯಕತೆಗೆ ಅನುಗುಣವಾಗಿ ಔಷಧಿ ಪೂರೈಕೆ ಮಾಡಬೇಕು. ರ್ಯಾಟ್ ಪ್ರಮಾಣ ಹೆಚ್ಚಿಸಬೇಕು; ಸಿಬ್ಬಂದಿ ಕೊರತೆ ನೀಗಿಸಬೇಕು. ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ವೆಚ್ಚ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡ್ರ ಮನವಿ ಮಾಡಿಕೊಂಡರು.
ಕೋವಿಡ್ ಬಳಿಕ ನೂತನ ಕಿತ್ತೂರು ತಾಲ್ಲೂಕಿನಲ್ಲಿ ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪಿಸಬೇಕು ಎಂದು ದೊಡ್ಡಗೌಡ್ರ ಆಗ್ರಹಿಸಿದರು.
ಕೋವಿಡ್ ಪರೀಕ್ಷಾ ವರದಿ ವಿಳಂಬವಾಗುತ್ತಿದ್ದು, ತಕ್ಷಣವೇ ವರದಿ ನೀಡಲು ಕ್ರಮ ಕೈಗೊಳ್ಳಬೇಕು.
ಆಶಾ ಕಾರ್ಯಕರ್ತರಂತೆ ಅಂಗನವಾಡಿ ಕಾರ್ಯಕರ್ತೆಯರನ್ನು ಕೂಡ ಕೊರೊನಾ ವಾರಿಯರ್ಸ್ ಎಂದು ಘೋಷಿಸಬೇಕು ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮನವಿ ಮಾಡಿಕೊಂಡರು.
ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಲಭ್ಯವಿಲ್ಲ; ಆದ್ದರಿಂದ ವೈದ್ಯರ ಕೊರತೆ ನೀಗಿಸಬೇಕು ಎಂದು ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಕುಡಚಿಗೆ ಆಕ್ಸಿಜನ್ ಘಟಕ
ವಿಶೇಷ ಪ್ರಕರಣ ಎಂದು ಪರಿಗಣಿಸಿ ಕುಡಚಿ ಮತಕ್ಷೇತ್ರಕ್ಕೆ ಆಕ್ಸಿಜನ್ ಘಟಕ ಮಂಜೂರು ಮಾಡಬೇಕು ಎಂದು ಶಾಸಕ ಪಿ.ರಾಜೀವ್ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಕೋವಿಡ್ ಪರೀಕ್ಷೆ ವರದಿ ವಿಳಂಬವಾಗುತ್ತಿರುವುದರಿಂದ ಗೋಕಾಕ ಹಾಗೂ ಚಿಕ್ಕೋಡಿಯಲ್ಲಿ ಪ್ರಯೋಗಾಲಯ ಆರಂಭಿಸಬೇಕು ಎಂದು ಕೋರಿದರು.
ವೆಂಟಿಲೇಟರ್ ಇದ್ದರೂ ವೈದ್ಯರ ಕೊರತೆ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಗಮನ ಸೆಳೆದರು.
ಮುನವಳ್ಳಿ ಮತ್ತು ಯರಗಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು.
ಛಾಯಾಗ್ರಾಹಕರು, ಪತ್ರಕರ್ತರಿಗೂ ಆರ್ಥಿಕ ನೆರವು ಘೋಷಿಸಬೇಕು ಎಂದರು.
ಸರಕಾರ ಹಾಗೂ ಜಿಲ್ಲಾಡಳಿತದಿಂದ ಉತ್ತಮ ಕೆಲಸವಾಗುತ್ತಿದೆ. ಬ್ಲ್ಯಾಕ್ ಫಂಗಸ್ ಔಷಧಿ ಪೂರೈಕೆ ಮಾಡಬೇಕು ಎಂದು ಸಂಸದರಾದ ಮಂಗಲಾ ಅಂಗಡಿ ಕೇಳಿದರು.
ಬಿಮ್ಸ್ ಆವರಣದಲ್ಲಿ ನಿರ್ಮಿಸಲು ಉದ್ಧೇಶಿಸಲಾಗಿರುವ ಆಕ್ಸಿಜನ್ ಘಟಕಗಳನ್ನು ತಕ್ಷಣವೇ ಆರಂಭಿಸಬೇಕು. ಅಗತ್ಯವಿರುವ ಆಕ್ಸಿಜನ್ ಸಮರ್ಪಕವಾಗಿ ಪೂರೈಸಬೇಕು ಎಂದು ಶಾಸಕ ಅನಿಲ್ ಬೆನಕೆ ಒತ್ತಾಯಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ