ಮುಖ್ಯಮಂತ್ರಿಗೆ ಮುಗ್ದ ಕಂದಮ್ಮನ ಶವದ ಸ್ವಾಗತ
ಇಂದು ಇದೇ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಸಿಎಂ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿ, ರಾಮದುರ್ಗ –
ಉತ್ತರ ಕರ್ನಾಟಕಕ್ಕೆ ಪ್ರವಾಹ ಅಪ್ಪಳಿಸಿ ತಿಂಗಳಾಗುತ್ತ ಬಂದಿದೆ. ದೊಡ್ಡ ದೊಡ್ಡ ಮಂತ್ರಿ ಮಹೋದಯರೆಲ್ಲ ಬಂದು ಹೋಗಿದ್ದಾರೆ. ಒಬ್ಬರ ಮೇಲೆ ಒಬ್ಬರು ಮೆರವಣಿಗೆ ರೂಪದಲ್ಲಿ ಆಗಮಿಸಿದ್ದಾರೆ. ಕೇಂದ್ರಕ್ಕೂ ನಿಯೋಗದ ಮೇಲೆ ನಿಯೋಗ ಹೋಗಿ ಬಂದಿದೆ.
ಇಂದು ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯರಪ್ಪ ನಾಲ್ಕನೇ ಬಾರಿಗೆ ಆಗಮಿಸುತ್ತಿದ್ದಾರೆ. ಭರವಸೆಯ ಮೇಲೆ ಭರವಸೆ ಕೊಡುತ್ತಿದ್ದಾರೆ. ಆದರೆ ಪರಿಸ್ಥಿತಿ ಮಾತ್ರ ಸ್ವಲ್ಪವೂ ಸುಧಾರಣೆ ಕಂಡಿಲ್ಲ. ಪ್ರವಾಹ ಸಂತ್ರಸ್ತರ ಕಣ್ಣೀರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಹೊತ್ತಿನ ಊಟಕ್ಕೂ ಗತಿ ಇಲ್ಲ, ಔಷಧೋಪಚಾರ ವ್ಯವಸ್ಥೆ ಇಲ್ಲ.
ಖಾಸಗಿ ಪರಿಹಾರ ಕಂಡವರ ಪಾಲಾಗುತ್ತಿದೆ ಎನ್ನುವ ಆರೋಪ ಬಲವಾಗಿದೆ. ನಿಜವಾದ ಸಂತ್ರಸ್ತರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಸರಕಾರದಿಂದ ಹಣವೂ ಬರುತ್ತಿಲ್ಲ. ಅಧಿಕಾರಿಗಳೂ ಅಸಹಾಯಕರಾಗಿದ್ದಾರೆ.
ಇದನ್ನೂ ಓದಿ – ಬೆಳಗಾವಿಗೆ ಮಂಗಳವಾರ ಯಡಿಯೂರಪ್ಪ
ಕಂದಮ್ಮ ಸಾವು
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಗ್ರಾಮದ ಪರಿಹಾರ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಇಲ್ಲದ್ದರಿಂದ ಜ್ವರದಿಂದ ಬಾಲಕನೋರ್ವ ಸಾವಿಗೀಡಾಗಿದ್ದಾನೆ.
ಹಿರೇಹಂಪಿಹೊಳಿ ಗ್ರಾಮದ ಬಾಲಕ ಅಬ್ದುಲ್ ಸಾಬ್ ಮುಲ್ಲಾನವರ (4) ಮೃತನಾದ ಬಾಲಕ. ಅಬ್ದುಲ್ ಸಾಬ್ ಕುಟುಂಬ ಎಪಿಎಂಸಿ ಗೊಡೌನ್ ನಲ್ಲಿ ವಾಸ್ತವ್ಯ ಹೂಡಿದೆ. ಎರಡು ದಿನಗಳಿಂದ ಸೊಳ್ಳೆಗಳು ಕಡಿದು ಜ್ವರದಿಂದ ಬಳಲುತ್ತಿದ್ದ ಬಾಲಕ ಇಂದು ಮುಂಜಾನೆ ಸಾವಿಗೀಡಾಗಿದ್ದಾನೆ. ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ತಾಲೂಕು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಲಾಗಿತ್ತು.
ಕಳೆದ ರಾತ್ರಿ ವಿಪರೀತ ಜ್ವರದಿಂದ ಬಳಲುತ್ತಿದ್ದ ಬಾಲಕ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದೆ.
ಸರಕಾರದ ಪರಿಹಾರಗಳೆಲ್ಲ ಕೇವಲ ಮಾತಿನಲ್ಲೇ ಇದೆ ಎನ್ನುವ ಆರೋಪ ಕೇಳಿಬರುತ್ತಿದೆ. ದಿನದಿಂದ ದಿನಕ್ಕೆ ಪರಿಹಾರ ಕೇಂದ್ರಗಳ ಹಾಗೂ ಸಂತ್ರಸ್ತರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಚಿಕ್ಕ ಚಿಕ್ಕ ಮಕ್ಕಳೂ ಬಿಸ್ಕಿಟ್, ನೀರು ಕುಡಿದು ಬದುಕುತ್ತಿದ್ದಾರೆ.
ಇಂದು ಸಿಎಂ ಆಗಮನ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಗೆಂದು ಅವರು ಆಗಮಿಸುವರು.
ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಹೊರಟು 11.50ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ, ಅಲ್ಲಿಂದ ರಸ್ತೆಯ ಮೂಲಕ ಹೊರಟು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ಶಾಸಕರು, ಸಂಸದರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, 4.25ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ಸಾಗುವರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಮುಖ್ಯಮಂತ್ರಿಗಳಿಗೆ ಸಾಥ್ ನೀಡಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ