
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಐತಿಹಾಸಿಕ ಅಯೋಧ್ಯಾ ರಾಮ ಮಂದಿರ ಶಿಲಾನ್ಯಾಸಕ್ಕೆ ಇನ್ನೆರಡು ದಿನ ಮಾತ್ರ ಬಾಕಿಯಿದ್ದು, ಶುಭ ಸಂದರ್ಭಕ್ಕಾಗಿ ಅಯೋಧ್ಯೆ ಸಿಂಗಾರಗೊಂಡಿದೆ. ಕೊರೊನಾ ಭೀತಿ ನಡುವೆ ಇಡೀ ಅಯೋಧ್ಯೆಯಾದ್ಯಂತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.
ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಗಾಗಿ ರಾಮ ಮಂದಿರ ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ರಾಮನ ಮಂದಿರಕ್ಕಾಗಿ ಅಯೋಧ್ಯೆ ಭರ್ಜರಿಯಾಗಿ ಅಲಂಕೃತಗೊಂಡಿದೆ. ಭಾರೀ ಭದ್ರತೆಯನ್ನು ಸಹ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.
ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಕರ್ನಾಟಕದ ಎಂಟು ಮಹನೀಯರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಇಸ್ಕಾನ್ ನ ಮಧುಪಂಡಿತ ದಾಸ್, ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ, ಚಿತ್ರದುರ್ಗದ ಮಾದಾರ, ಚೆನ್ನಯ್ಯ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಮಠದ ಶ್ರೀಗಳು, ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.