
ಪ್ರಗತಿವಾಹಿನಿ ಸುದ್ದಿ; ಮೈಸೂರು: ನಾವು ಎಲ್ಲ ಜಾತಿ, ಎಲ್ಲಾ ಧರ್ಮದವರಿಗೆ ಮಾತ್ರವಲ್ಲ ಎಲ್ಲಾ ಪಕ್ಷದವರಿಗೂ ಅನುಕೂಲ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಿಜೆಪಿಯವರು ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು 10 ಕೆಜಿ ಅಕ್ಕಿ ಪಡೆಯುತ್ತಿಲ್ಲವಾ ? ಬಿಜೆಪಿಯವರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿಲ್ಲವೇ ? ಬಿಜೆಪಿಯವರು ಗೃಹಜ್ಯೋತಿ, ಗೃಹಲಕ್ಷ್ಮಿ ಯ ಹಣ ಪಡೆಯುತ್ತಿಲ್ಲವೇ ? ನಮ್ಮ ಗ್ಯಾರಂಟಿ ಸ್ಕೀಂ ಗಳ ಲಾಭ ಪಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಸುಳ್ಳು ಹೇಳುವವರ, ನಮ್ಮ ಸರ್ಕಾರದ ಲಾಭ ಪಡೆದೂ ನಕ್ರಾ ಆಡುವವರ ಜತೆ ಹೋಗಬೇಡಿ ಎಂದರು.
ಉಡುಪು ಅವರವರ ಇಷ್ಟ:
ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದೀನಿ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ತಿಳಿಸಿದರು.