Kannada NewsKarnataka NewsLatest

ಸಹಕಾರ ಸಂಘಗಳಿಂದ ಗ್ರಾಮೀಣ ಜನರ ಆರ್ಥಿಕತೆಯಲ್ಲಿ ಸುಧಾರಣೆ : ಈರಣ್ಣ ಕಡಾಡಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಜನರ ಆರ್ಥಿಕ ಸಮಸ್ಯೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ಸಂಘಗಳು ಪ್ರಾರಂಭವಾಗಿವೆ. ರೈತಾಪಿ ವರ್ಗದವರಿಗೆ ಸಾಲ ವಿತರಣೆಯ ಮೂಲಕ ನೆರವು ನೀಡಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಸಹಕಾರ ಸಂಘಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಿಳಿಸಿದರು.
ಬೆಳಗಾವಿಯ ಆಟೋ ನಗರದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ. ಬೆಂಗಳೂರು ಇದರ ಪ್ರಾಂತೀಯ ಕಚೇರಿಯ ಕೆ. ಎಚ್. ಪಾಟೀಲ ಸಭಾಂಗಣದಲ್ಲಿ ಬುಧವಾರ (ನ.16) ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರ ಭಾರತದ ಆರ್ಥಿಕತೆಯಲ್ಲಿ ಸಹಕಾರ ವಲಯದ ಮಹತ್ವ ಅರಿತು, ಸಹಕಾರ ವಲಯಕ್ಕೆ ಗೌರವ ನೀಡುವ ಸಲುವಾಗಿ 1953 ರಲ್ಲಿ ಪ್ರತಿ ವರ್ಷ ನವಂಬರ್ 14 ರಿಂದ 20, ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು ಸುಮಾರು 50000 ಕ್ಕಿಂತ ಅಧಿಕ ವಿವಿಧ ರೀತಿಯ ಸಹಕಾರ ಸಂಘಗಳು ಹಾಗೂ 5400 ಕ್ಕಿಂತ ಹೆಚ್ಚು ಸೌಹಾರ್ದ ಸಹಕಾರಿಗಳು ಕೆಲಸ ನಿರ್ವಹಿಸುತ್ತಿವೆ. ಸಹಕಾರ ಸಂಘಗಳು ಗ್ರಾಮೀಣ ಮಟ್ಟದ ರೈತರ, ಕೂಲಿ ಕಾರ್ಮಿಕರ, ಬಡತನ ರೇಖೆಗಿಂತ ಕೆಳಗಿನವರಿಗೆ ಆರ್ಥಿಕ ಸೌಲಭ್ಯಗಳಿಗೆ ನೀಡುತ್ತಿವೆ ಎಂದು ಹೇಳಿದರು.
ವಸತಿ ಶಾಲೆ, ಆಸ್ಪತ್ರೆಗಳ ನಿರ್ವಹಣೆ: 
ಹಾಲು ಉತ್ಪಾದಕರಿಗೆ ಯೋಗ್ಯ ಬೆಲೆ ನೀಡಲು, ಹಾಲು ಸಂಗ್ರಹಿಸಲು ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ವಿಶಿಷ್ಟವಾದ ಹುಕ್ಕೇರಿ ತಾಲೂಕಿನ ಚಂದರಗಿಯ ಗ್ರಾಮೀಣ ವಿದ್ಯುತ್‌ ಸಹಕಾರ ಸಂಘ, ಘಟಪ್ರಭಾ ಸಹಕಾರಿ ಕ್ರೀಡಾ ವಸತಿ ಶಾಲೆ, ಬಿ.ಜಿ ಸಹಕಾರಿ ಆಸ್ಪತ್ರೆ ಇವುಗಳು ಸಹಕಾರ ಕ್ಷೇತ್ರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಹುಕ್ಕೇರಿ ಗ್ರಾಮೀಣ ವಿದ್ಯುತ್‌ಚ್ಛಕ್ತಿ ಸಹಕಾರ ಸಂಘ ನಿಯಮಿತದ ಹುಕ್ಕೇರಿ ಸಂಸ್ಥೆಯು ರೂ. 9.31 ಕೋಟಿ ಷೇರು ಬಂಡವಾಳವು ಮತ್ತು ರೂ. 19.64 ಕೋಟಿ ದುಡಿಯುವ ಬಂಡವಾಳದೊಂದಿಗೆ ಹುಕ್ಕೇರಿ ತಾಲೂಕಿನ 123 ಗ್ರಾಮಗಳು ವಿದ್ಯುತ್‌ಚ್ಛಕ್ತಿ ವಿತರಣೆ ಮಾಡುತ್ತ ಹೆಸ್ಕಾಂ ಸಂಸ್ಥೆಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸತ್ತಿದೆ ಎಂದು ತಿಳಿಸಿದರು.
ಸಹಕಾರ ವಲಯದಲ್ಲಿ ಕ್ರೀಡಾ ಉತ್ತೇಜನ: 
ಚಂದರಗಿಯ ಅಭಿವೃದ್ಧಿ ಸಹಕಾರ ಸಂಘ ಕ್ರೀಡಾ ಉತ್ತೇಜನ ನೀಡುತ್ತಿದ್ದು, ವಸತಿ ಕ್ರೀಡಾ ಶಾಲೆಯನ್ನು ಹೊಂದಿ, 590 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಸೌಲಭ್ಯಗಳನ್ನು ಒದಗಿಸುತ್ತಿದೆ. 6 ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ. ಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಾಲೆಯನ್ನು ನಡೆಸುತ್ತಿವೆ ಎಂದು ಹೇಳಿದರು.

ಇಡೀ ದೇಶದಾದ್ಯಂತ ಒಂದೇ ಮಾದರಿಯಲ್ಲಿ ಲೆಕ್ಕ ಪತ್ರ ವ್ಯವಹಾರಗಳು ಸಹಕಾರ ಸಂಘಗಳಲ್ಲಿ ನಡೆದಿವೆ.
ಒಟ್ಟು 33 ಲಕ್ಷ ಜನರಿಗೆ ಈಗಾಗಲೇ ಸಾಲ ವಿತರಣೆ ಮಾಡಲಾಗಿದೆ.ಇನ್ನೂ 3 ಲಕ್ಷ ಹೊಸ ರೈತರಿಗೆ ಸಾಲ ವಿತರಣೆಗೆ ಮಾಡಲು ಸೂಚನೆ ನೀಡಲಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಿಳಿಸಿದರು.
ಪ್ರತಿ ತಾಲೂಕಿನಲ್ಲಿ ನಿರ್ದೇಶಕರನ್ನು ನೇಮಿಸಿ:
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು, ಪ್ರತಿ ತಾಲೂಕಿಗೆ ಒಬ್ಬ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳಬೇಕು. ತಾಲೂಕಾ ಮಟ್ಟದಲ್ಲಿ ಸಹಕಾರ ಸಂಘಗಳ ಸಾಲ ಸೌಲಭ್ಯ ಪ್ರತಿ ರೈತನಿಗೂ ದೊರೆಯಬೇಕು. ಅರ್ಹರು ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಅವರು ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ ಪ್ರದಾನ:  ಪಟ್ಟಣ ಸಹಕಾರ ಬ್ಯಾಂಕುಗಳ ವಾರ್ತಾ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿ ಬಾಗಲಕೋಟೆ ವಿಜಯಪುರ ಜಿಲ್ಲೆಗಳಲ್ಲಿ ಆಯ್ಕೆ ಮಾಡಲಾದ ಶ್ರೇಷ್ಠ ಸಹಕಾರಿಗಳಿಗೆ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಳಗಾವಿ ಜಿಲ್ಲೆಯಿಂದ ಅರವಿಂದ ಪಾಟೀಲ, ಆಶಾ ಪ್ರಭಾಕರ ಕೋರೆ, ಕುಮಾರ ಬದನೆಕಾಯಿ, ಮಲ್ಲಿಕಾರ್ಜುನ್ ಚುನಮರಿ, ಅನೀಲ ಪಾಟೀಲ, ಬಾಗಲಕೋಟೆ ಜಿಲ್ಲೆಯ ಚಂದ್ರಶೇಖರ ಜಿಗಜಿನ್ನಿ, ಅರವಿಂದ ಮಂಗಳೂರು, ವಿಜಯಪುರ ಜಿಲ್ಲೆಯಿಂದ ವಿಠ್ಠಲಸಿಂಗ ಅಮರಸಿಂಗ್ ಹಜೇರಿ, ಮಲ್ಲಮ್ಮ ಯಾಳವಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನೀಲ ಬೆನಕೆ, ಬೆಳಗಾವಿ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ಅಧ್ಯಕ್ಷರಾದ ರಮೇಶ್ ಕತ್ತಿ, ಕರ್ನಾಟಕ ಸಹಕಾರ ಮಂಡಳ ಉಪಾಧ್ಯಕ್ಷರಾದ ಜಗದೀಶ್ ಕವಟಗಿಮಠ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಬ್ಯಾಂಕುಗಳ ಮಹಾಮಂಡಳ ನಿರ್ದೇಶಕರಾದ ಡಿ. ಟಿ. ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button