ಪ್ರೊ. ಜಿ. ಎಚ್. ಹನ್ನೆರಡುಮಠ
ಹೌದು….ಕಿಸೆಯಲ್ಲಿ ಕಾಸಿದ್ದರೆ ಇನ್ನುಮೇಲೆ ಚಂದ್ರನಲ್ಲಿ “ಹನಿಮೂನ್”…. ಮಂಗಳನಲ್ಲಿ “ನಿವೃತ್ತಿ ಜೀವನ” ! ವಿಜ್ಞಾನಿಗಳಿಂದ ಎಂಥಾ ಅದ್ಭುತವಾದ ಕೊಡುಗೆ !!
ಯಾಕೆ ಗೊತ್ತೆ ?…. ಪೃಥ್ವಿಯಲ್ಲಿ ಮದುವೆಯಾದರೆ ಅತ್ತೇಕಾಟ…. ನಿವೃತ್ತಿಯಾದರೆ ಹೆಂಡತಿಯ ಲತ್ತೇ ಕಾಟ ! ಚಂದ್ರನಲ್ಲಿ ಅತ್ತೆ ಇಲ್ಲ…. ಮಂಗಳನಲ್ಲಿ ಮಡದಿಯ ಲತ್ತೆ ಇಲ್ಲ ! “ಹೆಂಡತೀ ನೀ ಜೀವ ಹಿಂಡುತೀ…. ನಿನ್ನ ಚಿತ್ತಾರ ಚದುರಂಗದಾಟವೇ ಇಲ್ಲ !!”
ಹಾಂ…. ಇನ್ನೊಂದು ಸುದ್ದಿ…. ಹೆಂಡತಿಯಿಂದ ಹೆಂಡತಿ ಬದಲಾಯಿಸುವುದು ಸಣ್ಣ ತಪ್ಪು! ದೇವರಿಂದ ದೇವರನ್ನು ಬದಲಾಯಿಸುವುದು ಅತಿ ಸಣ್ಣ ತಪ್ಪು ! ಧರ್ಮದಿಂದ ಧರ್ಮ ಬದಲಾಯಿಸುವದು ಅದಕ್ಕೂ ಸಣ್ಣ ತಪ್ಪು ! ಆದರೆ ಸಾವಿರ-ಸಾವಿರ ಮತದಾರರ ಕಣ್ಣಲ್ಲಿ ಕೇರೆಣ್ಣಿ ಸುರುವಿ…. ಎಂಥಾ ಘೋರ ತಪ್ಪು ಮಾಡಿದರೂ ಒಪ್ಪು! ಹಗರಣಗಳ ಹಬ್ಬವಾದ ಇಂದಿನ ಮುದ್ದುರಾಜಕಾರಣದಲ್ಲಿ ಎಲ್ಲವೂ ಚಂದ್ರಪಯಣ! ಚಲುವೆಯೊಂದಿಗೆ ಚಾರಣ!
ಈ ಅಪರಾಧಕ್ಕೆ ಈ ಭೂಲೋಕದಲ್ಲಿ ಸರಿಯಾದ ಕೋರ್ಟು-ಕಾನೂನು ಇಲ್ಲವೇ ಇಲ್ಲ. ಈ ಕುಲಾಂತರಿಗಳನ್ನು ನೇರವಾಗಿ ಶನಿಗ್ರಹಕ್ಕೆ ಕಳಿಸಿದರೆ ಹೇಗೆ ಅಂತೀರಿ ? ಪಾಪ…. ಆ ಶನಿದೇವನಿಗೂ ಈ ರಾಜಕೀಯ ಶನಿಗಳ ಕಾಟವೇ ? ಅವನೊಬ್ಬನನ್ನಾದರೂ ರಾಜಕೀಯ ಶನಿಮುಕ್ತ ಫ್ರೀಝೋನ್ ಮಾಡಬಾರದೇ ?
ಈ ಪ್ರಶ್ನೆ ಅಮೇರಿಕೆಯ ಪ್ರೆಸಿಡೆಂಟ್ ಟ್ರಂಪನಿಗೆ ಕೇಳಿನೋಡಿ. ಆತ ಏನು ರಂಪು ಹೇಳುತ್ತಾನೆ ಗೊತ್ತೇ ? “ಸಾರೀ…. ನಾನಿನ್ನೂ ಹುಡುಗ…. ಈ ಪ್ರಶ್ನೆ ಇಂಡಿಯಾದಲ್ಲೇ ಹಿರಿಯ ರಾಜಕೀಯ ಮುತ್ಸದ್ದಿಗಳಾದ ಕರ್ನಾಟಕದ ಗೌರವಾನ್ವಿತ ಮಂತ್ರಿಗಳಿಗೆ ಕೇಳಿಬಿಡಿ. ಅಮೇರಿಕೆಗೆ ಸಾಧ್ಯವಾಗದ್ದು ಕರ್ನಾಟಕದಲ್ಲಿ ಎಲ್ಲಾ ಸಾಧ್ಯ !”
ಹೌದು ! ಕನ್ನಡಿಗರು “ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್” ಅಂತ ನೃಪತುಂಗ ಡಿಕ್ಲೇರ ಮಾಡಿದ್ದಾನೆ. ಬಾದಾಮಿಯ ಕಪ್ಪೆ ಅರಭಟ್ಟನ ಶಿಲಾಶಾಸನದಲ್ಲಿ ಕನ್ನಡಿಗರು “ಸಾಧೂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ…. ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್….” ಅಂತ ಕನ್ನಡಿಗರ ನೇಮಪ್ಲೇಟ್ ಕೆತ್ತಿದ್ದಾನೆ. ಕಪ್ಪೆ ಅರಭಟ್ಟ ಶಿಲಾಶಾಸನ ಕೆತ್ತುವ ಕಾಲಕ್ಕೆ ಉಳಿ ಮುರಿಯಿತೋ ಏನೊ ? ಬಹುಶಃ…. “ಬಾಧಿಪ್ಪ ಕಲಿಗೆ ಹಗರಣ ವಿಪರೀತನ್….” ಅಂತ ಆತ ಇನ್ನೊಂದು ಸಾಲು ಕೆತ್ತಲು ಹೋದ ! ಆದರೆ….”ಉಳಿ ಮುಟ್ಟಿದ ಲಿಂಗವ ಮನಮುಟ್ಟಬಲ್ಲುದೇ ?”…. ಎಂಬ ಅಲ್ಲಮ ಪ್ರಭುಗಳ ಮಾತು ಕೇಳಿ ಉಳಿ ಕೆಳಗಿಟ್ಟ !!
ಚಂದ್ರನಲ್ಲಿ ಹನಿಮೂನ !
ಮುಂದೆ ಆ ಚಂದ್ರನೂ ಬೆಂಗಳೂರಿನಂತೆ ಹಾರಿಬಲ್ ಝೋನ್ ಆದಾನು !
ಮಂಗಳನಲ್ಲಿ ನಿವೃತ್ತಿ ಜೀವನ! ಇದು ಸಾಧ್ಯವೇ ?…. ಯಾಕೆಂದರೆ ನಿವೃತ್ತಿಯಾದ ನಂತರವೂ ಪ್ರವೃತ್ತಿಯಲ್ಲಿ ಬಂದು ಮಕ್ಕಳನ್ನು ಹಡೆದವರು ಎಷ್ಟಿಲ್ಲ ಹೇಳಿ ? ಎಪ್ಪತ್ತರ ಕಪ್ಪತ್ತಗುಡ್ಡ ಏರಿದರೂ ತುಡುಗಿನಿಂದ ತುಪ್ಪಾ ತಿನ್ನುವದು ಬಿಡಲಿಲ್ಲ…. ಮಂಗಳನಲ್ಲೂ ….ನಿವೃತ್ತಿಯವರಿಗಾಗಿ ಒಂದು ನೂತನ ಮಿಲೇನಿಯಂ ಹೊಟೇಲ ನಿರ್ಮಾಣವಾದರೆ ಎಂಥಾ ಭೇಸಿ ಅಂತ!
ಇನ್ನು ಗುರುಗ್ರಹ ?
ಶಾಲೆಯಲ್ಲಿ ಕಲಿಸುವ ಗುರುಗಳೇ ಮುಗ್ಧ ಹುಡಿಗಿಯರ ಮೇಲೆ ಕೆಟ್ಟಕಣ್ಣಿನ ಗೂಗಿ ಕುಳ್ಳಿರಿಸುವ ಸುದ್ದಿಗಳು ಬೇಕಾದಷ್ಟು ಇವೆ. ಇವರನ್ನು ನೇರವಾಗಿ ಗುರುಗ್ರಹಕ್ಕೆ ಕಳಿಸಿದರೆ ಹೇಗೆ ? ಹೆಂಗೂ ಅಲ್ಲಿ ಸ್ಪೇಸ್ ಪ್ರಾಬ್ಲೆಮ್ಮಿಲ್ಲ. ಗುರುಗ್ರಹ ಘೋರಗ್ರಹ ಆದರೂ ಪರವಾಯಿಲ್ಲ.
ಹಾಂ ! ಹೊಸನೋಟುಗಳ ಸಾಕ್ಷಾತ್ಕಾರಕ್ಕಾಗಿ ಸಾವಿರ -ಲಕ್ಷ -ಕೋಟಿ ಖರ್ಚು ಮಾಡಿ ಯಜ್ಞ ಮಾಡುವವರ ಹಾವಳಿ ಈ ಶತಮಾನದಲ್ಲಿ ಅತೀ ಹೆಚ್ಚಾಗಿದೆ. ಈ ಅಗ್ನಿ ಪ್ರೀಯರನ್ನೆಲ್ಲ ದೇವರು ಅಗ್ನಿದೇವತೆಯಾದ ಸೂರ್ಯ ಗ್ರಹದಲ್ಲಿ ಇಟ್ಟರೆ ಹೇಗೆ ? ಓ…..ಹೌದು….. ಇದೇ ಭೇಸಿ… ಅಲ್ಲಿ ಅವರು ಕೋಲ್ಡ್ರಿಂಕ್ಸ ಕುಡಿಯುತ್ತ ಕುಂತರೆ ಎಂಥಾ ಖುಶಿ ಅಂತೀರಿ?
(ಲೇಖಕರು ಖ್ಯಾತ ಸಾಹಿತಿಗಳು.
ವಿಳಾಸ -# ೫ : “ಮಾವು ಮಲ್ಲಿಗೆ” : ಇಂದ್ರಪ್ರಸ್ಥ ಕಾಲೊನಿ : ಗೊಟ್ಟಿಗೆರೆ ಅಂಚೆ
ಬೆಂಗಳೂರ- ೫೬೦೦೮೩ / ದೂರವಾಣಿ-೯೯೪೫೭ ೦೧೧೦೮)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ