CrimeKannada NewsKarnataka NewsLatest

*ಚಿರತೆ ಕಾರ್ಯಾಚರಣೆ ವೇಳೆ ಗಲಾಟೆ*: *ಪಶುವೈದ್ಯಾಧಿಕಾರಿ ಮೇಲೆ ಹಲ್ಲೆ , 15 ಜನರ ವಿರುದ್ಧ FIR!*

ಪ್ರಗತಿವಾಹಿನಿ ಸುದ್ದಿ: ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಸಮೀಪ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಗಲಾಟೆ ನಡೆದಿದೆ. ಪಶುವೈದ್ಯಾಧಿಕಾರಿ ಡಾ. ಪ್ರಯಾಗ್ ಹೆಚ್.ಎಸ್. ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ 15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಿನ್ನೆ ಬೆಳಗಿನ ಜಾವ ಜ್ಞಾನಸಿರಿ ಕ್ಯಾಂಪಸ್ ಸಮೀಪದ ಗ್ರಾಮವೊಂದರ ಮನೆಗೆ ನುಗ್ಗಿದ್ದ ಚಿರತೆ ಕೋಳಿಯನ್ನು ಹಿಡಿದಿತ್ತು. ಬಳಿಕ ತೆಂಗಿನ ಮರವೇರಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಸ್ಥಳಕ್ಕೆ ಪಶುವೈದ್ಯಾಧಿಕಾರಿ ಡಾ. ಪ್ರಯಾಗ್ ಹೆಚ್.ಎಸ್. ಕೂಡ ಆಗಮಿಸಿದ್ದರು. ಆದರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ಚಿರತೆ ತಪ್ಪಿಸಿಕೊಂಡಿತ್ತು.

ಚಿರತೆ ಪರಾರಿಯಾಗುತ್ತಿದ್ದಂತೆ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿದೆ. ತಕ್ಷಣವೇ ಚಿರತೆಯನ್ನು ಸೆರೆ ಹಿಡಿಯುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದರೂ ಕೆಲವರು ಪಟ್ಟು ಹಿಡಿದು ವೈದ್ಯಾಧಿಕಾರಿ ಡಾ. ಪ್ರಯಾಗ್ ಅವರನ್ನು ಸುತ್ತುವರಿದಿದ್ದಾರೆ. ಚಿರತೆ ಹಿಡಿಯದಿದ್ದರೆ ಬಟ್ಟೆ ಬಿಚ್ಚಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಲ್ಲದೆ, ತಳ್ಳಾಟ ಮತ್ತು ನೂಕಾಟ ನಡೆಸಿ ಬೆನ್ನಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗ್ರಾಮಸ್ಥರು ವೈದ್ಯಾಧಿಕಾರಿಯನ್ನು ಸುತ್ತುವರಿದು ತಳ್ಳಾಟ ನಡೆಸಿದ ದೃಶ್ಯಗಳ ಆಧಾರದಲ್ಲಿ ಡಾ. ಪ್ರಯಾಗ್ ಪೊಲೀಸರಿಗೆ ದೂರು ನೀಡಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ಆಸ್ಪತ್ರೆಗೆ ತೆರಳುತ್ತಿದ್ದ ಇಲಾಖೆಯ ವಾಹನವನ್ನು ಅಡ್ಡಗಟ್ಟಿ ತಡೆಯಲಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಸದ್ಯ ಹೆಬ್ಬೂರು ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಗ್ರಾಮಸ್ಥರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ, ಚಿರತೆ ಇನ್ನೂ ಸೆರೆ ಸಿಗದಿರುವುದರಿಂದ ತಿಮ್ಮಸಂದ್ರ ಗ್ರಾಮ ಹಾಗೂ ಜ್ಞಾನಸಿರಿ ಕ್ಯಾಂಪಸ್ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮುಂದುವರಿದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button