ಜಾರಕಿಹೊಳಿ ಸಹೋದರರ ವಿರುದ್ಧ ಮುಖ್ಯಮಂತ್ರಿ ಬಳಿ ದೂರು: ಬೆಳಗಾವಿ ನಿಯೋಗಕ್ಕೆ ಮುಹೂರ್ತ ಫಿಕ್ಸ್
ಎಂ.ಕೆ.ಹೆಗಡೆ, ಬೆಳಗಾವಿ – ಭಾರೀ ಕುತೂಹಲಕರ ಬೆಳವಣಿಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಬೆಳಗಾವಿ ಸಚಿವರು, ಶಾಸಕರು, ಸಂಸದರು ಮತ್ತಿತರ ಮುಖಂಡರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಿದೆ.
ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಗೆ ಮುಹೂರ್ತ ಫಿಕ್ಸ ಆಗಿದೆ. ಅರಣ್ಯ ಸಚಿವ ಉಮೇಶ ಕತ್ತಿ ಈ ಭೇಟಿಗೆ ಮುಖ್ಯಮಂತ್ರಿಗಳಿಂದ ಸಮಯ ಪಡೆದಿದ್ದಾರೆ. ಮುಖ್ಯಮಂತ್ರಿಗಳ ಶುಕ್ರವಾರದ ಕಾರ್ಯಕ್ರಮ ಪಟ್ಟಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಬೆಳಗಾವಿ ಶಾಸಕರ ನಿಯೋಗದ ಭೇಟಿ ಎಂದು ನಮೂದಾಗಿದೆ. ಉಮೇಶ ಕತ್ತಿಯವರ ಹೆಸರು ಕೂಡ ಉಲ್ಲೇಖವಾಗಿದೆ.
ಈಚೆಗೆ ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನು ಹೊರಗಿಟ್ಟು ಸಚಿವ ಉಮೇಶ ಕತ್ತಿ ಅವರ ಮನೆಯಲ್ಲಿ ನಡೆದ ಬಿಜೆಪಿ ಮುಖಂಡರ ರಹಸ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿತ್ತು. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿತ್ತು.
ಕಳೆದ ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಮತ್ತು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಬಿಜೆಪಿ ವಿರುದ್ಧ ಕೆಲಸ ಮಾಡಿದ್ದಾರೆ. ವಿಶೇಷವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾಗಿದ್ದಾರೆ. ಹಲವಾರು ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲೂ ಬಿಜೆಪಿ ಸೋಲಿಸಿದ್ದಾರೆ.
ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎನ್ನುವುದು ಬಿಜೆಪಿ ಮುಖಂಡರ ದೂರು. ಇದನ್ನು ಮುಖ್ಯಮಂತ್ರಿಗಳ ಬಳಿ ಮುಖಂಡರು ನಿವೇದಿಸಲಿದ್ದಾರೆ.
ಸಚಿವ ಉಮೇಶ ಕತ್ತಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಜಿಲ್ಲೆೆಯ ಬಹುತೇಕ ಶಾಸಕರು ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ನಿಯೋಗದಲ್ಲಿರಲಿದ್ದಾರೆ. ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಪಾಲ್ಗೊಳ್ಳುವ ಸಾಧ್ಯತೆ ಇದೆ. ವಿಧಾನಪರಿಷತ್ ಚುನಾವಣೆಯಲ್ಲಿ ಪರಾಭಗೊಂಡಿರುವ ಮಹಾಂತೇಶ ಕವಟಗಿಮಠ ಅವರೂ ಭಾಗವಹಿಸುವರು. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ ಆಹ್ವಾನಿತರ ಪಟ್ಟಿಯಲ್ಲಿ ಇಲ್ಲ.
ಶುಕ್ರವಾರ ಬೆಂಗಳೂರಿನಲ್ಲಿ ಇರುವಂತೆ ಸಂಸದರು ಹಾಗೂ ಶಾಸಕರುಗಳಿಗೆ ಸೂಚನೆ ನೀಡಲಾಗಿದೆ.
ಇಲ್ಲೇ ಬಗೆಹರಿಸುವ ಮಾತನಾಡಿದ್ದ ಬಾಲಚಂದ್ರ ಜಾರಕಿಹೊಳಿ
ಬಿಜೆಪಿ ಮುಖಂಡರ ರಹಸ್ಯ ಸಭೆಗೆ ಯಾವುದೇ ಮಹತ್ವವಿಲ್ಲ ಎಂದು 2 ದಿನಗಳ ಹಿಂದೆ ಹೇಳಿದ್ದ ಬಾಲಚಂದ್ರ ಜಾರಕಿಹೊಳಿ, ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಗುರುವಾರ ಹೇಳಿದ್ದರು.
ಬೆಳಗಾವಿ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಇಲ್ಲೇ ಬಗೆಹರಿಸಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಗುರುವಾರವಷ್ಟೆ ಹೇಳಿಕೆ ನೀಡಿದ್ದರು. ಬೆಂಗಳೂರಿಗೆ ವಿವಾದವನ್ನು ಒಯ್ಯುವ ಅವಶ್ಯಕತೆ ಇಲ್ಲ. ಎಲ್ಲರೂ ಕುಳಿತು ಇಲ್ಲೇ ಮಾತುಕತೆಯ ಮೂಲಕ ಸರಿಪಡಿಸಲಾಗುವುದು ಎಂದು ಅವರು ಹೇಳಿದ್ದರು.
ಆದರೆ ಇದಕ್ಕೂ ಮುನ್ನವೇ ಮುಖ್ಯಮಂತ್ರಿಗಳ ಭೇಟಿಗೆ ಸಮಯಾವಕಾಶ ಪಡೆಯಲಾಗಿದೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಉಪಸ್ಥಿತಿ ಬಗ್ಗೆ ಮಾಹಿತಿ ದೊರಕಿಲ್ಲ.
ಈ ಮಧ್ಯೆ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಗುರುವಾರ ಮಾತನಾಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲಕ್ಷ್ಮಣ ಸವದಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಸಿವಕುಮಾರ ಜೊತೆ ಸಂಪರ್ಕದಲ್ಲಿದ್ದಾರೆ. ಅವರೊಂದಿಗೆ ಸೇರಿ ರಮೇಶ ಜಾರಕಿಹೊಳಿ ವಿರುದ್ಧ ಪಿತೂರು ಮಾಡಿದ್ದಾರೆ ಎಂದಿದ್ದಾರೆ. ಇದು ಬಿಜೆಪಿಯ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಒಟ್ಟಾರೆ ಮುಖ್ಯಮಂತ್ರಿಗಳ ಬಳಿ ಬಿಜೆಪಿ ಮುಖಂಡರ ನಿಯೋಗ ತೆರಳುತ್ತಿರುವುದು ಕುತೂಹಲ ಮೂಡಿಸಿದ್ದು, ಪ್ರಸ್ತುತ ಉಂಟಾಗಿರುವ ಬಿಕ್ಕಟ್ಟನ್ನು ಮುಖ್ಯಮಂತ್ರಿಗಳ ಹೇಗೆ ಪರಿಹರಿಸಲಿದ್ದಾರೆ ಕಾದು ನೋಡಬೇಕಿದೆ.
ಬೆಳಗಾವಿ ಬಿಜೆಪಿ ಬಿಕ್ಕಟ್ಟು: ಮಧ್ಯಸ್ಥಿಕೆ ವಹಿಸುವ ಸುಳಿವು ನೀಡಿದ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ