ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-: ಪ್ರವಾಹ ಪರಿಹಾರ ವಿಷಯದಲ್ಲಿ ಜಿಲ್ಲಾಡಳಿತ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಜಿಲ್ಲೆಯ ಬಹುತೇಕ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ದೂರಿದರು.
ಇದರಿಂದ ಕೆರಳಿದ ಯಡಿಯೂರಪ್ಪ ಜಿಲ್ಲಾಧಿಕಾರಿಗಳನ್ನು ತೀವ್ರವಾಗಿ ಕೆರಳಿದರು. ನಿಮಗೆ ಕನ್ನಡ ಬರುತ್ತಾ? ನಾನು ಹೇಳುತ್ತಿದ್ದೇನೆ, ನಾಳೆಯಿಂದಲೇ ಸರಿಯಾಗಿ ಕೆಲಸ ಮಾಡಬೇಕು. ಮತ್ತೆ 15 ದಿನದಲ್ಲಿ ಇಲ್ಲಿಗೆ ಬರುತ್ತೇನೆ. ಆ ಸಂದರ್ಭದಲ್ಲಿ ಯಾವುದೇ ರೀತಿಯ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೊಡಲು ಯತ್ನಿಸಿದರಾದರೂ ಸಿಎಂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಸರಿಯಾಗಿ ಕೆಲಸ ಮಾಡಿ ಎಂದು ತಾಖೀತು ಮಾಡಿದರು.
ಕಾರ್ಯಾದೇಶ ವಿತರಣೆ
ಪ್ರವಾಹದಿಂದ ಸಂಪೂರ್ಣ ಮನೆಯನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯ ಆರಂಭಿಸಲು ಅಗತ್ಯವಿರುವ ಮೊದಲ ಕಂತು ಒಂದು ಲಕ್ಷ ರೂಪಾಯಿ ಅವರ ಖಾತೆಗೆ ಜಮಾ ಆಗಿದ್ದು, ಮನೆ ನಿರ್ಮಾಣದ ಕಾರ್ಯಾದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವಿಧ ತಾಲ್ಲೂಕುಗಳ ಆಯ್ದ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಅ.3) ನಡೆದ ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಹಾರ ಕಾರ್ಯಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಕಾರ್ಯಾದೇಶಗಳನ್ನು ನೀಡಲಾಯಿತು.
ಮೃತ ಪಿಎಸ್ಐ ಪತ್ನಿಗೆ 20 ಲಕ್ಷ ಪರಿಹಾರ
ಪ್ರವಾಹ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ.ಎಸ್.ಐ. ವೀರಪ್ಪ ಲಟ್ಟೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಅವರ ಪತ್ನಿ ಕಸ್ತೂರಿ ಲಟ್ಟೆ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 20 ಲಕ್ಷ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿತರಿಸಿದರು.
ಸಿಎಂ ಪರಿಹಾರ ನಿಧಿಗೆ 1.90 ಕೋಟಿ ಚೆಕ್:
ಪ್ರವಾಹಬಾಧಿತ ಸಂತ್ರಸ್ತರಿಗೆ ನೆರವಾಗಲು ವಾಯವ್ಯ ಸಾರಿಗೆ ಸಂಸ್ಥೆಯ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಮಾಡಿದ 1.90 ಕೋಟಿ ರೂಪಾಯಿ ಚೆಕ್ ಅನ್ನು ಮುಖ್ಯಮಂತ್ರಿ ಸ್ವೀಕರಿಸಿದರು.
ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ