Kannada NewsKarnataka NewsLatest

ಖಾನಾಪುರದಲ್ಲಿ ಮಂಗಳವಾರದಿಂದ ಸಂಪೂರ್ಣ ಲಾಕ್ ಡೌನ್

ಖಾನಾಪುರ ಪಟ್ಟಣದಲ್ಲಿ ಮಂಗಳವಾರದಿಂದ ಸಂಪೂರ್ಣ ಲಾಕ್ ಡೌನ್: ಕಿರಾಣಿ, ದಿನಸಿ ಸೇರಿದಂತೆ ಎಲ್ಲ ವ್ಯಾಪಾರ-ವ್ಯವಹಾರಗಳಿಗೂ ನಿರ್ಬಂಧ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:  ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕೋವಿಡ್ ಸೊಂಕನ್ನು ಹತ್ತಿಕ್ಕಲು ಪಟ್ಟಣದಲ್ಲಿ ಮಂಗಳವಾರ ಮೇ.೧೧ರಿಂದ ಶನಿವಾರದವರೆಗೆ ಐದು ದಿನಗಳ ಕಾಲ ಎಲ್ಲ ರೀತಿಯ ವ್ಯಾಪಾರ -ವಹಿವಾಟನ್ನು ನಿಷೇಧಿಸಿ ಖಡಕ್ ಲಾಕ್ ಡೌನ್ ಘೋಷಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸ್ಥಳೀಯ ಆಡಳಿತ ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಉಪವಿಭಾಗಾಧಿಕಾರಿ ಅಶೋಕ ತೇಲಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪಟ್ಟಣದ ವಿವಿಧ ಜಾತಿ, ಧರ್ಮಗಳ ಮುಖಂಡರು, ವರ್ತಕರು, ರಸ್ತೆ ಬದಿ ವ್ಯಾಪಾರಸ್ಥರು ಮತ್ತು ಪಟ್ಟಣ ಪಂಚಾಯ್ತಿ ಸದಸ್ಯರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಕ್ ಡೌನ್ ಅವಧಿಯಲ್ಲಿ ಕಿರಾಣಿ, ದಿನಸಿ ಸೇರಿದಂತೆ ಎಲ್ಲ ರೀತಿಯ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಬೇಕು ಎಂದು ಕರೆ ನೀಡಿದರು.
ಲಾಕ್ ಡೌನ್ ಸಂದರ್ಭದಲ್ಲಿ ಹಾಲು ಮಾರಾಟಕ್ಕೆ ಮುಂಜಾನೆ ಮತ್ತು ಸಂಜೆ ೭ ರಿಂದ ೯ ಗಂಟೆಯವರೆಗೆ ಅವಕಾಶ ನೀಡಲಾಗಿದೆ. ತರಕಾರಿ ಮತ್ತು ಹಣ್ಣು ಮಾರಾಟಗಾರರು ನಿತ್ಯ ಸಂಜೆ ೬ರವರೆಗೆ ಪಟ್ಟಣದ ಬೀದಿ-ಬೀದಿಗಳಿಗೆ, ಮನೆ-ಮನೆಗಳಿಗೆ ತೆರಳಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅವರು ಹೆಚ್ಚು ಜನ ಸೇರದಂತೆ ಗಮನಹರಿಸದಿದ್ದಲ್ಲಿ ಮತ್ತು ಹೆಚ್ಚಿನ ದರ ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಮುಲಾಜಿಲ್ಲದೇ ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕರ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ದಯವಿಟ್ಟು ಎಲ್ಲರೂ ೫ ದಿನಗಳ ಕಾಲ ತಮ್ಮ-ತಮ್ಮ ಮನೆಯಲ್ಲಿಯೇ ಇದ್ದು, ಈ ಅವಧಿಯಲ್ಲಿ ಬರುವ ರಂಜಾನ್, ಬಸವ ಜಯಂತಿ ಮತ್ತು ಶಿವ ಜಯಂತಿಗಳನ್ನು ತಮ್ಮ ಮನೆಯ ಸದಸ್ಯರ ಜೊತೆ ಮನೆಯಲ್ಲೇ ಆಚರಿಸುವಂತೆ ಕರೆ ನೀಡಿದರು.
ಪಿಎಸ್‌ಐ ಬಸಗೌಡ ಪಾಟೀಲ ಮಾತನಾಡಿ, ಭಾನುವಾರ ಮುಂಜಾನೆ ೧೨ ಗಂಟೆಯವರೆಗೆ ಮತ್ತು ಸೋಮವಾರ ಮುಂಜಾನೆ ೧೧ ಗಂಟೆಯವರೆಗೆ ಸಾರ್ವಜನಿಕರು ತಮ್ಮ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಸೋಮವಾರ ಮುಂಜಾನೆ ೧೧ರ ನಂತರ ಮುಂದಿನ ಭಾನುವಾರದ ವರೆಗೆ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು. ಇದಕ್ಕೆ ಸಾರ್ವಜನಿಕರು ಆಸ್ಪದ ನೀಡಬಾರದು ಎಂದರು.
ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಿವೇಕ ಬನ್ನೆ, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಾದಾರ, ಸದಸ್ಯರಾದ ಅಪ್ಪಯ್ಯ ಕೋಡೊಳಿ, ವಿನಾಯಕ ಕಲಾಲ, ಗುಂಡು ತೋಪಿನಕಟ್ಟಿ, ಬಿಜೆಪಿ ಮುಖಂಡ ಪಂಡಿತ ಓಗಲೆ, ಜೆಡಿಎಸ್ ಮುಖಂಡ ರವಿ ಕಾಡಗಿ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರು, ವರ್ತಕರು, ಪೊಲೀಸ್, ಕಂದಾಯ, ಪಟ್ಟಣ ಪಂಚಾಯ್ತಿ ಸಿಬ್ಬಂದಿ ಮತ್ತಿತರರು ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button