ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಮಳೆಗಾಲದ ಪೂರ್ಣಾವಧಿ ಅಧಿವೇಶನವು ಜರುಗಲೆಬೇಕೆಂದು ರಾಜ್ಯಸಭೆಯ ಮಾಜಿ ಸದಸ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದ್ದಾರೆ.
ಕಳೆದ ಎರಡು ಮೂರು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯದೇ ಇರುವುದು ಈ ಭಾಗದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ, ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಪ್ರತಿವರ್ಷ ಅಧಿವೇಶನವನ್ನು ಆಯೋಜಿಸುವ ಸಂಕಲ್ಪ ಮಾಡಿದ್ದರೂ ಅದು ಸರಿಯಾಗಿ ಕಾಲಕಾಲಕ್ಕೆ ನಡೆಯದೇ ಇರುವುದು ಖೇದಕರ ಸಂಗತಿ ಎಂದು ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.
ಉತ್ತರ ಕರ್ನಾಟಕದ ಬಹುದಿನಗಳ ಒತ್ತಾಸೆಯಾಗಿದ್ದ ಸುವರ್ಣ ವಿಧಾನಸೌಧದ ಕನಸು ನನಸಾಗಲು ಹಲವಾರು ದಶಕಗಳನ್ನೇ ತೆಗೆದುಕೊಂಡಿತ್ತು
ಮೊಟ್ಟಮೊದಲಿಗೆ ಕೆಎಲ್‌ಇ ಅಂಗಳದಲ್ಲಿ ಯಶಸ್ವಿಯಾಗಿ ವಿಧಾನಸೌಧ ಅಧಿವೇಶನವನ್ನು ನಾವು ಜರುಗಿಸಿ ತೋರಿಸಿದ್ದೇವು. ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯವಿದೆ. ಅಧಿವೇಶನ ಜರುಗಿದರೆ ಗಲಭೆ ಗಲಾಟೆಗಳಾಗಬಹುದೆಂಬ ಸಂದೇಹವಿದ್ದ ಇಂತಹ ಸನ್ನಿವೇಶದಲ್ಲಿ ಕೆಎಲ್‌ಇ ಅಂಗಳದಲ್ಲಿ ಒಂದಲ್ಲ ಎರಡು ವಿಧಾನ ಮಂಡಳ ಅಧಿವೇಶವನ್ನು ನಿರ್ವಿಘ್ನವಾಗಿ ಮಾಡಿದ್ದು ಇಂದು ಇತಿಹಾಸ. ಯಾವಾಗ ಯಶಸ್ವಿಯಾಗಿ ವಿಧಾನ ಮಂಡಳ ಅಧಿವೇಶ ಜರುಗಿತೋ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಬೇಕು, ಹಾಗೂ ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಗೊಳ್ಳಬೇಕೆಂದು ಒತ್ತಾಯಗಳು ಬಂದವು. ಈ ಭಾಗದ ಕನ್ನಡಿಗರ ಆಶಯಕ್ಕೆ, ಹೋರಾಟಕ್ಕೆ, ಹೊಸ ಆಯಾಮಕ್ಕೆ ದಿಕ್ಕುದೆಸೆ ಕಂಡುಬಂತು. ಆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಸಮಿಶ್ರ ಸರ್ಕಾರವಿದ್ದ ಕಾಲವದು. ಬೆಳಗಾವಿಯಂತಹ ಸಂವೇದನಾಶೀಲ ಪ್ರದೇಶದಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಗೊಳ್ಳುವುದೇ ಎಂದು ಉಳಿದವರು ತಿಳಿದುಕೊಂಡಿದ್ದರು, ಇಲ್ಲಿಯ ರಾಜಕೀಯ ಧುರೀಣರು, ಕಾರ್ಯಕರ್ತರು ಹಾಗೂ ಜನತೆಯ ಒತ್ತಾಸೆಯ ಫಲವಾಗಿ ಉಳಿದೆಲ್ಲರಿಗೂ ಆಶ್ಚರ್ಯವಾಗುವಂತೆ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ಅದರ ನಂತರ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು – ಇವರೆಲ್ಲರ ಇಚ್ಛಾಶಕ್ತಿ ಫಲವಾಗಿ ೪೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ವಿಧಾನ ಸೌಧ ಕಟ್ಟಡ ನಿರ್ಮಾಣಗೊಂಡಿತು.
ಇದೆಲ್ಲವೂ ಸರಿಯಾಗಿಯೇ ಇತ್ತು, ತದನಂತರದಲ್ಲಿ ಮೂಲೋದ್ದೇಶವನ್ನು ಮರೆತು ಅಲ್ಪಾವಧಿಗೆ ಅಧಿವೇಶನಗಳು ಜರುಗಿದವು. ಶಾಸಕರ ಹಾಜರಾತಿ ಬಹುಕಡಿಮೆ ಇರುತ್ತಿತ್ತು, ಪ್ರವಾಸಕ್ಕಾಗಿಯೇ ಶಾಸಕರುಗಳು ಬಂದ ಹಾಗೇ ಅನಿಸಿತು. ಸುವರ್ಣಸೌಧವನ್ನು ಕಟ್ಟಿದ ಉದ್ದೇಶವೇ ಸರಿಯಾಗಿ ಕಾರ್ಯಗತಗೊಳ್ಳದೇ ಇರುವುದು ವಿಪರ್ಯಾಸ.
ಅಧಿವೇಶನಗಳು ಇಲ್ಲಿ ಯಶಸ್ವಿಯಾಗಿ ಪೂರ್ಣಾವಧಿಗೆ ಜರುಗಬೇಕೆಂದರೆ ಶಾಸಕರ ಭವನ, ಸಿಬ್ಬಂದಿವರ್ಗದವರಿಗೆ ವಸತಿ ಗೃಹಗಳು, ಊಟೋಪಚಾರದ ಕ್ಯಾಂಟಿನ್‌ಗಳು ಅಗತ್ಯವಾಗಿ ನಿರ್ಮಾಣಗೊಳ್ಳಬೇಕು. ಅವುಗಳನ್ನು ಮಾಡಿದರೆ ಪೂರ್ಣಾವಧಿಗೆ ಅಧಿವೇಶನ ನಡೆಯಲು ಸಾಧ್ಯವಾಗುತ್ತದೆ. ಈಗಿನ ವ್ಯವಸ್ಥೆಯಲ್ಲಿಯೇ ಮುಂದುವರೆದರೆ ಬೆಳಗಾವಿಯಲ್ಲಿ ಅಧಿವೇಶನಗಳು ಸರಿಯಾಗಿ ಜರುಗುವುದಿಲ್ಲ. ಅದಕ್ಕೆ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ಈ ಭಾಗದ ಸಮಸ್ತ ಜನತೆಯ ಪರವಾಗಿ ಒತ್ತಾಯ ಮಾಡುತ್ತೇನೆ. ಮಳೆಗಾಲದಲ್ಲಾಗಲಿ ಅಥವಾ ಚಳಿಗಾಲದಲ್ಲಾಗಲಿ ಕನಿಷ್ಠ ೩೦ ದಿನಗಳ ವರೆಗೆ ಪೂರ್ಣಾವಧಿಯ ಅಧಿವೇಶನಗಳು ಜರುಗಲೇಬೇಕು. ಆದಷ್ಟು ಬೇಗನೆ ಸರ್ಕಾರವು ಇತ್ತ ಗಮನಹರಿಸಬೇಕೆಂದು ಡಾ.ಪ್ರಭಾಕರ ಕೋರೆಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಸಿ -ಸಿಎಂ ಗೆ ಹೊರಟ್ಟಿ ಪತ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ