ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆದು ಪ್ರಸ್ತುತ ಸರಕಾರದ ಭವಿಷ್ಯ ಮತ್ತು ರಾಜ್ಯ ರಾಜಕೀಯದ ದಿಕ್ಕನ್ನು ನಿರ್ಧರಿಸುವ ಮಹತ್ವದ ಪ್ರಕ್ರಿಯೆ ನಡೆಯಲಿದೆ.
ಆದರೆ ಉಪಚುನಾವಣೆಗೆ ಒಗ್ಗಟ್ಟಿನಿಂದ ಸಜ್ಜಾಗಬೇಕಿದ್ದ ಮೂರೂ ಪಕ್ಷಗಳು ಆಂತರಿಕ ಸಂಘರ್ಷದಿಂದ ಕಂಗೆಟ್ಟಿವೆ. ಒಟ್ಟಾಗಿ ವಿರೋಧಿಗಳನ್ನು ಎದುರಿಸಬೇಕಿದ್ದ ಪಕ್ಷಗಳು ತಮ್ಮೊಳಗೇ ಕಿತ್ತಾಟ ಶುರು ಮಾಡಿಕೊಂಡಿವೆ.
ಗೌಡರ ಕುಂಟುಂಬದ ಹಿಡಿತ ಹೊಂದಿರುವುದರಿಂದ, ಯಾರು ಹೋಗಲಿ, ಯಾರು ಬರಲಿ ಅಷ್ಟಾಗಿ ತಲೆ ಕೆಡಿಸಿಕೊಳ್ಳದ್ದರಿಂದ ಮತ್ತು ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಕೇವಲ 3ರ ಮೇಲೆ ಹಿಡಿತ ಹೊಂದಿರುವುದರಿಂದ ಜೆಡಿಎಸ್ ಗೆ ಅಷ್ಟಾಗಿ ಸಮಸ್ಯೆಯಾಗಲಿಕ್ಕಿಲ್ಲ.
ಆದರೆ ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರವಾಗಿ ಕಿತ್ತಾಡುತ್ತಿವೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಆಡಳಿತ ನಡೆಸುತ್ತಿರುವ ಬಿಜೆಪಿ ವಯಕ್ತಿಕ ಪ್ರತಿಷ್ಠೆಗೆ ಬಿದ್ದಂತಿದೆ. ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ನಾಯಕರು ನಾನಾ ನೀನಾ ಎನ್ನುವ ಮಟ್ಟಕ್ಕೆ ಬಂದಿದ್ದಾರೆ.
ಯಡಿಯೂರಪ್ಪ- ಕಟೀಲು ಸಂಘರ್ಷ
ಕರ್ನಾಟಕ ಬಿಜೆಪಿಯಲ್ಲಿ ಎರಡು ಶಕ್ತಿ ಕೇಂದ್ರಗಳಾಗಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ಕಡೆಯಾದರೆ, ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಮತ್ತೊಂದು ಕಡೆ. ಯಡಿಯೂರಪ್ಪ ಸರಕಾರ ಉಳಿಸಲು ಹೆಣಗಾಡುತ್ತಿದ್ದರೆ, ಕಟೀಲು ಪಕ್ಷ ಉಳಿಸಲು ತಂತ್ರ ರೂಪಿಸುತ್ತಿದ್ದಾರೆ.
ಹಾಗಾಗಿ ಯಡಿಯೂರಪ್ಪ ರಾಜಕೀಯ ದೃಷ್ಟಿಕೋನದಿಂದ ಮಣೆ ಹಾಕುತ್ತಿದ್ದರೆ, ಕಟೀಲು ಪಕ್ಷ ನಿಷ್ಠೆ ನೋಡಿ ನೇಮಕ ಮಾಡುತ್ತಿದ್ದಾರೆ. ಇಂದಿನ ತುರ್ತಾಗಿರುವ ಎರಡ ಸಮನ್ವಯ ಆಗುತ್ತಿಲ್ಲ. ಹಾಗೆ ನೋಡಿದರೆ ಹೈಕಮಾಂಡ್ ಪ್ರಸ್ತುತ ಸನ್ನಿವೇಶದಲ್ಲಿ ಯಡಿಯೂರಪ್ಪನವರಿಗಿಂತ ಕಟೀಲು ಬೆನ್ನಿಗೇ ನಿಂತಂತಿದೆ.
ಬಿಜೆಪಿ ತತ್ವ ನಿಷ್ಠೆಗಳಿಂದ ಬೆಳೆದಿರುವ ಪಕ್ಷ. ಆದರೆ ಅದನ್ನು ನಿಯಂತ್ರಸಬೇಕಾದ ಸಂದರ್ಭದಲ್ಲಿ ನಿಯಂತ್ರಿಸದ್ದರಿಂದ ಈಗ ವಿಕೋಪಕ್ಕೆ ಹೋಗಿ ಮುಟ್ಟಿದೆ. ಈಗ ಒಮ್ಮೆಲೆ ಕೈ ಹಾಕಲು ಹೋದರೆ ಕೈ ಸುಟ್ಟುಕೊಳ್ಳುವ ಸ್ಥಿತಿ ಬರಬಹುದು. ಹಾಗಾಗಿ ಸಧ್ಯದ ಮಟ್ಟಿಗೆ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ ಮಧ್ಯೆ ಸಮನ್ವಯತೆಯೊಂದೇ ದಾರಿ. ಇಲ್ಲವಾದಲ್ಲಿ ಸರಕಾರ ಮತ್ತು ಪಕ್ಷ ಎರಡಕ್ಕೂ ಹಾನಿ ಕಟ್ಟಿಟ್ಟ ಬುತ್ತಿ.
ಸಿದ್ದರಾಮಯ್ಯ ಟಾರ್ಗೆಟ್
ಇನ್ನು ಕಾಂಗ್ರೆಸ್ ನಲ್ಲಿ ಸಧ್ಯದ ಮಟ್ಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾರ್ಗೆಟ್ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೊರತುಪಡಿಸಿ ಉಳಿದ ನಾಯಕರೆಲ್ಲ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದಾರೆ. ಮುನಿಯಪ್ಪ, ಪರಮೇಶ್ವರ ಮತ್ತಿತರರು ನೇರವಾಗಿ ಸಮರಕ್ಕಿಳಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಎರಡೂ ಹುದ್ದೆಗಳನ್ನು ಬದಲಾಯಿಸಲು ಒತ್ತಡ ಕೇಳಿಬಂದಿದೆ.
ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರಲ್ಲ. ವಲಸೆ ಬಂದು ಎಲ್ಲ ಅಧಿಕಾರಗಳನ್ನೂ ಅನುಭವಿಸಿ, ಈಗ ಮೂಲ ಕಾಂಗ್ರೆಸ್ಸಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅವರು ಹೇಳಿದ್ದೇ ಅಂತಿಮ ಎನ್ನುವಂತಾಗಿದೆ. ಹಿರಿಯ ನಾಯಕರಿಂದ ಸೌಜನ್ಯಕ್ಕೂ ಅಭಿಪ್ರಾಯ ಕೇಳುತ್ತಿಲ್ಲ ಎನ್ನುವುದು ಹಿರಿಯ ಅಸಮಾಧಾನ.
ಈ ಬಣ ಜಗಳ ಕೇವಲ ಬೆಂಗಳೂರು ಮಟ್ಟಕ್ಕೆ ಸೀಮಿತವಾಗಿಲ್ಲ. ಪ್ರತಿ ಜಿಲ್ಲೆಯಲ್ಲೂ ಎರಡೆರು ಬಣಗಳು ಹುಟ್ಟಿಕೊಂಡಿವೆ. ಇದು ಈಗಾಗಲೆ ಸಾಕಷ್ಟು ಕಷ್ಟ ನಷ್ಟ ಅನುಭವಿಸುತ್ತಿರುವ ಪಕ್ಷಕ್ಕೆ ಮತ್ತಷ್ಟು ಸಂಕಷ್ಟ ತಂದಿಡಲಿದೆ. ಆಂತರಿಕ ಕಚ್ಚಾಟ ಈಗಾಗಲೆ ಹೈಕಮಾಂಡ್ ಮೆಟ್ಟಿಲೇರಿದೆ. ಈಗಲೇ ಸರಿಪಡಿಸಿಕೊಳ್ಳದಿದ್ದಲ್ಲಿ ಪಕ್ಷ ಸಂಪೂರ್ಣ ಅವನತಿಯತ್ತ ಜಾರಲಿದೆ.
ಹೀಗೆ, ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಜೆಡಿಎಸ್ ಇರಲಿ, ರಾಜಕೀಯ ಪಕ್ಷಗಳಲ್ಲಿ ನಡೆಯುವ ಆಂತರಿಕ ಸಂಘರ್ಷ ವಿಕೋಪಕ್ಕೆ ಹೋಗುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದಲ್ಲ. ಆಡಳಿತ ಪಕ್ಷ ಎಷ್ಟು ಮುಖ್ಯವೋ ಗಟ್ಟಿಯಾದ ವಿರೋಧ ಪಕ್ಷವೂ ಪ್ರಜಾಪ್ರಭುತ್ವಕ್ಕೆ ಅಷ್ಟೇ ಮುಖ್ಯ.
ನಿನ್ನೆಯ ಟಾಪ್ ಸುದ್ದಿಗಳು –
15 ಕ್ಷೇತ್ರಗಳ ಉಪಚುನಾವಣೆಗೆ ಪುನಃ ಅಧಿಸೂಚನೆ
ಮತ್ತೊಮ್ಮೆ ವಿವಾದಕ್ಕೆ ಬಿದ್ದ ಲಕ್ಷ್ಮಣ ಸವದಿ
ಎಲ್ಲ ಸಚಿವರಿಗೆ ಹೆಚ್ಚುವರಿ ಹೊಣೆಗಾರಿಕೆ
ಶಂಕರಗೌಡ ಪಾಟೀಲ ಅವರಿಗೆ ಸಚಿವ ದರ್ಜೆ ಹುದ್ದೆ
ಮಹಿಳೆಯ ಹೊಟ್ಟೆಯಲ್ಲಿತ್ತು 4 ಕಿಲೋ ತೂಕದ ಗಡ್ಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ