Kannada NewsKarnataka NewsLatest

ಹುಬ್ಬೇರಿಸಿದ ಕಾಂಗ್ರೆಸ್ -ಬಿಜೆಪಿ ಮೈತ್ರಿ

ಯಡೂರಗ್ರಾಮ ಪಂಚಾಯತಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಒಂದು ಕಡೆ ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹಾವು ಮುಂಗುಸಿಯಂತೆ ಇದ್ದರೆ ಇನ್ನೊಂದಡೆ ಸ್ಥಳೀಯಾಡಳಿತದಲ್ಲಿನ ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್ ಸದಸ್ಯರು  ಒಂದಾಗಿದ್ದಾರೆ.
ಒಟ್ಟಿಗೇ ಕಾಂಗ್ರೆಸ್- ಬಿಜೆಪಿ ಧ್ವಜ ಹಿಡಿದು ಸಂಭ್ರಮ
  ಗ್ರಾಮದ ಅಭಿವೃದ್ಧಿಗೆ ಕಾಂಗ್ರೆಸ್- ಬಿಜೆಪಿ ಸದಸ್ಯರು ಒಂದಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಧ್ವಜಗಳನ್ನು ಒಟ್ಟಿಗೇ ಹಿಡಿದು ಸಂಭ್ರಮಿಸಿದ್ದಾರೆ. ಇಂತಹ ದೃಶ್ಯ ಕಂಡು ಬಂದಿದ್ದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮ ಪಂಚಾಯತನಲ್ಲಿ.
ಇವತ್ತು ಯಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಿತು. 20 ಸದಸ್ಯರ ಬಲವನ್ನು ಹೊಂದಿರುವ ಯಡೂರ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿಯಿಂದ ಏಳು ಜನ ಸದಸ್ಯರು ಕಾಂಗ್ರೆಸ್ನಿಂದ ಆರು ಜನ ಸದಸ್ಯರು ಹಾಗೂ ಶಿವತೇಜ ಫೌಂಡೇಶನಿಂದ 7 ಜನ ಸದಸ್ಯರು ಆಯ್ಕೆಯಾಗಿದ್ದರು. ಇವತ್ತು ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಅಧ್ಯಕ್ಷ ಸ್ಥಾನಕ್ಕೆ ಶ್ರೀದೇವಿ ವರಾಳೆಯವರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಹುಲ ದೇಸಾಯಿಯವರು ನಾಮಪತ್ರವನ್ನು ಸಲ್ಲಿಸಿದರು.
ಇತ್ತ ಶಿವತೇಜ ಫೌಂಡೇಶನ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಬಿಬಾ ಕಾಂಬಳೆ ಅವರು ನಾಮಪತ್ರ ಸಲ್ಲಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಅಜಯ ಸೂರ್ಯವಂಶಿ ನಾಮಪತ್ರವನ್ನು ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ ಶ್ರೀದೇವಿ ವರಾಳೆಯವರು 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ರಾಹುಲ ದೇಸಾಯಿಯವರು 13 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇನ್ನು ಕಾಂಗ್ರೆಸ್ ನಿಂದ ಬಿಜೆಪಿ ಸದಸ್ಯರಿಗೆ ಪ್ರತ್ಯಕ್ಷವಾಗಿ ಬೆಂಬಲವನ್ನು ನೀಡಿದ್ದರಿಂದ ಕಾಂಗ್ರೆಸ್, ಬಿಜೆಪಿ ಆಡಳಿತದ ಯಡೂರ ಗ್ರಾಮ ಪಂಚಾಯಿತಿಯಾಯಿತು.
ಇದರಿಂದ ಶಿವತೇಜ ಫೌಂಡೇಶನ್ ಬದಿಗಿಟ್ಟು ಕಾಂಗ್ರೆಸ್-ಬಿಜೆಪಿ ಸದಸ್ಯರು ಸೇರಿ ಗ್ರಾಮಪಂಚಾಯಿತಿಯ ಆಡಳಿತದ ಅಧಿಕಾರ ಚುಕ್ಕಾಣಿ ಹಿಡಿದರು. ಇದರಿಂದ ಸಹಜವಾಗಿಯೇ ಶಿವತೇಜ ಫೌಂಡೇಶನ್ ಗೆ ಮುಖಭಂಗವಾಗಿದೆ. ಅಧ್ಯಕ್ಷ-ಉಪಾಧ್ಯಕ್ಷರ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಧ್ವಜವನ್ನು ಹಿಡಿದು ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ದೇಸಾಯಿ ಮಾತನಾಡಿ ನಮ್ಮಲ್ಲಿ ಕಾಂಗ್ರೆಸ್-ಬಿಜೆಪಿ ಎನ್ನುವ ಯಾವುದೇ ಪಕ್ಷಬೇಧವಿಲ್ಲ. ಯಡೂರು ಗ್ರಾಮದ ಸರ್ವಾಂಗೀಣ ವಿಕಾಸಕ್ಕಾಗಿ ಕಾಂಗ್ರೆಸ್, ಬಿಜೆಪಿ ಸದಸ್ಯರು ಸೇರಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದೇವೆ. ಗ್ರಾಮದ ಅಭಿವೃದ್ಧಿಯೇ ನಮ್ಮ ಮೂಲ ಗುರಿಯಾಗಿದೆ ಎಂದು ತಿಳಿಸಿದರು.
ನಂತರ ನೂತನ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ ಉಮ್ರಾಣಿ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ಹಂತದಲ್ಲಿ ಗ್ರಾಮದ ಅಭಿವೃದ್ಧಿ ನಮ್ಮ ಮೂಲಮಂತ್ರವಾಗಿದೆ. ಇಲ್ಲಿ ಕಾಂಗ್ರೆಸ್-ಬಿಜೆಪಿ ಎನ್ನುವ ಯಾವುದೇ ಪಕ್ಷ ಭೇದಭಾವವಿಲ್ಲದೆ ನಾವೆಲ್ಲರೂ ಒಗ್ಗೂಡಿ ಕೇಂದ್ರ, ರಾಜ್ಯ ಸರ್ಕಾರದಿಂದ ಬರುವ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿಸುವುದು ನಮ್ಮ ಧ್ಯೇಯವಾಗಿದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ದೇಶದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳು ಬದ್ಧ ವೈರಿಗಳಂತೆ ಇದ್ದರೆ ಇತ್ತ ಯಡೂರು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರು ಸೇರಿಕೊಂಡು ಗ್ರಾಮಪಂಚಾಯಿತಿಯ ಆಡಳಿತದ ಚುಕ್ಕಾಣಿಯನ್ನು ಹಿಡಿದು ಗ್ರಾಮವನ್ನು ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button