ಪ್ರಗತಿವಾಹಿನಿ ಸುದ್ದಿ, ಚಿಕ್ಕಮಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ತಮ್ಮಯ್ಯ ಅವರು ಸಿ.ಟಿ. ರವಿ ವಿರುದ್ಧ ಅಮೋಘ ಗೆಲುವು ಸಾಧಿಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದು ಮಾತ್ರ ಜೆಡಿಎಸ್ ನ ಎಂಎಲ್ ಸಿ ಎಸ್.ಎಲ್. ಭೋಜೇಗೌಡ !
ಇದ್ಯಾವ ಪರಿಯ ವಿಜಯೋತ್ಸವ ಎಂದು ಕೇಳಿದವರಿಗೆ ಒಮ್ಮೆ ಎನಿಸದೆ ಇರದು. ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಅವರ ಪರ ಕಾಂಗ್ರೆಸ್ಸಿಗರು ಭರ್ಜರಿ ಪ್ರಚಾರವೇನೋ ನಡೆಸಿದ್ದರು. ಆದರೆ ಬಿಜೆಪಿಯ ಸಿ.ಟಿ. ರವಿ ವಿರುದ್ಧ ಅಲೆ ಸೃಷ್ಟಿಸುವಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪರಮಾಪ್ತರಾಗಿ ಪರಿಚಿತ ಜೆಡಿಎಸ್ ಎಂಎಲ್ ಸಿ ಎಸ್.ಎಲ್. ಭೋಜೇಗೌಡ ಕೂಡ ಮಹತ್ವದ ಪಾತ್ರ ವಹಿಸಿದ್ದರು. ಭೋಜೇಗೌಡರು ಬಹಿರಂಗವಾಗಿ ತಮ್ಮಯ್ಯ ಪರ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇದರ ಪರಿಣಾಮ ಸಿ.ಟಿ. ರವಿ ಈ ಬಾರಿ ಹೀನಾಯ ಸೋಲು ಕಂಡಿದ್ದಾರೆ. ಗೆದ್ದಿದ್ದು ಕಾಂಗ್ರೆಸ್ ಅಭ್ಯರ್ಥಿಯಾದರೂ ಸಿ.ಟಿ. ರವಿ ಅವರನ್ನು ಸೋಲಿಸಿದ ಸಂಭ್ರಮಕ್ಕೆ ಭೋಜೇಗೌಡರ ಅಭಿಮಾನಿಗಳು, ಅನುಯಾಯಿಗಳೆಲ್ಲ ಸೇರಿ ಅವರಿಗೆ ಹೊಸಮನೆ ಬಡಾವಣೆಯಲ್ಲಿ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ