*ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್; ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಜನವರಿ 3 ರಿಂದ ಜಾರಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು/ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ 3ನೇ ಜನವರಿ 2024 ರಿಂದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಾಗರಿಕರು ಸರ್ಕಾರಿ ಕಛೇರಿಗಳಿಗೆ ಬರುವ ಬದಲು ಅವರ ಮನೆ ಬಾಗಿಲಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 28 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ವಲಯವಾರು 2 ಅಥವಾ 3 ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಸದರಿ ಕಾರ್ಯಕ್ರಮವನ್ನು ನಡೆಸಲಾಗುವುದು.
ಅದರಂತೆ, ಮೊದಲನೇ ಹಂತದಲ್ಲಿ ಮಹದೇವಪುರ, ಯಲಹಂಕ ಹಾಗೂ ಪೂರ್ವ ವಲಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಎರಡನೇ ಹಂತದಲ್ಲಿ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು.
ನಾಗರಿಕರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ತಮ್ಮ ಅಹವಾಲು/ಸಮಸ್ಯೆಗಳನ್ನು ನಿವೇದಿಸಿಕೊಳ್ಳಬಹುದಾಗಿದ್ದು, ನಾಗರಿಕರಿಗೆ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಹಾಗೂ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲದೆ ವಿದ್ಯುತ್, ಜನರೇಟರ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿರುತ್ತದೆ.
ಸಿಬ್ಬಂದಿಗಳಿಗೆ ತರಬೇತಿ:
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಂದಂತಹ ದೂರುಗಳನ್ನು ಸಮಗ್ರ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ (Integrated Public Grievance Redressal system – IPGRS) ಸಾಪ್ಟ್ವೇರ್ ನಲ್ಲಿ ದಾಖಲಿಸಲು ಪಾಲಿಕೆ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ನಾಗರಿಕರ ಸಂಪೂರ್ಣ ವಿವರ ಹಾಗೂ ನಾಗರಿಕರಿಂದ ಬಂದಂತಹ ದೂರುಗಳು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದನ್ನು ಸಾಪ್ಟ್ವೇರ್‌ನಲ್ಲಿ ದಾಖಲಿಸಲು ವೈ-ಫೈ, ಗಣಕಯಂತ್ರ, ಪ್ರಿಂಟರ್ ಹಾಗೂ ಸ್ಕ್ಯಾನರ್ ಗಳ ವ್ಯವಸೆಯೊಂದಿಗೆ 15 ಕೌಂಟರ್ ಗಳನ್ನು ಸ್ಥಾಪಿಸಲಾಗಿರುತ್ತದೆ.
ಹೆಲ್ಪ್ ಡೆಸ್ಕ್ ನಿರ್ಮಾಣ:
ಕಾರ್ಯಕ್ರಮದ ಸ್ಥಳದಲ್ಲಿ ನಾಗರಿಕರಿಗೆ ಅನುಕೂಲವಾಗಲು ಸಹಾಯ ಕೇಂದ್ರ (ಹೆಲ್ಪ್ ಡೆಸ್ಕ್) ಅನ್ನು ಸ್ಥಾಪಿಸಲಾಗಿರುತ್ತದೆ. ಅಲ್ಲದೆ ನಾಗರಿಕರಿಗೆ ಮಾಹಿತಿ ಒದಗಿಸುವ ನಾಮಫಲಕ (ಸೈನೇಜ್)ಗಳನ್ನು ಸಹ ಅಳವಡಿಸಲಾಗಿರುತ್ತದೆ.
ನಾಗರಿಕರಿಗೆ ಟೋಕನ್ ವ್ಯವಸ್ಥೆ:
“ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ನಾಗರಿಕರು ಅಹವಾಲುಗಳನ್ನು ನೀಡಲು ಅನುವಾಗಲೆಂದು ಟೋಕನ್ ಗಳನ್ನು ಪಡೆಯಲು 10 ಕೌಂಟರ್ ಗಳ ವ್ಯವಸ್ಥೆ ಮಾಡಲಾಗುತ್ತದೆ. ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಹಾಗೂ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ಅವರನ್ನು ನೇರವಾಗಿ ಭೇಟಿಯಾಗಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರನ್ನೂ ಆಹ್ವಾನಿಸಲಾಗಿದೆ.
ಒಂದೇ ಸೂರಿನಡಿ ವಿವಿಧ ಇಲಾಖೆಗಳು:
ನಾಗರಿಕರ ಸಮಸ್ಯೆಗಳನ್ನು ಒಂದೇ ಸೂರಿನಡಿ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಮುಖ ಇಲಾಖೆಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಬಿವೃದ್ಧಿ ಪ್ರಾಧಿಕಾರ, ಬೆಸ್ಕಾಂ, ಜಲಮಂಡಳಿ, ಬಿಎಂಆರ್‌ಸಿಎಲ್(ಮೆಟ್ರೋ), ಕೊಳಗೇರಿ ಅಭಿವೃದ್ಧಿ ಮಂಡಳಿ, ಪೊಲೀಸ್ ಇಲಾಖೆ, ಬಿಎಂಟಿಸಿ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಉಪಸ್ಥಿತರಿರಲಿದ್ದಾರೆ.
“ಬಾಗಿಲಿಗೆ ಬಂತು ಸರ್ಕಾರ – ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದ ವಿವರ:
- ದಿನಾಂಕ: 03/01/2024ರಂದು ಐಟಿಐ ಕ್ರೀಡಾಂಗಣ, ದೂರವಾಣಿ ನಗರ, ಕೆ.ಆರ್ ಪುರ. ವಿಧಾನಸಭಾ ಕ್ಷೇತ್ರ: ಕೆ.ಆರ್ ಪುರ, ಮಹದೇವಪುರ.
- ದಿನಾಂಕ: 05/01/2024ರಂದ ಡಾ. ಬಿ.ಆರ್ ಅಂಬೇಡ್ಕರ್ ಭವನ, ಯಲಹಂಕ ನ್ಯೂ ಟೌನ್. ವಿಧಾನಸಭಾ ಕ್ಷೇತ್ರ: ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ.
- ದಿನಾಂಕ: 06/01/2024ರಂದು ಆರ್.ಬಿ.ಎ.ಎನ್.ಎಮ್.ಎಸ್ ಹೈಸ್ಕೂಲ್ ಮೈದಾನ, ಸೆಂಟ್ ಜಾನ್ಸ್ ರಸ್ತೆ, ಶಿವನ್ ಚೆಟ್ಟಿ ಗಾರ್ಡನ್. ವಿಧಾನಸಭಾ ಕ್ಷೇತ್ರ: ಹೆಬ್ಬಾಳ, ಶಿವಾಜಿನಗರ, ಪುಲಕೇಶಿನಗರ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ