*ಸದಾ ಬಡವರ ಬಗ್ಗೆ ಚಿಂತಿಸುವ ಪಕ್ಷ ಕಾಂಗ್ರೆಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿ ಇಂದು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾರ್ಕಳದ ಮಂಜುನಾಥ್ ಪೈ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ತಾಲೂಕು ಆಶ್ರಯದಲ್ಲಿ ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಹಾಗೂ ಗ್ಯಾರಂಟಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕರ್ನಾಟಕ ಮಾಡೆಲ್ ಯೋಜನೆಗಳನ್ನು ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಬದಲಿಸಿಕೊಂಡಿದ್ದಾರೆ ಎಂದರು.
ಕರ್ನಾಟಕದ 1.24 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಹಣ ಸಂದಾಯ ಆಗುತ್ತಿದೆ. ಆದರೆ, ಜಿಎಸ್ಟಿ, ಆದಾಯ ತೆರಿಗೆ ಸಮಸ್ಯೆಯಿಂದ ಸುಮಾರ ಎರಡು ಲಕ್ಷ ಮಹಿಳೆಯರಿಗೆ ಹಣ ಸಂದಾಯ ಆಗುತ್ತಿಲ್ಲ. ಈ ಪೈಕಿ 50 ಸಾವಿರ ಮಹಿಳೆಯರಿಗಿದ್ದ ಜಿಎಸ್ಟಿ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಉಳಿದ ಒಂದೂವರೆ ಲಕ್ಷ ಮಹಿಳೆಯರಿಗೆ ಇರುವ ಸಮಸ್ಯೆಯನ್ನು ಬಗೆ ಹರಿಸಿ ಹಣ ಸಂದಾಯ ಆಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಪಕ್ಷದ ಸರ್ಕಾರ ಬಡವರ, ಮಹಿಳೆಯರ ಬಗ್ಗೆ, ದೀನ ದಲಿತರ ಬಗ್ಗೆ ಯೋಚಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದು, ಇಡೀ ವಿಶ್ವವೇ ಭಾರತದ ಕಡೆ ತಿರುಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷದ ಯೋಜನೆಗಳು. ಕಾಂಗ್ರೆಸ್ ಪಕ್ಷದ ಇತಿಹಾಸ ಇಡೀ ದೇಶದ ಇತಿಹಾಸ. ಸಾಲಮೇಳ ಮಾಡಿದ ಇಂದಿರಾ ಗಾಂಧಿ ಜನರ ಮನೆ ಬಾಗಿಲಿಗೆ ಬ್ಯಾಂಕ್ ಕೊಂಡ್ಯೊಯ್ದರು. ಉಳುವವನೇ ಭೂಮಿ ಒಡೆಯ ಎಂಬ ದಿಟ್ಟ ಕಾಯ್ದೆಯನ್ನು ಇಂದಿರಾಗಾಂಧಿ ಜಾರಿಗೆ ತಂದರು ಎಂದು ಸಚಿವರು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿದರು.
ಒಂದು ಕಾಲದಲ್ಲಿ ಊರುಗಳಲ್ಲಿ ಬಸ್, ಆಸ್ಪತ್ರೆ ಗಳು ಇರಲಿಲ್ಲ, ಆದರೆ ಇಂದು ಮನೆ ಮನೆಗಳಲ್ಲಿ ಎರಡ್ಮೂರು ಕಾರುಗಳಿವೆ. ಇದು ಕಾಂಗ್ರೆಸ್ ಪಕ್ಷ ಬಡವರ ಬಗ್ಗೆ ತೆಗೆದುಕೊಂಡ ದಿಟ್ಟ ನಿರ್ಧಾರಗಳೇ ಕಾರಣ ಎಂದರು.
ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಮೂಲಕ ಬಡವರ ಮಕ್ಕಳಿಗೆ ಪೌಷ್ಟಿಕ ಆಹಾರ, ಬಡವರ ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ್ದು ಇಂದಿರಾಗಾಂಧಿ, ಮುಂದಿನ ತಿಂಗಳಿಗೆ ಸುವರ್ಣ ವರ್ಷ ಪೂರೈಸುತ್ತಿದ್ದು, ನವೆಂಬರ್ ತಿಂಗಳಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ವೈಜ್ಞಾನಿಕ ಕ್ರಾಂತಿ ಮಾಡಿದ್ದು ಕಾಂಗ್ರೆಸ್, ಗ್ರಾಮ ಪಂಚಾಯತಿ ಗಳಲ್ಲಿ 33% ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷ. ನಮ್ಮ ಕೆಲಸಗಳನ್ನು ನಾವು ಹೆಮ್ಮೆಯಿಂದ ಹೇಳಿಕ್ಳೋಣ.ನೋಟ್ ಬ್ಯಾನ್, ಕರೋನಾ ಮಹಾಮಾರಿಯಿಂದ ತತ್ತರಿಸಿದ್ದ ರೈತರು, ಬಡ ಜನರ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಮಹಿಳೆಯರಿಗೋಸ್ಕರ ಏನಾದರೂ ಮಾಡೋಣ ಅಂತ ಚಿಂತಿಸಿ, ಈ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸುವ ನಿರ್ಧಾರ ಮಾಡಿದೆವು.ಇದು ನಮ್ಮ ಸರ್ಕಾರದ ಸಾಧನೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಉದಯ್ ಶೆಟ್ಟಿ ಮುನಿಯಾಲು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಕಾರ್ಕಳ ಪುರಸಭೆ ಅಧ್ಯಕ್ಷರಾದ ಯೋಗೀಶ ದೇವಾಡಿಗ, ಕುಕ್ಕುಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಷಾ, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಕಾರ್ಕಳ ತಹಶಿಲ್ದಾರರಾದ ಪ್ರದೀಪ್ ಆರ್, ಇಒ ಪ್ರಶಾಂತ್ ರಾವ್, ಲೀನ ಬ್ರಿಟ್ಟೋ, ಪ್ರದೀಪ್ ಉಪಸ್ಥಿತರಿದ್ದರು.