
ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಾಜ್ಯದ ಉತ್ತರ ಒಳನಾಡಿನ ಹಲವೆಡೆಗಳಲ್ಲಿ ಬರದಿಂದಾಗಿ ಜನರು ಕಂಗೆಟ್ಟಿದ್ದು, ಹನಿ ನೀರಿಲ್ಲದೇ ತನ್ನ ಕ್ಷೇತ್ರದ ಜನರು ಪರದಾಟ ನಡೆಸಿದ್ದಾರೆ. ಕೂಡಲೆ ಕಲೌವೆಗಳಿಗೆ ನೀರು ಹರಿಸಬೇಕು ಎಂದು ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್, ಇಂಡಿ ಕ್ಷೇತ್ರದ ಕಟ್ಟಕಡೆಯ ಹಳ್ಳಿಗೂ ನೀರು ಬಿಟ್ಟಿಲ್ಲ. ನನ್ನ ಕ್ಷೇತ್ರದ ಗ್ರಾಮಗಳಿಗೆ ತಕ್ಷಣ ನೀರು ಬಿಡದಿದ್ದರೆ ನಾನು ನಾಳೆಯೇ ರಾಜೀನಾಮೆ ಕೊಡುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗುತ್ತಿ ಬಸವಣ್ಣ ಏತ ನೀರಾವರಿ, ಇಂಡಿ ಶಾಖಾ ಕಾಲುವೆಯಿಂದ ನೀರು ಹರಿಸಬೇಕು. ಆದರೆ ಈವರೆಗೂ ನೀರು ಬಿಟ್ಟಿಲ್ಲ. ಜನರು ಒಂದೆಡೆ ಬರದಿಂದ ತತ್ತರಿಸಿದ್ದಾರೆ. ಇನ್ನೊಂದೆಡೆ ಕಾಲುವೆಗೆ ಹರಿಸಬೇಕಾದ ನೀರನ್ನು ಜಿಲ್ಲಾಡಳಿತ ಬಿಡುತ್ತಿಲ್ಲ. ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡಲು ಆಗಲ್ಲ, ಅವರ ಬೇಡಿಕೆ ಈಡೇರಿಸಲು ಆಗುವುದಿಲ್ಲ ಅಂದಮೇಲೆ ಜನಪ್ರತಿನಿಧಿಯಾಗಿ ಏನು ಪ್ರಯೋಜನ? ನೀರು ಬಿಡದಿದ್ದರೆ ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾಡಿದ್ದು ರಾಜಕೀಯದಿಂದಲೇ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ