*ಕಾಂಗ್ರೆಸ್ ಕಚೇರಿಯೇ ದೇಗುಲ, ಅದರ ನಿರ್ಮಾಣವೇ ನೀವು ಪಕ್ಷಕ್ಕೆ ನೀಡುವ ಕೊಡುಗೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕಾಂಗ್ರೆಸ್ ಕಚೇರಿ ನಮಗೆಲ್ಲ ದೇಗುಲವಿದ್ದಂತೆ. ಶಾಸಕರು ಹಾಗೂ ಬ್ಲಾಕ್ ಅಧ್ಯಕ್ಷರು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿ ನಿರ್ಮಾಣ ಮಾಡಿದಾಗ ಮಾತ್ರ ಕಾಂಗ್ರೆಸ್ ಪಕ್ಷ ನಿಮಗೆ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ. ಇಲ್ಲವಾದರೆ ಪಕ್ಷಕ್ಕೆ ನಿಮ್ಮ ಕೊಡುಗೆ ಏನೂ ಇರುವುದಿಲ್ಲ ಎಂದು ಸಂಕೋಚವಿಲ್ಲದೇ ಹೇಳುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು.
“ಇಂದು ರಕ್ಷಾ ಬಂಧನ ಹಬ್ಬ ಹಾಗೂ ಕ್ವಿಟ್ ಇಂಡಿಯಾ ದಿನಾಚರಣೆ ದಿನ. ಈ ದಿನ ನಾವು ಶಂಕುಸ್ಥಾಪನೆ ಮಾಡುತ್ತಿದ್ದೇವೆ. ನಿನ್ನೆ (ಶುಕ್ರವಾರ) ಈ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೆವು. ಆದರೆ ಬೇರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಯಿತು ಎಂದರು.
“ಇದು ಹೆಸರಿಗೆ ಕಾಂಗ್ರೆಸ್ ಭವನ. ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಇದೊಂದು ದೇವಸ್ಥಾನ. ಪ್ರಜಾಪ್ರಭುತ್ವ ಉಳಿಸುವ ಸೌಧ ಇದು. ಸಿದ್ದರಾಮಯ್ಯ, ಯತೀಂದ್ರ, ಮಹದೇವಪ್ಪನವರು ಇದನ್ನು ಮಾಡುತ್ತಾರೆ ಎಂಬುದಷ್ಟೇ ಅಲ್ಲ. ಪ್ರತಿಯೊಬ್ಬ ಕಾರ್ಯಕರ್ತರು, ನೀವೆಲ್ಲರೂ ನಿಮ್ಮ ಕೈಲಾದಷ್ಟು ದೇಣಿಗೆ ನೀಡಿ ಈ ಭವನ ನಿರ್ಮಾಣಕ್ಕೆ ನೆರವಾಗಬೇಕು. ಅದು 100 ರೂ.ಆಗಿರಲಿ, 1 ಸಾವಿರ ಆಗಿರಲಿ. ಈ ಕಟ್ಟಡ ನಿರ್ಮಾಣಕ್ಕೆ ನಿಮ್ಮ ಸೇವೆಯೂ ಇದೆ ಎಂಬ ಭಾವನೆ ನಿಮಗೆ ನಿಮ್ಮ ಮನೆಯವರಿಗೆ ಇರಬೇಕು” ಎಂದು ಹೇಳಿದರು.
“ತನ್ವೀರ್ ಸೇಠ್, ತಿವಾರಿ ಅವರ ಮನವಿ ಮೇರೆಗೆ ಹಾಗೂ ಕಾಂಗ್ರೆಸ್ ಪಕ್ಷ ನನಗೆ ಆರು ಬಾರಿ ಟಿಕೆಟ್ ನೀಡಿದೆ ಎಂದು ಈ ಆಸ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿ ನೂರು ವರ್ಷಗಳು ತುಂಬಿವೆ. ಇಂದು ಆ ಸ್ಥಾನದಲ್ಲಿ ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. ಇದರ ನೆನಪಿನಲ್ಲಿ ರಾಜ್ಯದ 100 ಕಡೆ ಕಾಂಗ್ರೆಸ್ ಕಚೇರಿ ನಿರ್ಮಿಸುವ ಗುರಿ ಹೊಂದಿದ್ದೇವೆ” ಎಂದು ತಿಳಿಸಿದರು.
“ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇಲ್ಲಿ ನಾವು ನೀವು ಸೇರಿದಂತೆ ಯಾರೂ ಶಾಶ್ವತವಾಗಿ ಉಳಿಯುವುದಿಲ್ಲ. ನೀವೆಲ್ಲರೂ ನಿಮ್ಮ ಗುರುತು ಬಿಟ್ಟು ಹೋಗಬೇಕು ಎಂದು ಶಾಸಕರಾದ ಧ್ರುವನಾರಾಯಣ, ವೆಂಕಟೇಶ್, ರವಿಶಂಕರ್ ಅವರಿಗೆ ಹೇಳುತ್ತೇನೆ. ನಾವು ದೇವರಾಜ ಅರಸು, ಅಜೀಜ್ ಸೇಠಿ ಅವರನ್ನು ನಾವು ಸ್ಮರಿಸುತ್ತಿರುವ ರೀತಿ ನಿಮ್ಮನ್ನು ಸಹ ಭವಿಷ್ಯದಲ್ಲಿ ಜನ ಸ್ಮರಿಸಬೇಕು” ಎಂದು ಕರೆ ನೀಡಿದರು.
“ಶಾಸಕರ ಮನೆಯಲ್ಲಿ ಕಾಂಗ್ರೆಸ್ ಕಚೇರಿ ಮಾಡುವುದಲ್ಲ. ಶಾಶ್ವತವಾಗಿ ಪಕ್ಷಕ್ಕಾಗಿ ಕಚೇರಿ ಇರಬೇಕು. ಈ ಹಿಂದೆಯೇ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಬೇಕಿತ್ತು ಎಂದು ನಾನು ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ಜೊತೆ ಚರ್ಚೆ ಮಾಡಿದ್ದೆ. ತಡವಾದರೂ ಈಗ ಈ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್ ಹಾಗೂ ಜಿಲ್ಲಾಧ್ಯಕ್ಷರ ಪಕ್ಷ ನಿಷ್ಠೆ, ನಾಯಕತ್ವ, ಪಕ್ಷ ಸಂಘಟನೆ ವಿಚಾರದಲ್ಲಿ ನನಗೆ ಸಂತೋಷ ತಂದಿದೆ” ಎಂದರು.
“ಇತ್ತೀಚೆಗೆ ಮದ್ದೂರಿನಲ್ಲಿ ಶಾಸಕ ಉದಯ್ ಅವರು ತಮ್ಮ ಹಣದಲ್ಲಿ ನಿವೇಶನ ಖರೀದಿ ಮಾಡಿ ಪಕ್ಷಕ್ಕೆ ನೀಡಿದರು. ಅದೇ ರೀತಿ ಎನ್.ಟಿ ಶ್ರೀನಿವಾಸ್, ರೋಣ ಶಾಸಕರು, ಸಂತೋಷ್ ಲಾಡ್, ಶರಣಪ್ರಕಾಶ್ ಪಾಟೀಲ್ ಅವರು ಪಕ್ಷಕ್ಕೆ ತಮ್ಮ ಜಾಗವನ್ನು ನೀಡಿದ್ದಾರೆ. ನಾನು ರಾಮನಗರದಲ್ಲಿ ನಿವೇಶನ ನೀಡಿ ಕಟ್ಟಡ ನಿರ್ಮಾಣವಾಗುತ್ತಿದೆ. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು 1 ಕೋಟಿ ನೀಡುವುದಾಗಿ ಹೇಳಿದ್ದು, ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಅವರು 1 ಕೋಟಿ ನೀಡುವುದಾಗಿ ಹೇಳಿದ್ದಾರೆ. ಇತರೆ ಶಾಸಕರು ತಮ್ಮ ಕ್ಷೇತ್ರದಲ್ಲಿ ಕಚೇರಿ ನಿರ್ಮಾಣದ ಜೊತೆಗೆ 50 ಲಕ್ಷ ಘೋಷಿಸಿದ್ದಾರೆ” ಎಂದು ತಿಳಿಸಿದರು.