Kannada NewsKarnataka NewsLatestUncategorized

ಬೆನಕನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವಿರಾಟ ಸಭೆ: ಅಭಿವೃದ್ಧಿ ವಂಚಿತ ಗ್ರಾಮೀಣ ಕ್ಷೇತ್ರಕ್ಕೆ ಲಕ್ಕೀ ಶಾಸಕಿ ಸಿಕ್ಕಿದ್ದು ಇಲ್ಲಿಯ ಮತದಾರರ ಪುಣ್ಯ – ಅಶೋಕ ಚವ್ಹಾಣ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿರೋಧ ಪಕ್ಷದಲ್ಲಿದ್ದರೂ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ಮಂಜೂರು ಮಾಡಿಸಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕಾರ್ಯವೈಖರಿ ಅಭಿನಂದನೀಯವಾಗಿದೆ. ಅವರು ಕ್ಷೇತ್ರದಲ್ಲಿ ಝಾಂಸಿ ರಾಣಿಯಂತೆ ತನ್ನದೇ ಆದ ಸೈನ್ಯವನ್ನು ಕಟ್ಟಿಕೊಂಡಿದ್ದು, ಲಕ್ಷ್ಮೀಯ ಸೈನ್ಯ ಗಮನಿಸಿದರೆ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎನಿಸುತ್ತಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ ಚವಾಣ ಅಭಿಪ್ರಾಯ ಪಟ್ಟರು.


ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ವಿರಾಟ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಮತದಾರರು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಸುಳ್ಳು ಭರವಸೆ ನೀಡುತ್ತಿದೆ. ಪ್ರಧಾನಿ ಮೋದಿ ಹಿಂದಿನ ಚುನಾವಣೆಯಲ್ಲಿ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದರು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಹಾಕುವುದಾಗಿ ಹೇಳಿದ್ದರು. ಪ್ರತಿ ವರ್ಷ ೨ ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಇವ್ಯಾವುವೂ ಈಡೇರಿಲ್ಲ. ಬಿಜೆಪಿ ಸುಳ್ಳಿನ ಕಂತೆ ಹೇಳಿ ದೇಶದ ವ್ಯವಸ್ಥೆಯನ್ನು ಹದಗೆಡಿಸಿದೆ. ಫುಲಬಾಮಾ ದಾಳಿ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸೈನಿಕರ ರಕ್ಷಣೆಗಾಗಿ ವಿಮಾನ ನೀಡದ್ದರಿಂದ ಅನೇಕ ಯೋಧರು ಹುತಾತ್ಮರಾಗಬೇಕಾಯಿತು. ಮೋದಿ ಸರ್ಕಾರ ಜಾರಿಗೆ ತಂದ ಜಿಎಸ್‌ಟಿಯಂದ ಯಾವುದೇ ಪ್ರಯೋಜನ ಆಗಲಿಲ್ಲ. ಎಲ್‌ಐಸಿ, ಎಸ್‌ಬಿಐ ಹಣವನ್ನು ಅದಾನಿ ಒಡೆತನದ ಕಂಪನಿಗಳಲ್ಲಿ ವಿನಿಯೋಗಿಸಿ ಜನರ ಹಣವನ್ನು ದುರುಪಯೋಗ ಮಾಡಿದೆ. ಮುಸ್ಲಿಮರ ಶೇ.೪ ಮೀಸಲಾತಿಯನ್ನು ಕಡಿಮೆ ಮಾಡಿ ಒಕ್ಕಲಿಗ ಲಿಂಗಾಯತರಿಗೆ ನೀಡಿದೆ. ಮರಾಠರಿಗೆ ಯಾವುದೇ ಮೀಸಲಾತಿ ನೀಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ವಂಚಿತ ಗ್ರಾಮೀಣ ಕ್ಷೇತ್ರಕ್ಕೆ ಲಕ್ಕೀ ಶಾಸಕಿ ಸಿಕ್ಕಿದ್ದು ಇಲ್ಲಿಯ ಮತದಾರರ ಪುಣ್ಯ. ಕಾಂಗ್ರೆಸ್ ಪಕ್ಷ ರಾಜ್ಯದ ಮತದಾರರಿಗಾಗಿ ಜನಪರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ನೀಡಿದ ಘೋಷಣೆಗಳನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸಲಿದೆ. ಜೊತೆಗೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಹಾಡಲಿದೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ತಾವು ೨೦೧೮ರ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರದ ಔದ್ಯೋಗಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಚುನಾವಣಾ ಪ್ರಚಾರಕ್ಕಾಗಿ ಮಹಾರಾಷ್ಟ್ರದಿಂದ ಬಂದಿರುವ ಬಿಜೆಪಿಯ ಚಿತ್ರಾ ವಾಘ ಅವರಿಗೆ ಕ್ಷೇತ್ರದಲ್ಲಿ ಜನರನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ಓರ್ವ ಮಹಿಳೆಯಾಗಿ ತಮ್ಮ ಬಗ್ಗೆ ವಿಚಿತ್ರವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಉದ್ದೇಶವನ್ನು ಕ್ಷೇತದ ಜನತೆ ಅರಿತಿದ್ದಾರೆ. ಮೇ.೮ರ ಬಳಿಕ ವಿಚಿತ್ರ ಮನೋಭಾವದ ಚಿತ್ರಾ ಅವರ ಮೊಬೈಲ್ ಸ್ವಿಚ್ ಆಫ್ ಆಗಲಿದೆ. ಕ್ಷೇತ್ರದ ಎಂಇಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಕಳೆದ ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದು, ಪ್ರತಿ ವಿಶೇಷ ಸಂದರ್ಭಗಳಲ್ಲಿ ಬ್ಯಾನರ್ ಅಳವಡಿಸುವ ಕೆಲಸ ಮಾಡಿ ಪೋಸ್ಟರ್ ಬಾಯ್ಸ್ ಎಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಮೇ.೧೦ರ ಬಳಿಕ ಅವರನ್ನು ಮನೆಗೆ ಕಳಿಸುವ ಕೆಲಸ ಕ್ಷೇತ್ರದ ಮತದಾರರಿಂದ ಆಗಬೇಕು ಎಂದರು.

ಮಹಾರಾಷ್ಟ್ರದ ಶಾಸಕ ಅಮರ ರಾಜೂರಕರ ಮಾತನಾಡಿ, ೨೦೧೮ರಲ್ಲಿ ಲಕ್ಷ್ಮೀ ಕ್ಷೇತ್ರದ ಮತದಾರರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆ. ೧೮೦೦ ಕೋಟಿ ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದ್ದು, ಹೆಬ್ಬಾಳಕರ ಸಚಿವರಾಗಲಿದ್ದಾರೆ. ರಾಜ್ಯದ ಬಸವರಾಜ ಬೊಮ್ಮಾಯಿ ಪೇ ಸಿಎಂ ಆಗಿದ್ದು, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಮತದಾರರು ಪಣ ತೊಡಬೇಕು. ಬಿಜೆಪಿ ಬೆಲೆ ಏರಿಕೆ ಮಾಡಿ ಬಡವರಿಗೆ ತೊಂದರೆ ನೀಡಿದೆ. ಮೋದಿ ಸರ್ಕಾರ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿದೆ. ಸೋನಿಯಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಹಾರ ಸುರಕ್ಷಾ ಕಾಯ್ದೆ ಜಾರಿಗೆ ತಂದಿದ್ದರಿಂದ ಇಂದು ಎಲ್ಲರಿಗೂ ಪಡಿತರ ಸಿಗುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದ ಮತ್ತೋರ್ವ ಶಾಸಕ, ಮಾಜಿ ಸಚಿವ ಸತೇಜ್ ಉರ್ಫ್ ಬಂಟಿ ಪಾಟೀಲ ಮತನಾಡಿ, ವಿರಾಟಸಭೆಯಲ್ಲಿ ಭಾಗವಹಿಸಿದ್ದ ಜನರ ಉತ್ಸಾಹ ಗಮನಿಸಿದರೆ ಮೇ.೧೩ರಂದು ವಿಜಯೋತ್ಸವ ನಿಶ್ಚಿತ ಎಂಬುದು ಖಚಿತವೆನಿಸುತ್ತಿದೆ. ಓರ್ವ ಮಹಿಳೆಯಾಗಿ ಎಲ್ಲ ಸಮಾಜದ, ಎಲ್ಲ ಜಾತಿ-ಧರ್ಮ-ಭಾಷೆಯ ಜನರ ಏಳಗೆಗಾಗಿ ಲಕ್ಷ್ಮೀ ಹೆಬ್ಬಾಳಕರ ಶ್ರಮಿಸಿದ್ದಾರೆ. ರಾಜಸಂಹಗಡದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಿದ ಲಕ್ಷ್ಮೀ ಪರ ಇಡೀ ಕ್ಷೇತದ ಜನತೆ ಇದ್ದಾರೆ. ಶಿವಾಜಿ ಮಹಾರಾಜರ ವಂಶಜ ಸಂಭಾಜಿ ರಾಜೇ ಈ ಪವಿತ್ರಭೂಮಿಗೆ ಬಂದು ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಿದ್ದಾರೆ. ಬಿಜೆಪಿ ಪುತ್ಥಳಿ ಉದ್ಘಾಟನೆಯ ವಿಷಯದಲ್ಲಿ ರಾಜಕಾರಣ ಮಾಡಿ ಕ್ಷೇತ್ರದ ಜನರ ಮನಸ್ಸಿನಲ್ಲಿ ಕುಗ್ಗಿಹೋಗಿದೆ. ಕೆಲಸ ಮಾಡುವವರಿಗೆ ಗೌರವ ಇದ್ದೇ ಇದೆ ಎಂಬುದನ್ನು ಲಕ್ಷ್ಮೀ ತಮ್ಮ ಬಿಡುವಿಲ್ಲದ ಜನಸೇವೆಯಿಂದ ಸಾಬೀತು ಮಾಡಿದ್ದಾರೆ. ಅವರು ಯಾರನ್ನೂ ಕಡೆಗಣಿಸಿಲ್ಲ. ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ. ರಾಜ್ಯದ ಶೇ.೪೦ ಸರ್ಕಾರವನ್ನು ಜನ ಧಿಕ್ಕರಿಸಲಿದ್ದಾರೆ. ಪ್ರಧಾನಿ ಮೋದಿಯವರು ಮೊದಲ ಬಾರಿ ಮನ್ ಕೀ ಬಾತ್ ಪ್ರಾರಂಭಿಸಿದಾಗ ಪೆಟ್ರೋಲ್ ರೂ.೬೦ ಸಿಲೆಂಡರ್ ರೂ.೪೦೦ಕ್ಕೆ ಸಿಗುತ್ತಿತ್ತು. ಅವರ ನೂರನೇ ಮನ್ ಕೀ ಬಾತ್ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ರೂ.೧೦೨ ಮತ್ತು ಸಿಲಿಂಡರ್ ಬೆಲೆ ರೂ.೧೧೦೦-೧೨೦೦ಕ್ಕೆ ಏರಿದೆ. ಇದು ಬಿಜೆಪಿಯ ಸಾಧನೆ. ಬಿಜೆಪಿಯವರು ಮತ ಕೇಳಲು ಬಂದರೆ ಅವರ ಮುಂದೆ ಸಿಲಿಂಡರ್ ತಂದು ಇಡಿ. ಬೆಲೆ ಏರಿಕೆಯ ಬವಣೆಯನ್ನು ಅವರಿಗೆ ತಿಳಿಸಿ ಎಂದು ಕುಟುಕಿದರು.

ಪಕ್ಷದ ಮುಖಂಡ ಮೃಣಾಲ್ ಹೆಬ್ಬಾಳಕರ ಮಾತನಾಡಿ, ೫ ವರ್ಷಗಳ ಹಿಂದೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅಶೋಕ ಚವಾಣ ಬೆನಕನಹಳ್ಳಿ ಸಭೆಯನ್ನು ಟರ್ನಿಂಗ್ ಸಭೆ, ಇಂದು ವಿನ್ನಿಂಗ್ ಸಭೆ. ರಾಜಹಂಸಗಡದಲ್ಲಿ ಕೈಗೊಂಡ ಅಭಿವೃದ್ದಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದರು. ಯುವರಾಜ ಕದಮ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರ ಇದುವರೆಗೆ ಜಾತಿ, ಭಾಷೆ ಆಧಾರದ ಮೇಲೆ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು ಲಕ್ಷ್ಮೀ ಹೆಬ್ಬಾಳಕರ ಯಾವುದೇ ಬೇಧಭಾದ ಮಾಡದೇ ಕ್ಷೇತ್ರದ ಸರ್ವಾಂಗೀಣ ಅಭಿವೃದಿಗೆ ಶ್ರಮಿಸಿದ್ದಾರೆ. ಕ್ಷೇತ್ರದ ೧೧೦ ದೇವಾಲಯಗಳ ಜೀರ್ಣೋದ್ಧಾರ, ನೂರಾರು ರೋಗಿಗಳಿಗೆ ಸಿಎಂ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯ, ೧೬೦ ಶಾಲಾ ಕೋಣೆಗಳು ಮತ್ತು ಅಂಗನವಾಡಿಗಳನ್ನು ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಶಾಸಕ ವಿಶ್ವಜೀತ್ ಕದಮ್, ಮುಖಂಡರಾದ ಬಂಟಿ ಶೆಳಕೆ, ಸಿ.ಸಿ ಪಾಟೀಲ, ಗೋಪಾಳರಾವ್ ಪಾಟೀಲ, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಸುರೇಶ ಇಟಗಿ, ಬಾಳು ದೇಸೂರಕರ, ಮಲ್ಲೇಶ ಚೌಗುಲೆ, ಮನೋಹರ ಬೆಳಗಾಂವಕರ, ಅಡಿವೇಶ ಇಟಗಿ, ಎಸ್.ಎಂ ಬೆಳವಟಕರ ಸೇರಿದಂತೆ ಗ್ರಾಮೀಣ ಭಾಗದ ವಿವಿಧ ಗ್ರಾಮಗಳ ಸಾವಿರಾರು ಮತದಾರರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಲಕ್ಷ್ಮೀ ಹೆಬ್ಬಾಳಕರ ಅನುಯಾಯಿಗಳು ಇದ್ದರು.

https://pragati.taskdun.com/as-mann-ki-baat-numbers-rise-so-do-petrol-cylinder-prices-bunty-patil-sarcastically/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button