ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ತುಮಕೂರಿನ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ಇದಕ್ಕೆ ಕೆಲ ರೈತ ಸಂಘಟನೆಗಳು ಹಾಗೂ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ್ದರೆ, ಕಾಂಗ್ರೆಸ್ ನಾಯಕರು ಸರಣಿ ಟ್ವೀಟ್ ಮೂಲಕ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್, ಉತ್ತರ ಕೊಡಿ ಎನ್ನುವ ಹ್ಯಾಷ್ಟ್ಯಾಗ್ ಮೂಲಕ ಸರಣಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ಮುಂದೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಇಂದು ತುಮಕೂರಿಗೆ ಆಗಮಿಸಿರುವ ನೀವು ಇದಕ್ಕೂ ಮುನ್ನ ಸಿದ್ದಗಂಗಾ ಮಠದ ಗದ್ದುಗೆಗೆ ದರ್ಶನ ಪಡೆಯುತ್ತಿದ್ದೀರಾ. ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ‘ಶಿವಕುಮಾರ ಸ್ವಾಮೀಜಿ’ ಅವರು ಲಿಂಗೈಕ್ಯರಾದಾಗ ಏಕೆ ತುಮಕೂರಿಗೆ ಭೇಟಿ ನೀಡಲಿಲ್ಲ?
ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬಂದಿತ್ತು. ಅಲ್ಲದೇ ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರೂ, ಅವರಿಗೆ ಇನ್ನು ಯಾಕೆ ಭಾರತ ರತ್ನ ನೀಡಿಲ್ಲ? ಇದಕ್ಕೆ ಉತ್ತರ ಕೊಡಿ ಎಂದು ಒತ್ತಾಯಿಸಿದೆ.
ಭೀಕರ ನೆರೆ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿಲ್ಲ ಏಕೆ? 1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾದರೂ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿಲ್ಲ ಏಕೆ? ಮಧ್ಯಂತರ ಪರಿಹಾರ ನೀಡಲಿಲ್ಲ ಏಕೆ? ರಾಜ್ಯ ಸರ್ಕಾರವೇ 35,300 ಕೋಟಿ ನಷ್ಟ ಆಗಿದೆ ಎಂದು ವರದಿ ನೀಡಿದರೂ ಕೇವಲ 1200 ಕೋಟಿ ನೀಡಿ ಸುಮ್ಮನಾಗಿದ್ದು ಏಕೆ?
ರಾಜ್ಯಕ್ಕೆ ಕೇಂದ್ರದಿಂದ ನೀಡಬೇಕಾದ ತೆರಿಗೆಯ (ಜಿ.ಎಸ್.ಟಿ) ಪಾಲು ಸಮರ್ಪಕವಾಗಿ ನೀಡುತ್ತಿಲ್ಲ ಏಕೆ? ರಾಜ್ಯಕ್ಕೆ ಬರಬೇಕಾದ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಬಾಕಿಯನ್ನು ಇದುವರೆಗೂ ಏಕೆ ನೀಡಿಲ್ಲ? ಅನುದಾನ ಹಂಚಿಕೆಯಲ್ಲಿ ಕರ್ನಾಟಕವನ್ನು ಕಡೆಗಣಿಸಿರುವುದು ಏಕೆ? #ಉತ್ತರಕೊಡಿಮೋದಿ ಎಂದು ಆಗ್ರಹಿಸಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳ ಕಾವಲ್ ನಲ್ಲಿ ಎಚ್ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ, 2018ರ ಅಂತ್ಯಕ್ಕೆ ಮೊದಲ ಸ್ವದೇಶಿ ಹೆಲಿಕಾಪ್ಟರ್ ಹಾರಲಿದೆ ಎಂದಿರಿ, 3 ವರ್ಷ ಕಳೆದರೂ ಇನ್ನೂ ಒಂದೂ ಹೆಲಿಕಾಪ್ಟರ್ ತಯಾರಾಗಿಲ್ಲ ಏಕೆ? ಅಧಿಕಾರಕ್ಕೆ ಬಂದರೆ ರೈತರ ಆದಾಯ ದುಪ್ಪಟ್ಟು ಮಾಡಿ, ಆತ್ಮಹತ್ಯೆ ತಡೆಯುವುದಾಗಿ ಚುನಾವಣೆ ಪ್ರಚಾರದ ವೇಳೆ ಹೇಳಿದಿರಿ, ರಾಜ್ಯದಲ್ಲಿ ಕಳೆದ 8 ತಿಂಗಳಲ್ಲಿ 453 ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ತಡೆಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ ಏಕೆ?
ವಿಕಾಸ್ ಎಲ್ಲಿ? ಕಪ್ಪು ಹಣ ಎಲ್ಲಿ? ಉದ್ಯೋಗ ಸೃಷ್ಟಿ ಎಲ್ಲಿ? ರೈತರ ಆದಾಯ ದ್ವಿಗುಣ ಎಲ್ಲಿ? ಮಹಿಳಾ ಸಬಲೀಕರಣ ಎಲ್ಲಿ? ನಿಮ್ಮ ಮೊದಲ ಪತ್ರಿಕಾಗೋಷ್ಠಿ ಎಲ್ಲಿ?
ಈ ಹಿಂದೆ ತುಮಕೂರಿಗೆ ಭೇಟಿ ನೀಡಿ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡಿ 8 ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಿರಿ, ನದಿ ಜೋಡಣೆ ಪ್ರಕ್ರಿಯೆ ಆರಂಭವಾಗಿದೆಯೇ? ಈಗ ಯಾವ ಹಂತದಲ್ಲಿದೆ? ಆಗಿರುವ ಖರ್ಚು ವೆಚ್ಚಗಳೇನು? ಯೋಜನೆ ಪೂರ್ಣಗೊಳ್ಳುವುದು ಯಾವಾಗ?
ಇದು ಭಾರತ ಗಣರಾಜ್ಯ, ಭಾರತದ ಸಾಂವಿಧಾನದಲ್ಲಿ ಯಾವ ಭಾಷೆಯೂ ರಾಷ್ಟ್ರ ಭಾಷೆಯಲ್ಲ. ಹಾಗಿದ್ದರೂ, ಸಂವಿಧಾನದ 8ನೇ ಪರಿಚ್ಚೇಧದಲ್ಲಿನ ಎಲ್ಲಾ ಭಾಷೆಗಳಿಗೂ ಅಧಿಕೃತ, ಸಮಾನ ಸ್ಥಾನಮಾನ ನೀಡುತ್ತಿಲ್ಲ ಏಕೆ? ಜನ ಜೀವನದ ಮಾತೃ ಭಾಷೆಗಳನ್ನು, ಪ್ರಾದೇಶಿಕ ಭಾಷೆಗಳನ್ನ ಕಡೆಗಣಿಸಿ ‘ಹಿಂದಿ’ ಭಾಷೆಯನ್ನು ಹೇರುತ್ತಿರುವುದೇಕೆ?
ಗಡಿ ವಿವಾದದಲ್ಲಿ ಮಹಾರಾಷ್ಟ್ರ – ಕರ್ನಾಟಕ ಬಿಜೆಪಿ ನಾಯಕರು ತದ್ವಿರುದ್ಧ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವುದೇಕೆ? ಉಭಯ ರಾಜ್ಯಗಳ ನಡುವೆ ಶಾಂತಿ ಸ್ಥಾಪಿಸಬೇಕಾದ @BJP4India ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ತಮ್ಮದೇ ಪಕ್ಷದ ಶಾಸಕರ ಹೇಳಿಕೆಯನ್ನು ಖಂಡಿಸುತ್ತಿಲ್ಲ ಏಕೆ? ಉತ್ತರ ನೀಡಿ ಪ್ರಧಾಅನಿ ಮೋದಿಯವರೆ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ