Kannada NewsKarnataka NewsPolitics

*2028 ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ವಿರೋಧ ಪಕ್ಷಗಳು ಹಗಲುಗನಸು ಕಾಣುವುದನ್ನು ಬಿಡಬೇಕು. ಏಕೆಂದರೆ 2028 ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಜನಸೇವೆ ಮುಂದುವರೆಸಲಿದೆ ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ರಾಜ್ಯದಲ್ಲಿ ಅಭಿವೃದ್ಧಿಯ ಸಂಗಮವಾಗಿದೆ. 2 ಸಾವಿರ ಕೋಟಿ ರೂ. ಮೊತ್ತದ ಅಭಿವೃದ್ಧಿ ಕೆಲಸವನ್ನು ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದರೆ ನಮ್ಮ ಜನಪರ ಧೋರಣೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಇಡೀ ಸರ್ಕಾರವೇ ಬಂದಿದೆ ಎಂದರೆ ನಮಗೆ ಜನರ ಮೇಲಿನ ಪ್ರೀತಿಯೇ ಕಾರಣ” ಎಂದು ಹೇಳಿದರು. 

“ರಾಜ್ಯದ ಪ್ರತಿ ಮಹಿಳೆಯರು ಅವರ ಖಾತೆಗೆ ಹಣ ಬಂದಾಗಲೆಲ್ಲಾ ನಮ್ಮ ಸರ್ಕಾರವನ್ನು ನೆನಪಿಸಿಕೊಳ್ಳುತ್ತಾರೆ. ಯಾವುದೇ ಪುಣ್ಯ ಕ್ಷೇತ್ರಗಳಿಗೆ ಹೋದರೂ ನಮ್ಮ ಒಳಿತಿಗೆ ಪ್ರಾರ್ಥನೆ ಮಾಡುತ್ತಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬಂದಾಗ ಮಹಿಳೆಯರು ಗೌರವದಿಂದ ಅವರಿಗೆ ನಮಿಸಿದರು. ಮಹಿಳೆಯರ ಬದುಕಿನಲ್ಲಿ ನಾವು ತಂದಿರುವ ಬದಲಾವಣೆಯನ್ನು ಇಡೀ ದೇಶವೇ ನೋಡುತ್ತಿದೆ” ಎಂದರು. 

Home add -Advt

“ಸತ್ಯಕ್ಕೂ ಸುಳ್ಳಿಗೂ ಎಷ್ಟು ಅಂತರ ಎಂದು ಅಕ್ಬರ್ ಒಮ್ಮೆ ಬೀರ್ಬಲ್ ಅವರನ್ನು ಕೇಳುತ್ತಾನೆ. ಆಗ ಬೀರ್ಬಲ್ ನಾಲ್ಕು ಬೆರಳಿನ ಅಂತರ ಎಂದು ಹೇಳುತ್ತಾರೆ. ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ಸಾವಿರ ಕೋಟಿ ಮೊತ್ತವನ್ನು ನೀಡಿದೆ. ಇದಕ್ಕೆ ನಿಮ್ಮೆಲ್ಲರ ಕಣ್ಣುಗಳೇ ಸಾಕ್ಷಿ” ಎಂದು ಹೇಳಿದರು.

2027 ಕ್ಕೆ ಜಿಲ್ಲೆಗೆ ಎತ್ತಿನಹೊಳೆ ನೀರು

“ಸಚಿವರಾದ ಕೆ.ಎಚ್.ಮುನಿಯಪ್ಪ ಅವರು, ಸುಧಾಕರ್ ಅವರು ಹಾಗೂ ಕೃಷ್ಣಬೈರೇಗೌಡರು ನನ್ನ ಬೆನ್ನತ್ತಿದ್ದು 2027 ರ ಹೊತ್ತಿಗೆ ಎರಡು ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಪರ್ಯಾಯವಾಗಿ ಕಂದಾಯ ಭೂಮಿ ನೀಡಿದ್ದರೂ ಕೇಂದ್ರ ಪರಿಸರ ಇಲಾಖೆ ಅರಣ್ಯ ಭೂಮಿ ಬಳಕೆಗೆ ಅನುಮತಿ ನೀಡುತ್ತಿಲ್ಲ” ಎಂದರು.

“ಕೆ. ಸಿ ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ 143 ಕೆರೆ ತುಂಬಿಸಲಾಗಿದೆ. 2ನೇ ಹಂತದಲ್ಲಿ 272 ಕೆರೆ ಭರ್ತಿ ಮಾಡುತ್ತಿದ್ದೇವೆ. ಈ ಯೋಜನೆಯನ್ನು ವಿಶ್ವಬ್ಯಾಂಕ್ ಕೂಡ ಹೊಗಳಿದೆ. ಎಚ್. ಎನ್. ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ 65 ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ಬೆಂಗಳೂರಲ್ಲಿ ಕೆರೆಗಳ ಇಂಟರ್ ಲಿಂಕ್ ಮಾಡೋಕೆ ಅಂತ 1700 ಕೋಟಿ ರೂಪಾಯಿ ಮೊತ್ತದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನೆಲಮಂಗಲದಲ್ಲಿ ವೃಷಭಾವತಿಯಿಂದ 70 ಕೆರೆ ತುಂಬಿಸಲಾಗುತ್ತಿದೆ” ಎಂದರು. 

ಕೆರೆಗಳಿಗೆ ನೀರು ನಮ್ಮ ಆರನೇ ಗ್ಯಾರಂಟಿ

“ಕೆರೆಗಳನ್ನು ತುಂಬಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ. ವ್ಯವಸಾಯಕ್ಕೆ ಹಾಗೂ ಕುಡಿಯುವುದಕ್ಕೆ ನೀರನ್ನು ನೀಡುವುದೇ ನಮ್ಮ ಉದ್ದೇಶ. ಏಳನೇ ಗ್ಯಾರಂಟಿಯಾಗಿ 1,11,11,111 ಜನರಿಗೆ ಖಾತೆಗಳನ್ನು ನೀಡಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಹತ್ತು ಕಿಲೋ ಅಕ್ಕಿ ನೀಡುತ್ತಿದ್ದೆವು. ಆದರೆ ಐದು ಕಿಲೋ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ಕಾರಣಕ್ಕೆ ಅಡುಗೆ ಎಣ್ಣೆ, ಬೇಳೆಕಾಳುಗಳ ಕಿಟ್ ನೀಡುವ ಆಲೋಚನೆ ಮಾಡಿದ್ದೇವೆ. ಶೀಘ್ರದಲ್ಲೆ ಎಲ್ಲರಿಗೂ ಈ ಯೋಜನೆ ತಲುಪಲಿದೆ” ಎಂದು ತಿಳಿಸಿದರು. 

“ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜನತೆ ಬಗ್ಗೆ ನನಗೆ ಅಪಾರ ಗೌರವ. ಏಕೆಂದರೆ ನೀವು ಶ್ರಮ ಜೀವಿಗಳು, ನೀರಿನ ಬೆಲೆ ಅರಿತಿರುವವರು. ತರಕಾರಿ, ಹೂ, ಹಣ್ಣು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳನ್ನು ರಾಜ್ಯಕ್ಕೆ ನೀಡುತ್ತಿರುವವರು. ಅಶುದ್ಧ ನೀರನ್ನು ಶುದ್ಧೀಕರಣಗೊಳಿಸಿ ಅದನ್ನು ನಿಮ್ಮ ಕೆರೆಗಳಿಗೆ ಹರಿಸುವ ಕೆಲಸ ಮಾಡಲಾಗುತ್ತಿದೆ. ಇಡೀ ದೇಶವೇ ಈ ಯೋಜನೆಯನ್ನು ಹೊಗಳುತ್ತಿದೆ” ಎಂದು ಹೇಳಿದರು.

“ಶಿಡ್ಲಘಟ್ಟದ ನೀರು ಅತ್ಯುತ್ತಮವಾದುದು, ರೇಷ್ಮೆ ನೂಲು ಉತ್ತಮವಾಗಿ ಬರುತ್ತದೆ ಎಂದು ಇಲ್ಲಿಂದ ಟ್ಯಾಂಕರ್ ನಲ್ಲಿ ನೀರು ತಂದು ನಮ್ಮ ಊರಿನಲ್ಲಿ ನೂಲು ತೆಗೆಯಲಾಗುತ್ತದೆ. ಚೈನಾದಿಂದ ರೇಷ್ಮೆ ಆಮದು ಕಡಿಮೆಯಾದ ಕಾರಣಕ್ಕೆ ನಮ್ಮ ರೇಷ್ಮೆಗೆ ಅತ್ಯುತ್ತಮ ಬೆಲೆ ಬಂದಿದೆ. ಈಗ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಅನೇಕ ಕಡೆ ರೇಷ್ಮೆ ಬೆಳೆಯಲಾಗುತ್ತಿದೆ” ಎಂದರು.

ಪಂಚ ಪಾಂಡವರಂತೆ ಜಿಲ್ಲೆಯ ಅಭಿವೃದ್ದಿಗೆ ಕೆಲಸ

“ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚೆಂದ, ಈ ಧಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಹೇಳಿದ್ದೇನೆ. ಡಾ.ಸುಧಾಕರ್ ಅವರು, ಸುಬ್ಬಾರೆಡ್ಡಿ ಅವರು, ಪುಟ್ಟಸ್ವಾಮಿ ಗೌಡರು, ಪ್ರದೀಪ್ ಈಶ್ವರ್ ಅವರು, ರವಿಕುಮಾರ್ ಅವರು ಜಿಲ್ಲೆಯ ಅಭಿವೃದ್ದಿಗೆ ಕೈ ಜೋಡಿಸಿ ಪಂಚ ಪಾಂಡವರಂತೆ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಜನರ, ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

“ನನ್ನ ಆಪ್ತಮಿತ್ರ ವಿ.ಮುನಿಯಪ್ಪ ಅವರ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸರಿಯಿದ್ದಿದ್ದರೆ ಅವರೇ ಇಲ್ಲಿನ ಶಾಸಕರು, ಅವರೇ ಮಂತ್ರಿ. ಇದನ್ನು ಯಾರೂ ತಪ್ಪಿಸಲು ಆಗುತ್ತಿರಲಿಲ್ಲ” ಎಂದರು.

Related Articles

Back to top button