ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪ್ರಮುಖ ನಿರ್ಣಯಗಳು:
- ಸಿಕ್ಕಿಂ, ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಕುರ್ಸಿಯೊಂಗ್ ಬೆಟ್ಟ ಪ್ರದೇಶದಲ್ಲಿ ಸಂಭವಿಸಿದ ತೀವ್ರ ಪ್ರವಾಹ ಹಾಗೂ ಭಾರತೀಯ ಸೇನಾಪಡೆಗಳ ಸಿಬ್ಬಂದಿಯೂ ಸೇರಿದಂತೆ ಸಂಭವಿಸಿದ ಜೀವಹಾನಿಗೆ ಸಿ.ಡಬ್ಲ್ಯು.ಸಿ. ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಸಾಮೂಹಿಕ ಮತ್ತು ವಿಶ್ವಾಸಾರ್ಹ ಪರಿಸರ ಪರಿಣಾಮ ಮೌಲ್ಯಮಾಪನವನ್ನು ಸೂಕ್ಷ್ಮವಾದ ಹಿಮಾಲಯನ್ ಪ್ರದೇಶಗಳಲ್ಲಿ ಕೈಗೊಳ್ಳುವುದರ ಅಗತ್ಯತೆಯನ್ನು ಸಿ.ಡಬ್ಲ್ಯುಸಿ ಒತ್ತು ನೀಡುತ್ತದೆ. ಕೇಂದ್ರ ಸರ್ಕಾರವು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗದ ಪರ್ವತ ಶ್ರೇಣಿಗಳ ಪ್ರದೇಶದಲ್ಲಿ ಎಲ್ಲ ಅಗತ್ಯ ನೆರವು ಒದಗಿಸುವಂತೆ ಸಿಡಬ್ಲ್ಯುಸಿಯು ಒತ್ತಾಯಿಸುತ್ತದೆ. ಜೊತೆಗೆ ರಾಜಕೀಯ ಪಕ್ಷಪಾತ ಧೋರಣೆಯನ್ನು ಬದಿಗಿಟ್ಟು ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಸಿ.ಡಬ್ಲ್ಯು.ಸಿ. ಒತ್ತಾಯಿಸಿದೆ.
- ಬಿಹಾರ ಸರ್ಕಾರವು ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿರುವುದನ್ನು ಸಿ.ಡಬ್ಲ್ಯು.ಸಿ. ಸ್ವಾಗತಿಸುತ್ತದೆ. ಸಮೀಕ್ಷೆಯ ಅಂಕಿ ಅಂಶಗಳಿಂದ ವಿವಿಧ ಜಾತಿಗಳ ಜನಸಂಖ್ಯೆ ಪ್ರಮಾಣ ಹಾಗೂ ಪ್ರಾತಿನಿಧ್ಯದ ನಡುವೆ ಭಾರಿ ಅಂತರ ಇರುವುದು ಬಹಿರಂಗಗೊಂಡಿದ್ದು, ಸಾಮಾಜಿಕ ನ್ಯಾಯ ಖಾತರಿಪಡಿಸುವ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ ಎನ್ನುವುದನ್ನು ತೋರಿಸುತ್ತದೆ. ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ರೋಹಿಣಿ ಆಯೋಗದ ಧ್ಯೇಯೋದ್ದೇಶವನ್ನು ಸಿಡಬ್ಲ್ಯುಸಿ ಸ್ವಾಗತಿಸುತ್ತದೆ. ಆದರೆ ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಕುರಿತಂತೆ ಸವಿವರವಾದ ದತ್ತಾಂಶವಿಲ್ಲದೆ ಈ ಪ್ರಕ್ರಿಯೆ ಅಪೂರ್ಣವಾಗಲಿದೆ ಎಂದು ಸಿಡಬ್ಲ್ಯುಸಿ ಗಮನಿಸಿದ್ದಲ್ಲದೆ, ಇದನ್ನು ಕೇಂದ್ರ ಸರ್ಕಾರವು 2011ರಲ್ಲಿ ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯ ದತ್ತಾಂಶದಿಂದ ಪಡೆಯ ಬಹುದು ಅಥವಾ ಹೊಸದಾಗಿ ಜಾತಿ ಸಮೀಕ್ಷೆ ನಡೆಸಬಹುದು ಎಂದು ಅಭಿಪ್ರಾಯಪಟ್ಟಿತು.
ಈ ಬೆಳವಣಿಗೆಗಳು ರಾಷ್ಟ್ರವ್ಯಾಪಿ ಜಾತಿ ಸಮೀಕ್ಷೆ ನಡೆಸುವುದರ ಮಹತ್ವವನ್ನು ಎತ್ತಿ ಹಿಡಿದಿದೆ. ಇದರಿಂದ ದೇಶದ ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಕುರಿತು ನಿಖರ ಮಾಹಿತಿ ದೊರೆಯುವುದಲ್ಲದೆ ಸರ್ಕಾರದ ನೀತಿ ನಿರೂಪಣೆಗೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಖಾತರಿ ಪಡಿಸಲು ಅತ್ಯುತ್ತಮ ದತ್ತಾಂಶ ಆಧಾರಿತ ತಳಹದಿ ಒದಗಿಸಿದಂತಾಗುತ್ತದೆ. ಮೋದಿ ಸರ್ಕಾರವು 2011ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆಯ ವರದಿಯನ್ನು ಬಹಿರಂಗ ಪಡಿಸದೆ ಹಿಂದುಳಿದ ವರ್ಗಗಳು ಮತ್ತು ಇತರ ಅವಕಾಶವಂಚಿತ ಸಮುದಾಯಗಳನ್ನು ವಂಚಿಸಿದೆ. 2021 ರಲ್ಲಿ ನಡೆಸಬೇಕಾಗಿದ್ದ ಜನಗಣತಿಯನ್ನು ಮುಂದೂಡುವ ಮೂಲಕ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಜಿ20 ರಾಷ್ಟ್ರಗಳಲ್ಲಿ ಜನಗಣತಿ ಮಾಡಲು ವಿಫಲವಾದ ಏಕೈಕ ದೇಶವೆನಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಇದಲ್ಲದೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರತಿ ರಾಜ್ಯದಲ್ಲಿಯೂ ಜಾತಿ ಸಮೀಕ್ಷೆಯ ಅಗತ್ಯದ ಕುರಿತು ಹಲವಾರು ನಿಯೋಗಗಳು ತಮ್ಮ ಅಭಿಪ್ರಾಯ ತಿಳಿಸಿದ್ದು, 85ನೇ ಕಾಂಗ್ರೆಸ್ ಅಧಿವೇಶನದ ರಾಯ್‌ಪುರ್ ಘೋಷಣೆಯಲ್ಲಿಯೂ ಸ್ಥಾನ ಪಡೆದಿದೆ.
ಆದ್ದರಿಂದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ನೇತೃತ್ವದ ಸರ್ಕಾರವು: - ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು 2021ರಲ್ಲಿ ನಡೆಸಬೇಕಾಗಿದ್ದ, ಪ್ರತಿ ದಶಕದಲ್ಲೊಮ್ಮೆ ನಡೆಸುವ ಜನಗಣತಿಯ ಭಾಗವಾಗಿ ನಡೆಸಲಿದೆ.
ii. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಅತಿ ಶೀಘ್ರದಲ್ಲೇ ಜಾರಿಗೆ ತರಲಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೂ ಸೂಕ್ತ ಪ್ರಾತಿನಿಧ್ಯ ದೊರಕಿಸಲಾಗುವುದು. ಮೋದಿ ಸರ್ಕಾರವು ಅನಗತ್ಯವಾಗಿ ಹೇರಿರುವ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ಅಡಚಣೆಯನ್ನು ನಿವಾರಿಸಲಾಗುವುದು.
iii. ಜನಸಂಖ್ಯೆಯನ್ನು ಆಧರಿಸಿ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಸೌಲಭ್ಯ ಒದಗಿಸಲು ಅನುವಾಗುವಂತೆ ಶಾಸನ ರಚನೆಯ ಮೂಲಕ ಮೀಸಲಾತಿಗೆ ಶೇ. 50ರ ಮಿತಿಯನ್ನು ತೆಗೆದುಹಾಕಲಾಗುವುದು.
iv. ಮೋದಿ ಸರ್ಕಾರವು ಕೆಲವು ಪತ್ರಕರ್ತರು ಮತ್ತು ಬರಹಗಾರರ ಮೇಲೆ ನಡೆಸಿದ ದಾಳಿ ಹಾಗೂ ಭಯೋತ್ಪಾದನಾ ವಿರೋಧಿ ಕಾಯ್ದೆಗಳಡಿ ಪ್ರಕರಣ ದಾಖಲಿಸಿರುವುದನ್ನು ಸಿ.ಡಬ್ಲ್ಯು.ಸಿ. ಖಂಡಿಸುತ್ತದೆ. ಸರ್ಕಾರವೇ ಹರಿಯಬಿಟ್ಟ ಪಿತೂರಿಯ ಕತೆಗಳು ಪಿಎಂ ಕೇರ್ಸ್ ನಿಧಿಗೆ ಚೈನೀಸ್ ಕಂಪೆನಿಗಳಿಂದ ದೇಣಿಗೆ ಸ್ವೀಕಾರ, ಚೀನಾದ ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗೆ ಹೂಡಿಕೆ ಅವಕಾಶ, ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಯಂತ್ರಿಸಲು ಸರ್ಕಾರದ ಅಸಮರ್ಥತೆ ಹಾಗೂ ಇದೆಲ್ಲಕ್ಕಿಂತ ಹೆಚ್ಚಾಗಿ ಚೀನಾ ದೇಶ ನಮ್ಮ ಗಡಿ ಭಾಗದ ಅತಿಕ್ರಮಣ ಮಾಡಿರುವುದನ್ನು ನಿರಾಕರಿಸುವ ಮೂಲಕ ಪ್ರಧಾನಮಂತ್ರಿಗಳು 19-6-2020ರಂದು ಕ್ಲೀನ್ ಚಿಟ್ ನೀಡಿರುವುದು ಕೇಂದ್ರ ಸರ್ಕಾರದ ಬೂಟಾಟಿಕೆಯನ್ನು ಬಯಲಿಗೆಳೆದಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ