ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದೆ. ಅಭ್ಯರ್ಥಿಯಾಗಲು ಹತ್ತಾರು ಜನರು ಸಾಲು ಹಚ್ಚಿ ನಿಂತಿರುವಾಗ ಸತೀಶ್ ಜಾರಕಿಹೊಳಿ ಹೆಸರು ಕೇಳಿಬಂದಿರುವುದು ಅವರ ವಿರುದ್ಧ ಮಾಡಿರುವ ಷಢ್ಯಂತ್ರನಾ? ಆ ರೀತಿಯ ವದಂತಿ ಹರಡಿದ್ದು ಹೇಗೆ? ಸತೀಶ್ ಜಾರಕಿಹೊಳಿ ಲೋಕಸಭೆಗೆ ಅಭ್ಯರ್ಥಿಯಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಈ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು? ಇಲ್ಲಿರುವ ವೀಡಿಯೋ ನೋಡಿ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಅನೇಕರು ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯಲ್ಲಿ 25ಕ್ಕೂ ಹೆಚ್ಚು ಜನರು ಆಕಾಂಕ್ಷಿಗಳಿದ್ದರೆ, ಕಾಂಗ್ರೆಸ್ ನಲ್ಲಿ 4 -5 ಜನರು ಸಿದ್ದರಿದ್ದಾರೆ. ಆದರೆ ಗೆಲ್ಲುವ ಅಭ್ಯರ್ಥಿ ಯಾರು ಎನ್ನುವ ಕುರಿತು ಕಾಂಗ್ರೆಸ್ ಈಗಾಗಲೆ 2 ಬಾರಿ ಸಭೆ ನಡೆಸಿ ಚರ್ಚಿಸಿದೆ. ಸತೀಶ್ ಜಾರಕಿಹೊಳಿ ಚುನಾವಣೆಯ ನೇತೃತ್ವ ವಹಿಸಬೇಕೆನ್ನುವ ಒಟ್ಟಾಭಿಪ್ರಾಯ ಬಂದಿದ್ದು, ಅದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ.
ಆದರೆ, ಸತೀಶ್ ಜಾರಕಿಹೊಳಿಯೇ ಕಣಕ್ಕಿಳಿಯಬೇಕೆನ್ನುವ ಅಭಿಪ್ರಾಯ ಕೇಳಿ ಬಂದರೂ ಅದು ಒಟ್ಟಾಭಿಪ್ರಾಯವೂ ಅಲ್ಲ, ಅವರೂ ಒಪ್ಪಿಕೊಂಡಿಲ್ಲ. ಪಕ್ಷ ಆದೇಶಿಸಿದರೆ ತಾವು ನಿಲ್ಲಲು ಸಿದ್ಧ ಎಂದಿರುವ ಸತೀಶ್, ತಮ್ಮ ಹೆಸರು ಕೇಳಿ ಬರುತ್ತಿರುವುದು ಷಢ್ಯಂತ್ರ ಏನಲ್ಲ ಎಂದಿದ್ದಾರೆ. ಆದಾಗ್ಯೂ, ಇದು ರಾಜಕೀಯ. ಇದರಲ್ಲಿ ಇವೆಲ್ಲ ಇರುತ್ತವೆ ಎಂದೂ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಈಗ ಕಾಂಗ್ರೆಸ್ ಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಗೆಲುವು ಮುಖ್ಯವೇ ಹೊರತು, ಒಬ್ಬರ ವಿರುದ್ಧ ಒಬ್ಬರು ಷಢ್ಯಂತ್ರ ನಡೆಸುವಂತಹ ಸಾಧ್ಯತೆ ಕಾಣುತ್ತಿಲ್ಲ. ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾದ ನಂತರ ಲಕ್ಷ್ಮಿ ಹೆಬ್ಬಾಳಕರ್ ಸೇರಿದಂತೆ ಎಲ್ಲ ನಾಯಕರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಚುರುಕಿನ ಓಡಾಟ ನಡೆಸಿದ್ದಾರೆ.
ಒಟ್ಟಾರೆ, ಸತೀಶ್ ಜಾರಕಿಹೊಳಿ ಕಣಕ್ಕಿಳಿಯಲಿ ಬಿಡಲಿ, ಚುನಾವಣೆಯ ಜವಾಬ್ದಾರಿ ಅವರ ಹಗೆಲೇರಿರುವುದಂತೂ ನಿಜ. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ತಂದುಕೊಡುವ ಹೊಣೆಯನ್ನು ಕಾಂಗ್ರೆಸ್ ಪಕ್ಷ ಒಮ್ಮತದಿಂದ ಸತೀಶ್ ಹೆಗಲಿಗೆ ಹಾಕಿದೆ. ಬಿಜೆಪಿ ರಮೇಶ ಜಾರಕಿಹೊಳಿ ಹೆಗಲಿಗೆ ಹಾಕಬಹುದು. ಹಾಗಾಗಿ ಕ್ಷೇತ್ರ ಕುತೂಹಲದ ಕಣವಾಗುವುದಂತೂ ನಿಶ್ಚಿತ.
ಮುಂಬರುವ ಬೆಳಗಾವಿ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಗ್ರಾಮ ಪಂಚಾಯಿತಿ ಚುನಾವಣೆ ನೆಪದಲ್ಲಿ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರವನ್ನು ಸುತ್ತುತ್ತಿದ್ದಾರೆ. ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸಕ್ಕೆ ಇಳಿದಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ಮೂಡಿದೆ. ಹಾಗಾಗಿ ಈ ಬಾರಿ ಬಿಜೆಪಿಗೆ ಗೆಲುವು ಸುಲಭವಿಲ್ಲ. ಹಿಂದಿನಂತೆ ಮೋದಿ ಅಲೆಯನ್ನು ನೆಚ್ಚಿಕೊಳ್ಳುವುದೂ ಸಾಧ್ಯವಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ