ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜನೆವರಿ 15ರಿಂದ ರಾಷ್ಟ್ರಾದ್ಯಂತ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದ್ದು, 5 ಲಕ್ಷ ಗ್ರಾಮ ಮತ್ತು 12 ಕೋಟಿ ಜನರನ್ನು ತಲುಪುವ ಉದ್ದೇಶ ಹೊಂದಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ನ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದರು.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮನ ಆದರ್ಶ ಮತ್ತು ಜೀವನ ಮೌಲ್ಯಗಳನ್ನು ಪುನರ್ ಸ್ಥಾಪಿಸುವುದು ಅಭಿಯಾನದ ಮುಖ್ಯ ಉದ್ದೇಶ. ಯಾರಿಂದಲೂ ನಿಧಿಯನ್ನು ಒತ್ತಾಯ ಪೂರ್ವಕ ಸಂಗ್ರಹಿಸುವುದಿಲ್ಲ. ಕೊಡುವುದು ಅವರ ಇಷ್ಟ. ಆದರೆ ನಾವು ನಮ್ಮ ಉದ್ದೇಶವನ್ನು ವಿವರಿಸಲು ಪ್ರತಿ ಮನೆಯನ್ನು ಸಂಪರ್ಕಿಸುತ್ತೇವೆ. ನಿಧಿ ಸಂಗ್ರಹಕ್ಕೆ ಯಾವುದೇ ಗುರಿ ಇಟ್ಟುಕೊಂಡಿಲ್ಲ ಎಂದರು.
ರೂ. ೧೦/-, ೧೦೦/-, ೧೦೦೦/- ದ ಮುದ್ರಿತ ಕೂಪನ್ ಗಳ ಸಹಾಯದಿಂದ ನಿಧಿ ಸಮರ್ಪಣೆ ನಡೆಯಲಿದೆ. ಇನ್ನು ರೂ. ೨೦೦೦/- ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು ಹಾಗೂ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ ೮೦ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯ್ತಿ ಸೌಲಭ್ಯ ಪಡೆಯಬಹುದು.
ವಿಶ್ವ ಹಿಂದು ಪರಿಷತ್ ದೃಷ್ಟಿಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಯ ಎಲ್ಲ ನಗರಗಳನ್ನು ಮತ್ತು ೧೫ ತಾಲ್ಲುಕುಗಳನ್ನು ಸೇರಿ ಬೆಳಗಾವಿ ಜಿಲ್ಲೆಯ ೮೦೦ ಮತ್ತು ಚಿಕ್ಕೋಡಿ ಜಿಲ್ಲೆಯ ೬೦೦ ಗ್ರಾಮಗಳಲ್ಲಿ ನೆಲೆಸಿರುವ ೧೦ ಲಕ್ಷ ಕುಟುಂಬಗಳನ್ನು ಮಂದಿರ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಸಂಪರ್ಕಿಸುವ ಯೋಜನೆ ರೂಪಿಸಲಾಗಿದೆ.
ಬೆಳಗಾವಿಯಲ್ಲಿ ಶನಿವಾರ ಸಂಜೆ 4 ಗಂಟೆಗೆ ಸಂತರ ಸಮಾವೇಶ ನಡೆಯಲಿದ್ದು, 100ಕ್ಕೂ ಹೆಚ್ಚು ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ಕೇಶವ ಹೆಗಡೆ ಹೇಳಿದರು.
ಭಾರತೀಯರ ಮತ್ತು ಸಮಸ್ತ ಹಿಂದು ಸಮಾಜದ ಗೌರವದ ಪ್ರತೀಕ ಮತ್ತು ಆದರ್ಶ ಪುರುಷ ಎಂದು ಗುರುತಿಸಿಕೊಂಡ ಶ್ರೀರಾಮನ ಮಂದಿರ ಆ ಭಗವಂತನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಭವ್ಯ ಸ್ವರೂಪದಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಅಯೋಧ್ಯೆಯಲ್ಲಿ ಕಳೆದ ಐದು ಶತಮಾನಗಳಿಗೂ ಹೆಚ್ಚು ಕಾಲ ಅಪಮಾನ ಮತ್ತು ಕಳಂಕದ ಪ್ರತೀಕವಾಗಿದ್ದ ಆ ವಿವಾದಿತ ಕಟ್ಟಡ ನೆಲಸಮಗೊಂಡು ಮೂರು ದಶಕ ಕಳೆದಿದ್ದು, ಸುಪ್ರಿಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂಬರುವ ಮೂರು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಐದು ಶತಮಾನಗಳ ಹಿಂದೆ ಬಾಬರ್ ಮತ್ತು ಆತನ ಸೇನಾಪತಿ ಮೀರಬಾಕಿ ಎಂಬ ಮತಾಂಧರ ದಾಳಿಗೆ ಸಿಲುಕಿ ಅಯೋಧ್ಯೆಯಲ್ಲಿದ್ದ ಶ್ರೀರಾಮ ಮಂದಿರ ಧ್ವಂಸಗೊಂಡಿತ್ತು. ಅಷ್ಟೇ ಅಲ್ಲದೆ ಆ ಮಂದಿರದ ಅವಶೇಷಗಳಿಂದ ಅಲ್ಲಿಯೇ ವಿವಾದಿತ ಕಟ್ಟಡವನ್ನು ಆ ಮತಾಂಧರು ನಿರ್ಮಿಸಿದ್ದರು. ಆದರೆ, ಆ ವಿವಾದಿತ ಕಟ್ಟಡದ ಬದಲಾಗಿ ಶ್ರೀರಾಮ ಮಂದಿರ ನಿರ್ಮಿಸಲು ಕಳೆದ ಐದು ಶತಮಾನಗಳಿಂದ ೭೬ ಯುದ್ಧಗಳು ಜರುಗಿವೆ ಮತ್ತು ಲಕ್ಷಾಂತರ ಹಿಂದುಗಳು ತಮ್ಮ ಪ್ರಾಣ ಬಲಿದಾನಗೈದಿದ್ದಾರೆ. ವಿವಾದಿತ ಕಟ್ಟಡದ ಬದಲಾಗಿ ರಾಮಮಂದಿರ ನಿರ್ಮಾಣಕ್ಕೆ ರಾಜರು ಅಷ್ಟೇ ಅಲ್ಲದೆ ಸಾಧು ಸಂತರು ಜನಜಾಗೃತಿ ಮೂಲಕ ಸೇನೆ ಸಿದ್ಧಪಡಿಸಿ ಹೋರಾಡಿರುವುದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಕೂಡಾ ಎರಡು ಯುದ್ಧಗಳು ಜರುಗಿವೆ. ಸಾವಿರಾರು ಸಂತರು ಮತ್ತು ಲಕ್ಷಾಂತರ ರಾಮಭಕ್ತರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ.
೧೯೪೭ರ ಸ್ವಾತಂತ್ರ್ಯದ ನಂತರ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕಾನೂನು ಹೋರಾಟ ಪರ್ವ ಪ್ರಾರಂಭವಾಯಿತು. ರಾಮಲಲ್ಲಾನ ಪೂಜೆಗೆ ಮತ್ತು ದರ್ಶನಕ್ಕೆ ಆಗ್ರಹಿಸಿ ಫಿರೋಜಾಬಾದ್ ಮತ್ತು ಅಲಹಬಾದ್ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಲಾಯಿತು. ೧೯೮೦ರಲ್ಲಿ ವಿಶ್ವ ಹಿಂದು ಪರಿಷತ್ ರಾಮಲಲ್ಲಾನ ದರ್ಶನಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವಿರುದ್ಧ ವಿವಿಧ ಬಗೆಯ ಹೋರಾಟದ ಯೋಜನೆಗಳನ್ನು ರೂಪಿಸಿತು. ಪ್ರತಿ ಗ್ರಾಮದಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆ ಸಂಗ್ರಹ ಮತ್ತು ಕರಸೇವೆ ಜರುಗಿತು. ೧೯೮೮-೮೯ರಲ್ಲಿ ಜರುಗಿದ ಶ್ರೀರಾಮ ಕರಸೇವೆಗೆ ಉತ್ತರ ಪ್ರದೇಶದ ಮುಲಾಯಂಸಿಂಗ್ ಯಾದವ ನೇತೃತ್ವದ ಸರ್ಕಾರ ಸಾವಿರಾರು ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿ ಸರಯು ನದಿಯಲ್ಲಿ ರಕ್ತದ ಕೋಡಿಯನ್ನೆ ಹರಿಸಿದ್ದಾರೆ. ನಂತರ ಬಿಜೆಪಿಯ ಅಧ್ಯಕ್ಷರಾಗಿದ್ದ ಲಾಲಕೃಷ್ಣ ಅಡ್ವಾಣಿ ಅವರ ರಥಯಾತ್ರೆಯು ಸಮಸ್ತ ಭಾರತವನ್ನು ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಒಗ್ಗೂಡಿಸುವಂತೆ ಮಾಡಿತು. ಹೀಗೆ ಸಾಧು ಸಂತರ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್ ಕೈಗೊಂಡ ಅನೇಕ ಹೋರಾಟಗಳ ಫಲವಾಗಿ ಇಂದು ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಯೋಜನೆ ಅನ್ವಯ ಸಮಸ್ತ ಹಿಂದು ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣೆಗೆ ತನ್ನ ಸಂಪೂರ್ಣ ಸಹಯೋಗ ನೀಡುವುದಾಗಿ ವಿಶ್ವ ಹಿಂದು ಪರಿಷತ್ (ವಿಹಿಂಪ) ನಿರ್ಧರಿಸಿದೆ. ಶ್ರೀರಾಮ ಮಂದಿರ ಕೇವಲ ರಾಮ ಮಂದಿರವಲ್ಲ ಅದು ರಾಷ್ಟ್ರ ಮಂದಿರದ ಪ್ರತೀಕ ಎಂದು ಹಿಂದು ಸಮಾಜದ ಸಂತರು, ಮಹಂತರು, ಸನ್ಯಾಸಿಗಳು, ಸಂಪೂರ್ಣ ಹಿಂದು ಸಮಾಜದ ಬಂಧು ಬಾಂಧವರು ಮತ್ತು ಶ್ರೀರಾಮ ಭಕ್ತರ ಸಹಯೋಗದಲ್ಲಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಾಗೂ ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುಕೂಲವಾಗುವಂತೆ ೧೫ ಜನವರಿ ೨೦೨೧ ರಿಂದ ೫ ಫೆಬ್ರುವರಿ ೨೦೨೧ ರವರೆಗೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಜರುಗಲಿದೆ. ಈ ಅಭಿಯಾನದ ನಿಮಿತ್ತ ದೇಶದ ೫೦೦ ಕ್ಕೂ ಜಿಲ್ಲೆ, ಎಲ್ಲ ತಾಲೂಕು, ಹೋಬಳಿ ಮತ್ತು ೪ ಲಕ್ಷ ಹಳ್ಳಿಗಳಲ್ಲಿ ನೆಲೆಸಿರುವ ೧೧ ಕೋಟಿ ಕುಟುಂಬಗಳನ್ನು ತಲುಪಲು ಯೋಜನೆ ರೂಪಿಸಲಾಗಿದೆ.
ಕರ್ನಾಟಕ ರಾಜ್ಯದ ೨೭,೫೦೦ ಹಳ್ಳಿಗಳನ್ನು ಮತ್ತು ೯೦ ಲಕ್ಷ ರಾಮಭಕ್ತರನ್ನು ತಲುಪುವ ಹಾಗೂ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಯೋಜನೆಯನ್ನು ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ವಿಹಿಂಪ ಕಾರ್ಯ ಪ್ರವೃತ್ತವಾಗಿದೆ. ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ತರಲ್ಲಿ ಒಬ್ಬರಾಗಿದ್ದಾರೆ.
ಶ್ರೀರಾಮನ ಭವ್ಯ ಮಂದಿರದ ಜೊತೆಗೆ ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಸ್ಥಳ, ಅಂಫಿ ಥಿಯೇಟರ್, ಧರ್ಮಶಾಲೆ, ಪ್ರದರ್ಶನಾಲಯ, ಯಾತ್ರಿ ನಿವಾಸ ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿದೆ.
ದೇಶದ ಮೂಲೆಮೂಲೆಗಳಿಗೂ ಶ್ರಾವ್ಯ ದೃಶ್ಯ ಮಾಧ್ಯಮದ ಮೂಲಕ ಮಾಹಿತಿಯನ್ನು ತಲುಪಿಸಲಾಗುವುದು. ಚಿತ್ರರಂಗ ಕ್ಷೇತ್ರದ ಪ್ರಖ್ಯಾತರಾದ ಡಾ.ಚಂದ್ರಪ್ರಕಾಶ ದ್ವಿವೇದಿ ಅವರು ಶ್ರೀರಾಮ ಮಂದಿರದ ಇತಿಹಾಸ ಮತ್ತು ನಿಧಿ ಸಮಪರ್ಣಾ ಅಭಿಯಾನದ ಮಾಹಿತಿಗಳನ್ನು ಒಳಗೊಂಡ ಸಾಕ್ಷ್ಯಚಿತ್ರವನ್ನು ರಚಿಸಿದ್ದಾರೆ. ಈ ಸಾಕ್ಷ್ಯಚಿತ್ರವು ಖ್ಯಾತ ಸಿನಿಮಾ ನಟರಾದ ಶ್ರೀ ಅಕ್ಷಯಕುಮಾರ ಅವರ ಅಭಿಯಾನದ ಕುರಿತಾಗಿ ನಿವೇದನೆಯನ್ನು ಒಳಗೊಂಡಿದೆ.
ಈ ಅಭಿಯಾನ ಹಾಗೂ ಮಂದಿರ ನಿರ್ಮಾಣ ಮತ್ತೊಂದು ಮಂದಿರದ ನಿರ್ಮಾಣದಂತೆ ಅಲ್ಲ. ಇದು ಜಾಗೃತ ಹಿಂದುಶಕ್ತಿಯ ಪುನರುತ್ಥಾನದ ಸಂಕೇತವಾಗಿದೆ. ಸಮಾಜವನ್ನು ಮೇಲು – ಕೀಳು ಎಂಬ ಭಾವನೆಗಳಿಂದ ಮುಕ್ತಗೊಳಿಸುವ, ಬಡತನ, ಆರೋಗ್ಯ, ಶಿಕ್ಷಣ, ಕೌಶ್ಯಲದ ನ್ಯೂನತೆಗಳನ್ನು ನಿರ್ಮೂಲನೆ ಮಾಡುವ, ಮಹಿಳೆಯರ ಘನತೆಯನ್ನು ಮರು ಸ್ಥಾಪಿಸುವ ಭಯೋತ್ಪಾದನೆಯ ಉಪದ್ರವ ನಿವಾರಿಸುವ ವೇದದ ವ್ಯಾಕವಾದ ’ ಸರ್ವೇ ಭವಂತು ಸುಖಿನಃ’ (ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ, ಯಾರೂ ದುಃಖದಿಂದ ಬಳಲದಿರಲಿ) ಎಂಬ ಉದ್ದೇಶದಿಂದ ಕೂಡಿದೆ.
ಶ್ರೀರಾಮ ಮಂದಿರ ನಿರ್ಮಾಣ ವೈಶ್ವಿಕವಾಗಿ ಸಮಸ್ತ ಹಿಂದುಗಳ ಹೆಗ್ಗುರಿಯಾಗಿದ್ದು ಇದನ್ನು ಸಾಧಿಸುವಲ್ಲಿ ಸಫಲರಾಗುತ್ತೇವೆ ಎಂದು ವಿಹಿಂಪ ನಂಬುತ್ತದೆ. ಲಾರ್ಸನ್ ಆಂಡ್ ಟುಬ್ರೊ ಸಂಸ್ಥೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಂದಿರ ನಿರ್ಮಾಣ ಕಾರ್ಯಕ್ಕೆ ತನ್ನ ಅಭಿಯಂತರರನ್ನು ನಿಯೋಜಿಸಲಾಗಿದೆ. ಐಐಟಿ ಮುಂಬೈ, ಐಐಟಿ ದೆಹಲಿ, ಐಐಟಿ ಚೆನೈ, ಐಐಟಿ ಗುವಾಹಟಿ, ಸಿಬಿಆರ್‌ಐ ರೂರ್ಕಿ ಹಾಗೂ ಲಾರ್ಸನ್ ಆಂಡ್ ಟುಬ್ರೋ ಸಂಸ್ಥೆ ಮಂದಿರದ ಅಡಿಪಾಯದ ನೀಲನಕ್ಷೆಯ ಕೆಲಸದಲ್ಲಿ ಈಗಾಗಲೇ ತೊಡಗಿದ್ದಾರೆ.
ಸಂಪೂರ್ಣ ಮಂದಿರ ಕಲ್ಲಿನ ಬ್ಲಾಕ್ ಗಳ ಸಹಾಯದಿಂದ ನಿರ್ಮಿತವಾಗಲಿದೆ. ಮಂದಿರದ ವಿಸ್ತೀರ್ಣ ೨.೭ ಏಕರೆ ೫೪,೦೦೦ ಚದರ ಅಡಿ ಜಾಗದಲ್ಲಿ ಮಂದಿರ ನಿರ್ಮಾಣಗೊಳ್ಳಲಿದೆ. ೩೬೦ ಅಡಿ ಉದ್ದ ಹಾಗೂ ೨೩೫ ಅಡಿ ಅಗಲದ ಮಂದಿರದಲ್ಲಿ ಮೂರು ಅಂತಸ್ತು ಹಾಗೂ ೫ ಮಂಟಪಗಳಿರುತ್ತವೆ. ನೆಲಮಾಳಿಗೆಯಲ್ಲಿ ೧೬೦ ಕಂಬಗಳು, ಮೊದಲನೆಯ ಮಹಡಿಯಲ್ಲಿ ೧೩೨ ಕಂಬಗಳು ಮತ್ತು ಎರಡನೆಯ ಮಹಡಿಯಲ್ಲಿ ೭೪ ಕಂಬಗಳಿರುತ್ತವೆ.
ಮುಂಬರುವ ೩-೪ ವರ್ಷದಲ್ಲಿ ಶ್ರೀರಾಮ ಲಲ್ಲಾನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಹಾಗೂ ಭಕ್ತರಿಗೆ ದರ್ಶನ ವ್ಯವಸ್ಥೆ ಸಾಧ್ಯವಾಗುವುದು ಎಂದು ಅಂದಾಜಿಸಲಾಗಿದೆ ಎಂದು ಕೇಶವ ಹೆಗಡೆ ವಿವರಿಸಿದರು.
ಬೆಳಗಾವಿ ನಗರದಲ್ಲಿ ಜನೆವರಿ 17ರಂದು ಒಂದೇ ದಿನ ಅಭಿಯಾನವನ್ನು ನಡೆಸಲಾಗುವುದು. ಸಂಪೂರ್ಣ ನಗರವನ್ನು ಅಂದು ಸಂಪರ್ಕಿಸಲಾಗುವುದು ವಿಶ್ವಹಿಂದೂ ಪರಿಷತ್ ಕೋಶಾಧ್ಯಕ್ಷ ಕೃಷ್ಣ ಭಟ್ ತಿಳಿಸಿದರು.
ವಿಶ್ವಹಿಂದೂ ಪರಿಷತ್ತಿನ ಹಲವಾರು ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ