ಪಶ್ಚಿಮ ಘಟ್ಟದಲ್ಲಿ ಮುಂದುವರೆದ ಸತತಧಾರೆ: ಹಲವೆಡೆ ವಿದ್ಯುತ್ ಕಡಿತ, ಮನೆ ಗೋಡೆ ಕುಸಿತ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರೆದಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯ ರಭಸಕ್ಕೆ ತಾಲೂಕಿನ ಮಂತುರ್ಗಾ ಬಳಿಯ ಅಲಾತ್ರಿ ಹಳ್ಳದ ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದೆ. ಲೋಂಡಾ-ವರ್ಕಡ ಮಾರ್ಗಮಧ್ಯದ ಹಳ್ಳದ ಸೇತುವೆಯಲ್ಲೂ ನೀರು ಹರಿದು ಸಂಚಾರ ಸ್ಥಗಿತವಾಗಿದೆ. ತಾಲೂಕಿನ ಗವ್ವಾಳಿ, ಅಮಗಾಂವ, ಕೃಷ್ಣಾಪುರ, ಹುಳಂದ, ಸಡಾ, ದೇಗಾಂವ ಮತ್ತು ಹಂದಿಕೊಪ್ಪ ಗೌಳಿವಾಡಾ ಗ್ರಾಮಗಳು ಮುಖ್ಯವಾಹಿನಿಯಿಂದ ಸಂಪರ್ಕ ಕಡಿದುಕೊಂಡು ನಡುಗಡ್ಡೆಗಳಾಗಿವೆ. ಸತತ ಮಳೆಯ ಕಾರಣ ಅರಣ್ಯ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಗ್ರಾಮಗಳಲ್ಲಿ ಮೊಬೈಲ್ ನೆಟವರ್ಕ್ ಇಲ್ಲದ್ದರಿಂದ ಸಂಪರ್ಕ ಸಮಸ್ಯೆ ಉದ್ಭವಿಸಿದೆ. ಮಳೆಯ ಆರ್ಭಟದಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಕರ್ನಾಟಕ-ಗೋವಾ ಗಡಿಯಲ್ಲಿ ಶನಿವಾರ ಇಡೀ ದಿನ ಮಳೆಯ ಅಬ್ಬರ ಯಥಾಸ್ಥಿತಿ ಕಾಯ್ದುಕೊಂಡ ಪರಿಣಾಮ ಮಲಪ್ರಭಾ, ಮಹದಾಯಿ ನದಿಗಳು ಮತ್ತು ಕಳಸಾ-ಭಂಡೂರಿ, ಅಲಾತ್ರಿ, ಮಂಗೇತ್ರಿ, ಪಣಸೂರಿ, ಕೋಟ್ನಿ, ಬೈಲ್, ಕುಂಬಾರ, ನಿಟ್ಟೂರ ಹಳ್ಳಗಳಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿಯಲಾರಂಭಿಸಿದೆ. ಗುಂಜಿ ಮತ್ತು ಜಾಂಬೋಟಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಗೋಲಿಹಳ್ಳಿ, ಘಷ್ಟೊಳ್ಳಿ, ಕಸಮಳಗಿ, ಕರಂಬಳ, ನೀಲಾವಡೆ, ಕುಸಮಳಿ, ಮಂಗೇನಕೊಪ್ಪ, ಹಿಂಡಲಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಕುಸಿದಿವೆ.
ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಾಂಬೋಟಿ ಮತ್ತು ಗುಂಜಿ ಹೋಬಳಿ ವ್ಯಾಪ್ತಿಯ ೪೦ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಹಬ್ಬನಹಟ್ಟಿ ಗ್ರಾಮದ ಆಂಜನೇಯ ದೇಗುಲ ಮತ್ತು ಇಟಗಿಯ ಮರುಳಶಂಕರ ದೇವಾಲಯಗಳು ಮಲಪ್ರಭಾ ನದಿಯಲ್ಲಿ ಮುಳುಗಿದ ಸ್ಥಿತಿಯಲ್ಲಿ ಮುಂದುವರೆದಿವೆ. ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ನದಿಯಲ್ಲಿ ಇಳಿಯದಂತೆ ತಾಲೂಕು ಆಡಳಿತ ಸಾರ್ವಜನಿಕರನ್ನು ಎಚ್ಚರಿಸಿದೆ. ಮಳೆಯಿಂದಾಗಿ ಇದುವರೆಗೂ ಯಾವುದೇ ಅವಘಡ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಕಚೇರಿಯ ಮೂಲಗಳು ಸ್ಪಷ್ಟಪಡಿಸಿವೆ.
ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಕಣಕುಂಬಿಯಲ್ಲಿ ೧೩.೨ ಸೆಂ.ಮೀ, ಖಾನಾಪುರ ಪಟ್ಟಣ ಹಾಗೂ ಜಾಂಬೋಟಿಯಲ್ಲಿ ೩ ಸೆಂ.ಮೀ, ನಾಗರಗಾಳಿ, ಗುಂಜಿ, ಅಸೋಗಾ, ಬೀಡಿ, ಕಕ್ಕೇರಿಗಳಲ್ಲಿ ಸರಾಸರಿ ೪ ಸೆಂ.ಮೀ ಮತ್ತು ಲೋಂಡಾದಲ್ಲಿ ೬ ಸೆಂ.ಮೀ ಮಳೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ