*ಗ್ಯಾರಂಟಿ ಯೋಜನೆಗಳ ಜೊತೆಗೇ ನಿರಂತರ ಅಭಿವೃದ್ಧಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯಲ್ಲೂ ಹಿಂದೆ ಬಿದ್ದಿಲ್ಲ. ಎರಡನ್ನೂ ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೊಗುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಜಂಟಿ ಸಾರಿಗೆ ಕಚೇರಿ, ಬೆಳಗಾವಿ ವಿಭಾಗದ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಬಡವರಿಗಾಗಿ ಬಿಜೆಪಿಗರು ಒಂದೇ ಒಂದು ಯೋಜನೆ ತಂದ ಉದಾಹರಣೆ ಇಲ್ಲ, ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವುದು ವಿರೋಧಿಗಳಿಗೆ ಬೇಕಿಲ್ಲ, ಜನರಿಗೆ ಅವರು ಯಾವತ್ತೂ ಒಳ್ಳೆಯದನ್ನು ಮಾಡಿಲ್ಲ. ನಮ್ಮ ಯೋಜನೆಗಳನ್ನು ಟೀಕಿಸುತ್ತಿದ್ದ ಅವರು ಈಗ ಬಿಹಾರ ಚುನಾವಣೆ ಸಂದರ್ಭದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡುತ್ತಿದ್ದಾರೆ ಎಂದರು.

ಸಾರಿಗೆ ಇಲಾಖೆಯ ನೂತನ ಕಟ್ಟಡದಿಂದಾಗಿ ಬೆಳಗಾವಿಯ ಎರಡನೇ ರಾಜಧಾನಿ ಸ್ಥಾನಮಾನಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಯಲ್ಲಿ ಹಂತ ಹಂತವಾಗಿ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದ್ದು, ಈಗ ಸುಸಜ್ಜಿತ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಜಂಟಿ ಸಾರಿಗೆ ಆಯುಕ್ತರ ಕಚೇರಿ ಕೂಡ ಹೊಸ ಕಟ್ಟಡವನ್ನು ಹೊಂದಿದಂತಾಗಿದೆ. ಇದು ನಮ್ಮ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎನ್ನುವ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿಯ ಜೊತೆ ಜೊತೆಗೇ ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನೂ ಮುಂದುವರಿಸಿಕೊಂಡು ಬರುತ್ತಿದೆ. ರಾಜ್ಯದ ಆದಾಯದಲ್ಲಿ ಬಹು ದೊಡ್ಡ ಪಾಲನ್ನು ನೀಡುವ ಸಾರಿಗೆ ಇಲಾಖೆಗೆ ಉತ್ತಮ ಮೂಲಭೂತ ಸೌಲಭ್ಯಗಳು ಕೂಡ ಅಗತ್ಯ. ಹಾಗಾಗಿ ನಮ್ಮ ಸರ್ಕಾರ ಅಂತಹ ಕಟ್ಟಡವನ್ನು ಇಲ್ಲಿ ಒದಗಿಸಿದೆ. ಇಲ್ಲಿಂದ ಜನರಿಗೆ ತ್ವರಿತ ಮತ್ತು ಕಿರುಕುಳ ರಹಿತ ಸೇವೆ ಸಿಗಲಿದೆ ಎಂದು ಆಶಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಸಾರಿಗೆ ಇಲಾಖೆ ಸಿಬ್ಬಂದಿ ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಕಿರುಕುಳವಿಲ್ಲದೆ ಸೇವೆ ನೀಡುವ ಮೂಲಕ ನಮ್ಮ ಸರಕಾರಕ್ಕೆ ಒಳ್ಳೆಯ ಹೆಸರು ತರಬೇಕು. ರಾಮಲಿಂಗಾ ರೆಡ್ಡಿ ಅವರು ನಮ್ಮ ಸರ್ಕಾರದ ಅತ್ಯಂತ ಹಿರಿಯ ಸಚಿವರು. ನಮ್ಮೆಲ್ಲರಿಗೆ ಹಿರಿಯಣ್ಣನಂತೆ, ಅವರಿಂದಾಗಿ ಇಲಾಖೆಗೆ ಹೆಚ್ಚಿನ ಗೌರವ ಬಂದಿದೆ. ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಇಲಾಖೆಯ ಅಧಿಕಾರ ವಹಿಸಿಕೊಂಡಾಗಿನಿಂದ ಇಲಾಖೆಗೆ ಹೊಸ ಸ್ವರೂಪ ನೀಡಿದ್ದಾರೆ. ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಇನ್ನೂ ಹೆಚ್ಚಿನ ಬಸ್ ಒದಗಿಸಬೇಕು ಎಂದು ಸಚಿವರು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರಡ್ಡಿ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕರಾದ ಆಸಿಫ್ ಸೇಠ್, ಮಹಾಂತೇಶ ಕೌಜಲಗಿ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಸಾರಿಗೆ ಮತ್ತು ರಸ್ತೆಯ ಸುರಕ್ಷತೆಯ ಆಯುಕ್ತರಾದ ಯೋಗೀಶ್ ಎ.ಎಂ, ಬೆಳಗಾವಿ ನಗರ ಪೋಲೀಸ್ ಆಯುಕ್ತರಾದ ಭೂಷಣ ಗುಲಾಬರಾವ್ ಬೋರಸೆ, ಜಂಟಿ ಆಯುಕ್ತರಾದ ಓಂಕಾರೇಶ್ವರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಆಯುಕ್ತರಾದ ಹಾಲಸ್ವಾಮಿ, ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗೇಶ ಮುಂಡಾಸೆ, ಬಿ.ಪಿ.ಉಮಾಶಂಕರ್, ಪುರುಷೋತ್ತಮ್, ಸಿ.ಟಿ.ಮೂರ್ತಿ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.