
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿರುವ ವೈದ್ಯ ವಿಜ್ಞಾನದ ಜ್ಞಾನವು ಅತ್ಯವಶ್ಯಕವಾಗಿದೆ. ಅರಿತ ಜ್ಞಾನವನ್ನು ಒರೆಗೆ ಹಚ್ಚಿ ಅದಕ್ಕೆ ಇನ್ನಷ್ಟು ಹೊಳಪು ನೀಡಿ ಅದರಿಂದ ಸಮಾಜದ ಅಭ್ಯುದಯಕ್ಕೆ ಕಾರಣೀಭೂತರಾಗೋಣ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಹೇಳಿದರು.
ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಬೆಳಗಾವಿ ಸಹಯೋಗದಲ್ಲಿ ನಡೆದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಅದ್ಘಾಟಿಸಿ ಮಾತನಾಡುತ್ತಿದ್ದರು. ವೈದ್ಯ ವಿಜ್ಞಾನವು ನಿರಂತರ ಸಂಶೋಧನೆಗಳಿಂದ ಶ್ರೀಮಂತವಾಗಲು ಇಂದಿನ ನಮ್ಮ ಯುವ ಜನಾಂಗವು ಇನ್ನಷ್ಟು ಕುತೂಹಲಕಾರಿ ಅಂಶಗಳನ್ನು ಸಾಮಾನ್ಯರಿಗೆ ತಿಳಿಯುವಂತೆ ಮಾಡಬೇಕಿದೆ ಎಂದು ಕರೆ ನೀಡಿದರು.
ಇಂಡಿಯನ್ ಮೆಡಿಕಲ್ ಅಸೋಶಿಯೇಶನ್‌ನ ಅಧ್ಯಕ್ಷ ಡಾ. ಆರ್ ಜಿ ವಿವೇಕಿ ಮಾತನಾಡುತ್ತ, ನಾಗರೀಕತೆಯ ಅಭಿವೃದ್ದಿಯ ಜೊತೆಗೆ ಆರೋಗ್ಯ ಸಮಸ್ಯೆಗಳು ನವೀನಗೊಳ್ಳುತ್ತಿವೆ. ಆದ್ದರಿಂದ ವೈದ್ಯ ವಿಜ್ಞಾನದ ತೀಕ್ಷ್ಣ ವಿಷಯಗಳನ್ನು ಸೂಕ್ಷ್ಮವಾಗಿ ತಿಳಿಯಲು ಇಂತಹ ವೇದಿಕೆಗಳು ಮೇಲಿಂದಮೇಲೆ ಸಿದ್ದವಾಗಬೇಕಿದೆ ಎಂದು ಇಂಗಿತ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸಿದ್ದ ನೇತ್ರ ತಜ್ಷ ಡಾ. ಸಚಿನ್ ಮಾಹುಲಿ ಮಾತನಾಡುತ್ತ ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಲು ಹಾಗೂ ಆರೋಗ್ಯ ಕ್ರಾಂತಿ ಜರುಗಲು ನಾಗರಿಕರು ಆರೋಗ್ಯ ಸೇವೆಗೆಳ ಬಗ್ಗೆ ಅರಿವುದು ಹಾಗೆಯೇ ಈ ನಿಟ್ಟಿನಲ್ಲಿ ಜಾಗೃತರಾಗಿರಲು ಇಂತಹ ಕಾರ್ಯಾಗಾರಗಳು ಅತ್ಯವಶ್ಯಕವಾಗಿದೆ ಎಂದು ತಿಳುವಳಿಕೆ ನೀಡಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ, ಮೆಡಿಕಲ್ ಅಸೋಸಿಯೇಶನ್ ೧೯೨೮ ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು. ೧೯೩೦ ರಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಭಾರತದಲ್ಲಿ ಪ್ರಾರಂಭಿಸಲಾಯಿತು. ಈ ಒಂದು ಕಾರ್ಯಗಾರವನ್ನು ಎಲ್ಲ ವೈದ್ಯರು ಫಲಪ್ರದವಾಗಿ ಉಪಯೋಗಿಸಿಕೂಂಡು ತಮ್ಮ ವೃತ್ತಿಪರ ಜೀವನದಲ್ಲಿ ನಿಷ್ಠಾವಂತರಾಗಿ ಬಾಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಪನ್ಮೂಲವ್ಯಕ್ತಿಗಳಾಗಿದ್ದ ಡಾ. ಸಚಿನ ಮಾಹುಲಿ, ಡಾ. ಶ್ರೀಪತಿ ಪಿಸೆ, ಡಾ. ರಾಜೇಶ್ ಲಾಟ್ಕರ್, ಡಾ. ಹೆಚ್ ಬಿ ರಾಜಾಶೇಖರ, ಡಾ. ದರ್ಶನ ರಜಪುತ, ಡಾ. ಆರ್ ಜಿ ವಿವೇಕಿ, ಡಾ. ಅಶೋಕ ಗೋಧಿ, ಡಾ. ಕಮಲಾಕರ ಅಚರೇಕರ, ಡಾ. ಅಭಿನಂದನ್ ಹಂಜಿ, ಡಾ.ಅನೀತಾ ಮೂದಗೆ ಮತ್ತು ಡಾ.ಸಂತೋಷಕುಮಾರ ಕರಮಸಿ ವಿವಿಧ ವಿಷಯಗಳ ವಿಶೇಷ ಉಪನ್ಯಾಸದ ಮೂಲಕ ಮೇಲೆ ಬೆಳಕು ಚೆಲ್ಲಿದರು.
ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಆಸ್ಪತ್ರೆಯ ಬಗ್ಗೆ ವಿವರಣೆ ನೀಡಿದರು. ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ಮತ್ತು ಮಕ್ಕಳ ವೈದ್ಯರಾದ ಡಾ. ಎಮ್ ಎಸ್ ಕಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ. ಸ್ವಪ್ನಾ ಮಹಾಜನ್ ಮತ್ತು ಡಾ. ಸತೀಶ ಬಾಗೇವಡಿ ನಿರೂಪಿಸಿದರು. ಡಾ. ರಾಜಶ್ರೀ ಅನಗೋಳ ವಂದಿಸಿದರು. ಕಾರ್ಯಕ್ರಮದಲ್ಲಿ ೧೦೦ ಕ್ಕೂ ಅಧಿಕ ವೈದ್ಯರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ