ಮುತ್ತ್ಯಾನಟ್ಟಿ, ಕಾಕತಿ ಮತ್ತು ಆರ್.ಸಿ. ನಗರಕ್ಕೆ ಬಂತು ೨೪/೭ ನಿರಂತರ ನೀರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕೆಯುಡಬ್ಲ್ಯುಎಸ್‌ಎಂಪಿ) ಯು ವಿಶ್ವಬ್ಯಾಂಕ್ ನೆರವಿನಿಂದ ಬೆಳಗಾವಿ ನಗರದಲ್ಲಿ ಕೆಯುಐಡಿಎಫ್‌ಸಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಅನುಷ್ಠಾನಗೊಳ್ಳುತ್ತಿದೆ.
ಯೋಜನೆಯ ಮುಖ್ಯ ಉದ್ದೇಶವು ನಗರದ ಜನತೆಗೆ ಶುದ್ಧವಾದ ಮತ್ತು ಒತ್ತಡ ಸಹಿತ ನಿರಂತರ ನೀರನ್ನು ಸರಬರಾಜು ಮಾಡುವುದಾಗಿದ್ದು, ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ, ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಎಲ್ & ಟಿ ಕಂಪನಿಗೆ ೧೨ ವರ್ಷಗಳ ಗುತ್ತಿಗೆಯನ್ನು ನೀಡಲಾಗಿದೆ.
ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ನಗರವನ್ನು ೩೧ ವಲಯಗಳಾಗಿ ವಿಂಗಡಿಸಲಾಗಿದೆ., ಆದ್ಯತಾ ವಲಯಗಳಲ್ಲಿ ೨೪/೭ ನಿರಂತರ ನೀರು ಸರಬರಾಜನ್ನು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಥಮವಾಗಿ ಬೆಳಗಾವಿ ಉತ್ತರದ ವಲಯ-೧೮ ಮುತ್ತ್ಯಾನಟ್ಟಿ ಮತ್ತು ದಕ್ಷಿಣದ ವಲಯ ರಾಣಿ ಚೆನ್ನಮ್ಮ ನಗರ ೬ & ೩ಎ ದಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.
ನಗರದ ಮುತ್ತ್ಯಾನಟ್ಟಿಯಲ್ಲಿ ಕಳೆದ ೩೫ ವರ್ಷಗಳಿಂದಲೂ ಮಹಾನಗರ ಪಾಲಿಕೆಯಿಂದ ನೀರು ಸರಬರಾಜು ವಿತರಣಾ ಜಾಲವೇ ಇದ್ದಿಲ್ಲ. ಹಿಂಡಾಲ್ ಕಂಪನಿಯವರು ತಮ್ಮ ಸಿಎಸ್‌ಆರ್ ಜವಾಬ್ದಾರಿಯಿಂದ ನೀರು ನೀಡುತ್ತಿದ್ದರು. ಇದೀಗ ಮುತ್ತ್ಯಾನಟ್ಟಯಲ್ಲಿ ವಿತರಣಾ ಜಾಲವನ್ನು ಅಳವಡಿಸಿ ೨೪/೭ ಪಾಯೋಗಿಕ ನೀರು ಸರಬರಾಜು ಮಾಡಲಾಗುತ್ತಿದೆ.
ಇದರಿಂದ ಸಂತೋಷಗೊಂಡ ಗ್ರಾಮಸ್ಠರು ನಮಗೆ ಕರ್ನಾಟಕ ಸರ್ಕಾರ, ಕೆಯುಐಡಿಎಫ್‌ಸಿ, ಮಹಾನಗರ ಪಾಲಿಕೆ ಹಾಗೂ ಎಲ್&ಟಿ ಕಂಪನಿಯ ಸಹಕಾರದಿಂದ ಮುತ್ಯ್ತಾನಟ್ಟಿಯ ೩೫೨ ಮನೆಗಳಿಗೆ ನೀರು ಬಂದಂತಾಗಿದೆ. ಜನ ನಮ್ಮೂರಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಿದ್ದರು. ಇದೀಗ ಎಲ್ಲ ಸಮಸ್ಯೆಯು ನಿವಾರಣೆಯಾದಂತಾಗಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.
ಅದೇ ರೀತಿ ಕಾಕತಿ ಗ್ರಾಮದಲ್ಲೂ ಕೂಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ೧೭೬ ಮನೆಗಳಿಗೆ ೨೪/೭ ನಳ ಸಂಪರ್ಕ ನೀಡಿ ಪ್ರಾಯೋಗಿಕ ನೀರು ಸರಬರಾಜು ಮಾಡಲಾಗುತ್ತಿದೆ. ಹಾಗೂ ರಾಣಿಚೆನ್ನಮ್ಮ ನಗರದ ಹಂತ-೧ & ಹಂತ-೨ ರಲ್ಲಿಯೂ ಸುಮಾರು ೧೧೭೦ ಮನೆಗಳಿಗೂ ಕೂಡ ೨೪/೭ ಪ್ರಾಯೋಗಿಕ ನೀರು ಸರಬರಾಜು ಮಾಡಲಾಗುತ್ತಿದೆ.
ಇದರಿಂದ ಸಂತೋಷ ವ್ಯಕ್ತಪಡಿಸಿದ ಸ್ಥಳೀಯರು ನಾವು ನೀರಿಗಾಗಿ ಕಾಯುವ ಸಂದರ್ಭ ತಪ್ಪಿದೆ, ಯಾವಾಗಲೂ ನೀರು ಸಿಗುತ್ತಿದೆ, ಹೀಗಾಗಿ ನಾವು ಕುಟುಂಬದ ಕಾರ್ಯಕ್ರಮ/ ಮದುವೆಗಳಿಗೆ ಇತರೆ ಕೆಲಸಗಳಿಗೆ ಹಾಜರಾಗಲು ಯಾವುದೇ ತೊಂದರೆ ಇಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ೨೦೨೫ ರೊಳಗಾಗಿ ಇಡೀ ಬೆಳಗಾವಿ ನಗರಕ್ಕೆ ನಿರಂತರ ನೀರು ಸರಬರಾಜು ಮಾಡುವುದೇ ನಮ್ಮ ಮುಖ್ಯ ಗುರಿ ಎಂದು ಕೆಯುಐಡಿಎಫ್‌ಸಿಯ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ