Kannada NewsKarnataka NewsLatestPolitics

*ಗುತ್ತಿಗೆದಾರರ ಬಿಲ್ ಪಾವತಿ ವಿಚಾರ; ಡಿಸಿಎಂ ಹೇಳಿದ್ದೇನು?*

ಯಡಿಯೂರಪ್ಪ ಸಿಎಂ ಆಗಿದ್ದಾಗ ಸುರೇಶ್ ಕುಮಾರ್ ಯಾಕೆ ಪತ್ರ ಬರೆಯಲಿಲ್ಲ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಬಿಲ್ ಪಾವತಿ ಆಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕುಮಾರಕೃಪಾ ಅತಿಥಿ ಗೃಹದ ಬಳಿ ಮಾತನಾಡಿದ ಅವರು, ಬಿಬಿಎಂಪಿ ಗುತ್ತಿಗೆದಾರರ ಬಿಲ್ ಪಾವತಿ ವಿಚಾರವಾಗಿ, ಈ ಹಿಂದೆ ನಾವು 40 % ಕಮಿಷನ್, ಪೇಸಿಎಂ ಅಭಿಯಾನ ಮಾಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೂಡ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದರು. ಇನ್ನು ಲೋಕಾಯುಕ್ತ ಸಂಸ್ಥೆ ಕೂಡ ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 137 ಕೋಟಿ ಹಣ ಕಾಮಗಾರಿ ಆಗದೇ ಬಿಲ್ ಪಾವತಿ ಮಾಡಲಾಗಿದೆ ಎಂದು ವರದಿ ನೀಡಿದೆ. ನಾವು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸದನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಅವರ ಸಲಹೆ, ಮಾರ್ಗದರ್ಶನದಂತೆ ನಾವು ಕ್ರಮ ಕೈಗೊಂಡು ತನಿಖೆ ಮಾಡುತ್ತಿದ್ದೇವೆ. ಯಾರು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೋ ಅವರಿಗೆ ಬಿಲ್ ಪಾವತಿ ಆಗಲಿದೆ. ಈ ಕಾಮಗಾರಿಗಳು ವ್ಯವಸ್ಥಿತ ರೂಪದಲ್ಲಿ ನಡೆಯಬೇಕು. ರಸ್ತೆ ನಿರ್ಮಾಣವಾಗದೇ ಬಿಲ್ ಪಾವತಿಸಲು ಮುಂದಾಗಿದ್ದರು. ಸಂತೋಷ್ ಪಾಟೀಲ್ ಪ್ರಕರಣದಂತೆ ಅನೇಕ ಪ್ರಕರಣಗಳು ಇವೆ. ನಮ್ಮ ವಿರುದ್ಧ ಯಾರು ಎಷ್ಟು ಮಾತನಾಡುತ್ತಾರೋ ಮಾತನಾಡಲಿ. ನಾವು ಯಾರ ನಾಲಿಗೆಗೂ ಬೀಗ ಹಾಕುವುದಿಲ್ಲ ಎಂದು ತಿಳಿಸಿದರು.

ಬಿಬಿಎಂಪಿ ಕಾಮಗಾರಿಗಳ ಅಕ್ರಮ ತನಿಖೆಗೆ ಎಸ್ಐಟಿ ರಚಿಸಿರುವ ಬಗ್ಗೆ ಕೇಳಿದಾಗ, “ನಾನು ಯಾವುದೇ ಎಸ್ಐಟಿ ರಚನೆ ಮಾಡಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವಾಗ ಯಾವ ಕಾಮಗಾರಿಗೆ ಟೆಂಡರ್ ಆಯಿತು, ಕಾಮಗಾರಿಗೆ ಯಾವಾಗ ಅನುಮತಿ ಸಿಕ್ಕಿತು, ಯಾವಾಗ ಕಾಮಗಾರಿ ಮುಗಿಯಿತು, ಯಾವಾಗ ಬಿಲ್ ಪಾಸ್ ಆಗಿದೆ, ಕಾಮಗಾರಿ ಗುಣಮಟ್ಟ ಹೇಗಿದೆ ಎಂದು ಪರಿಶೀಲನೆ ಮಾಡಬೇಕಿದೆ. 2 ಕೋಟಿ ಕಾಮಗಾರಿಯಲ್ಲಿ 1.99 ಕೋಟಿ ಬಿಲ್ ನೀಡಿದ್ದು ಕೇವಲ 1 ಲಕ್ಷ ಮಾತ್ರ ಬಾಕಿ ಉಳಿಸಿದ್ದಾರೆ. ಇಂತಹ ಸುಮಾರು 25 ಪ್ರಕರಣಗಳಿವೆ. ಈ ಬಗ್ಗೆ ನಾನು ಮಾಹಿತಿ ಪಡೆಯಬೇಕಿದೆ” ಎಂದು ತಿಳಿಸಿದರು.

ಅಧಿಕಾರಿಗಳು ಈವರೆಗೂ ಎಷ್ಟು ಕಾಮಗಾರಿಗಳ ಮಾಹಿತಿ ನೀಡಿದ್ದಾರೆ ಎಂದು ಕೇಳಿದಾಗ, “ಅಧಿಕಾರಿಗಳು ಇನ್ನು ಮಾಹಿತಿ ನೀಡಿಲ್ಲ. ನಾನು ಕೆಲವು ಮಾನದಂಡಗಳನ್ನು ಹಾಕಿದ್ದು, ಅದರ ಮೇಲೆ ಅಧ್ಯಯನ ಮಾಡಿ ವರದಿ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರು 26 ಅಂಶಗಳ ಬಗ್ಗೆ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ನಾನು ಹಳ್ಳಿಯಿಂದ ಬಂದಿರುವವನು ನನಗೆ ಅವರಷ್ಟು ದೊಡ್ಡ ಅನುಭವವಿಲ್ಲ. ನನ್ನ ಅನುಭವ ಸಣ್ಣದು. ಅದರ ಆಧಾರದ ಮೇಲೆ ನಾನು ಮಾಹಿತಿ ಕೇಳಿದ್ದೇನೆ” ಎಂದರು.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸುರೇಶ್ ಕುಮಾರ್ ಯಾಕೆ ಪತ್ರ ಬರೆಯಲಿಲ್ಲ?

ಇನ್ನು ಮಾಜಿ ಸಚಿವ ಸುರೇಶ್ ಕುಮಾರ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ನನ್ನ ಮೇಲೆ ಪ್ರಕರಣ ಇದೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಮೇಲೆ ಪ್ರಕರಣ ಇರಲಿಲ್ಲವೇ? ಆಗ ಅವರು ನ್ಯಾಯಾಂಗಕ್ಕೆ ಸಂಬಂಧಿಸಿದ್ದ ಕಾರ್ಯಕ್ರಮಗಳಲ್ಲಿ ಹೇಗೆ ಭಾಗವಹಿಸುತ್ತಿದ್ದರು? ನನಗೆ ಯಾರಿಗೂ ಮುಜುಗರ ತರುವ ಉದ್ದೇಶವಿಲ್ಲ. ನನಗೆ ಅಂತಹ ಕಾರ್ಯಕ್ರಮಕ್ಕೆ ಹೋಗುವ ಆಸಕ್ತಿಯೂ ಇಲ್ಲ. ಕೆಲವು ನ್ಯಾಯಾಧೀಶರು ಕೂಡ ತಮ್ಮ ಮನೆಯಲ್ಲಿನ ಮದುವೆಗೂ ನನಗೆ ಆಮಂತ್ರಣ ನೀಡಿದ್ದರು. ನಾನು ಅವರ ಮದುವೆಯಲ್ಲಿ ಭಾಗವಹಿಸಿದರೆ ಇಂತಹ ಪ್ರಶ್ನೆಗಳು ಉದ್ಭವಿಸುತ್ತವೆ ಎಂಬ ಕಾರಣಕ್ಕೆ ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ನಾನು ಈಗ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದು, ಅನೇಕ ನ್ಯಾಯಾಲಯದ ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮೇಲೆ ರಾಜಕೀಯ ಪ್ರೇರಿತ ಪ್ರಕರಣಗಳಿದ್ದು, ನನ್ನನ್ನು ದೋಷಿ ಎಂದು ತೀರ್ಮಾನ ಮಾಡಲಾಗಿಲ್ಲ. ನನ್ನ ಜತೆಗೆ ಯಡಿಯೂರಪ್ಪ ಅವರು ಅನೇಕ ಪ್ರಕರಣ ಎದುರಿಸುತಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಸುರೇಶ್ ಕುಮಾರ್ ಗೆ ಈ ವಿಚಾರ ತಿಳಿದಿರಲಿಲ್ಲವೇ? ಆಗ ಯಾಕೆ ಪತ್ರ ಬರೆಯಲಿಲ್ಲ? ಅವರಿಗೊಂದು ನ್ಯಾಯ? ನನಗೊಂದು ನ್ಯಾಯವೇ ಇದೆಲ್ಲವನ್ನು ನಾನು ರಾಜಕೀಯವಾಗಿಯೇ ಎದುರಿಸುತ್ತೇನೆ” ಎಂದು ತಿಳಿಸಿದರು.

ಶಾಸಕರ ಸಮಸ್ಯೆ ಆಲಿಸಲು ಸಭೆ:

“ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೆಲವು ಜಿಲ್ಲೆಗಳ ಶಾಸಕರುಗಳ ಜತೆ ಇಂದು ಆಯಾ ಕ್ಷೇತ್ರಗಳ ವಿಚಾರವಾಗಿ ಚರ್ಚೆ ಮಾಡಿದ್ದು, ರಾಜಕೀಯವಾಗಿ ಮಾರ್ಗದರ್ಶನ ನೀಡಿದ್ದೇವೆ. ಅವರ ಅಹವಾಲುಗಳನ್ನು ಆಲಿಸಿದ್ದೇವೆ. ಇದರ ಜತೆಗೆ ನಮ್ಮ ಸರ್ಕಾರದ ಕಾರ್ಯಕ್ರಮಗಳ ಜಾರಿ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸತತವಾಗಿ ಒಂದು ವಾರಗಳ ಕಾಲ ಈ ರೀತಿ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಅನಗತ್ಯ ಸರ್ಕಾರ ನಮ್ಮ ಶಾಸಕರ ಜತೆಗೂ ಸಭೆ ಮಾಡಬಹುದಾಗಿತ್ತು ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, “ನಾವು ಅವರ ಪಕ್ಷದ ಶಾಸಕರ ಜತೆಗೂ ಸಭೆ ಮಾಡುತ್ತೇವೆ. ಅವರ ಜತೆ ಸಭೆ ಮಾಡುವುದಿಲ್ಲ ಎಂದು ಯಾರು ಹೇಳಿದರು? ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಿಗೆ ಕೊಟ್ಟ ಮಾತಿನಂತೆ ಸಭೆ ಮಾಡುತ್ತಿದ್ದೇವೆ. ಎಲ್ಲರನ್ನು ಒಟ್ಟಿಗೆ ಕರೆದು ಜಗಳಕ್ಕೆ ಬಿಡಲು ಸಾಧ್ಯವೇ? ಬೆಂಗಳೂರಿನ ಕೆಲವು ವಾರ್ಡ್ ಗಳಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಇಂದು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಸಾವಿರ ಕೋಟಿ ಬಾಕಿ ಇದ್ದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 170 ಕೋಟಿ ಮಾತ್ರ ಬಾಕಿ ಇದೆ. ಇದೆಲ್ಲವೂ ಸತ್ಯ ಅಲ್ಲವೇ? ಮೊದಲು ನಮ್ಮ ಪಕ್ಷದ ಶಾಸಕರ ಅಹವಾಲು ಆಲಿಸುತ್ತೇವೆ” ಎಂದು ತಿಳಿಸಿದರು.

ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಅವಧಿ ವಿಸ್ತರಣೆ:

ಇನ್ನು ಟನಲ್ ರಸ್ತೆ ವಿಚಾರವಾಗಿ ಸಂಸ್ಥೆಯೊಂದರ ಜತೆಗಿನ ಸಭೆ ಬಗ್ಗೆ ಕೇಳಿದಾಗ, “ಫ್ಲೈ ಓವರ್, ಟನಲ್ ರಸ್ತೆ ಸೇರಿದಂತೆ ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ವಿಚಾರವಾಗಿ ನಾವು ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಅನ್ನು ಕರೆದಿದ್ದೆವು. ಕೇವಲ 2 ಸಂಸ್ಥೆಗಳು ಮಾತ್ರ ಮುಂದೆ ಬಂದಿದ್ದು, ಇನ್ನು ಹೆಚ್ಚಿನ ಸಂಸ್ಥೆಗಳು ಭಾಗವಹಿಸಬೇಕು ಎಂಬ ಉದ್ದೇಶದಿಂದ ಇದರ ಅವಧಿಯನ್ನು ಇನ್ನು 7 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ರಚನೆ, ಆರ್ಥಿಕತೆ ಸೇರಿದಂತೆ ಎಲ್ಲಾ ಆಯಾಮದಲ್ಲಿ ಮಾಹಿತಿ ಪಡೆಯಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇದನ್ನು ಕರೆಯಲಾಗಿದೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button