ನೇಹಾ ಹಿರೇಮಠ ಕೊಲೆ ಆರೋಪಿ ಬಂಧಿಸಿದ ತಂಡಕ್ಕೆ ಕಾಪ್ ಆಫ್ ದಿ ಮಂಥ್ ಅವಾರ್ಡ್
ಪ್ರಗತಿವಾಹಿನಿ ಸುದ್ದಿ: ಏ.18 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸರಿಗೆ ಕಾಪ್ ಆಫ್ ದಿ ಮಂಥ್ ಅವಾರ್ಡ್ ನೀಡಲಾಗಿದೆ.
ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು ಈ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.
ತಕ್ಷಣ ಕಾರ್ಯ ಪ್ರವೃತ್ತವಾದ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಪರಸ್ಪರ ಸಮನ್ವಯ ಸಾಧಿಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಫಯಾಜ್ ಬಾಬಾಸಾಹೇಬ ಖೊಂದುನಾಯಕ (23) ಈತನ ಸುಳಿವನ್ನು ಬೆನ್ನತ್ತಿ ಕೃತ್ಯ ನಡೆದ ಕೇವಲ ಒಂದು ಗಂಟೆಯೊಳಗೆ ಆರೋಪಿಯನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಅವಧಿಯೊಳಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು.
ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ತಂಡದ ಕಾರ್ಯವೈಖರಿಯನ್ನು ಪ್ರಶಂಸಿಸಿದ ಪೊಲೀಸ್ ಆಯುಕ್ತರು ಉತ್ತರ ಉಪವಿಭಾಗದ ಎಸಿಪಿ ಮತ್ತು ವಿದ್ಯಾನಗರ ಪಿಎಸ್‌ನ ಪಿಐ ರವರ ನೇತೃತ್ವದ ತಂಡಕ್ಕೆ ಕಾಪ್ ಆಫ್ ದಿ ಮಂಥ್ ಎಂದು ಘೋಷಿಸಿ, ರೂ. 25 ಸಾವಿರ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ