*ಕಾರ್ನಿಯಾ ಕಸಿ-ನೇತ್ರದಾನದ ಮಹತ್ವ ತಿಳಿಸಿದ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಅಂಧತ್ವ ನಿಯಂತ್ರಣದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಪ್ರಮುಖ ಪಾತ್ರ ವಹಿಸುತ್ತಿದ್ದು, ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ಅನೇಕ ಕಾರ್ಯಗಳನ್ನು ಉಚಿತವಾಗಿ ಮಾಡುತ್ತಿದೆ. ಅಲ್ಲದೇ ಕಾರ್ನಿಯಾ ಕಸಿ ಮಾಡುವ ಮೂಲಕ ನೇತ್ರದಾನದಲ್ಲಿ ತೊಡಗಿಕೊಂಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮರಣಾ ನಂತರ ನೇತ್ರದಾನ ಮಾಡುವುದರಿಂದ ಇನ್ನೊಬ್ಬರಿಗೆ ಬೆಳಕು ನೀಡಿದಂತಾಗುತ್ತದೆ. ಆದ್ದರಿಂದ ನೇತ್ರದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಅದರಲ್ಲಿಯೂ ವೈದ್ಯಕೀಯ ಮಹಾವಿದ್ಯಾಲಯಗಳು, ಸಂಘ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಕಾಹೆರ ಉಪಕುಲಪತಿ ಡಾ. ನಿತಿನ ಗಂಗಾನೆ ಅವರು, ಮಾತನಾಡಿ, ಅಂಧತ್ವವು ಮಾನವನ ಸರ್ವಾಂಗೀಣ ಅಭಿವೃದ್ದಿಗೆ ಹಾಗೂ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಆದ್ದರಿಂದ ನೇತ್ರದಾನ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೇತ್ರದ ರಕ್ಷಣೆ ಕುರಿತು ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಜೆಎನ್‌ಎಂಸಿಯ ಉಪಪ್ರಾಚರ‍್ಯ ಡಾ.ರಾಜೇಶ್ ಪವಾರ ಮಾತನಾಡಿದರು. ನೇತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಿವಾನಂದ ಬುಬನಾಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಅರವಿಂದ್ ತೆನಗಿ, ಡಾ. ಎಸ್ ಬಿ ಪಾಟೀಲ, ಡಾ.ಭಾಗ್ಯಜ್ಯೋತಿ ಬಿ.ಕೆ, ಡಾ.ಚೇತನಾ ಡಾ.ಶರ್ವಾಣಿ, ಡಾ.ಫರ್ಹೀನ್ ಎಂ, ಡಾ. ರೋಹಿಣಿ, ಡಾ. ವಿವೇಕ್ ವಾಣಿ, ಡಾ. ದೀಪಶ್ರೀ ಎಂ. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ಸ್ಮಿತಾ ಕೆ ಎಸ್ ವಂದಿಸಿದರು. ಕರ‍್ಯಾಗಾರದಲ್ಲಿ 110ಕ್ಕೂ ಅಧಿಕ ದೇಶದ ವಿವಿಧ ಭಾಗಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ