Kannada NewsKarnataka NewsLatest

ಕೊರೋನಾ ಹಿನ್ನೆಲೆ: ಧನ್ವಂತರಿ ಹಾಗೂ ಅಗ್ನಿಹೋತ್ರ ಹೋಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತ ಯೋಗ ಭೂಮಿ. ಯಾವುದೇ ಮಾರಕ ಕಾಯಿಲೆ ಬಂದರೂ ವಾಸಿಯಾಗುತ್ತದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬುಧವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಧನ್ವಂತರಿ ಹಾಗೂ ಅಗ್ನಿಹೋತ್ರ ಹೋಮವನ್ನು ಆಯೋಜಿಸಿ ಮಾತನಾಡಿದರು. ಭಾರತ ಯೋಗ ಭೂಮಿ. ಅನೇಕ ಪೂರ್ವಜನರು, ಮಹಾತ್ಮರು ನೆಲಸಿದ ದೇಶ. ವಿಶ್ವದಾದ್ಯಂತ ಕೇಕೆ ಹಾಕುತ್ತಿರುವ ಮಾರಕ ರೋಗ ಕೊರೋನೊ ಬಂದರೂ ಇಲ್ಲಿ ಔಷಧ ಕಂಡು ಹಿಡಿಯುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಬೆಳಗಾವಿ ಸೇರಿದಂತೆ ಕರ್ನಾಟಕದ ಜನರು ಎರಡರಿಂದ ಮೂರು ವಾರಗಳ ಕಾಲ ಯಾವ ಕ್ಷೇತ್ರಗಳಿಗೂ ಹೋಗಬೇಡಿ. ಶ್ರೀಶೈಲಕ್ಕೆ ಸುಮಾರು ೧೬ ಲಕ್ಷ ಜನ ಭಕ್ತರು ಯುಗಾದಿಯ ದಿನದಂದು ಜ್ಯೋರ್ತಿಲಿಂಗ ದರ್ಶನ ಪಡೆಯುತ್ತಿದ್ದರು. ಆದರೆ ಶ್ರೀಶೈಲದ ಜಗದ್ಗುರುಗಳು ಕೊರೋನೊ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಭಕ್ತರು ಶ್ರೀಶೈಲದ ಯಾತ್ರೆಯನ್ನು ಮೊಕಟುಗೊಳಿಸಬೇಕೆಂದು ಭಕ್ತರಿಗೆ ಹೇಳಿದ್ದಾರೆ.

ಜಿಲ್ಲಾಡಳಿತವು ಸಹ ಕೊರೋನೊ ವೈರಸ್ ಭೀತಿ ಹಿನ್ನೆಲೆಯಲ್ಲಿ ವಿವಿಧ ಸಮುದಾಯದ ಮುಖಂಡರ ಸಭೆ ಕರೆದು ಧಾರ್ಮಿಕ ಕಾರ್ಯ ಮಾಡುವಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಬೇಡಿ ಎಂದು ಮನವಿ ಮಾಡಿದೆ. ಈ ಮಾರಕ ರೋಗದ ಬಗ್ಗೆ ಜನರಲ್ಲಿ ಭಯ ಬೇಡ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಭಾರತೀಯ ಸಂಪ್ರದಾಯದಂತೆ ಎಲ್ಲರು ಕೈ ಮುಗಿಯುವುದನ್ನು ಕಲಿಯಿರಿ. ಕೈ ಕೊಡುವುದನ್ನು ಕಲಿಯಬೇಡಿ. ಹೀಗೆ ಮಾಡಿದರೆ ಭಾರತ ಎಂದಿಗೂ ಸದೃಢವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನೊ ವೈರಸ್ ನಿಜಕ್ಕೂ ಅಪಾಯಕಾರಿ. ಆದರೆ ಭಯ ಪಡುವ ಅಗತ್ಯವಿಲ್ಲ.  ಜನರು ಸ್ವಚ್ಚವಾಗಿದ್ದರೆ ಯಾವ ರೋಗವೂ ಬರುವುದಿಲ್ಲ. ಈ ಹಿಂದೆ ಕೈ ಮುಗಿದರೆ ನಗುತ್ತಿದ್ದರು. ಆದರೆ ಈಗ ಕೈಮುಗಿಯದಿದ್ದರೆ ಅಪಾಯ ಎನ್ನುವುದು ಮನವರಿಕೆಯಾಗಿದೆ. ಭಾರತೀಯ ಸಂಸ್ಕೃತಿಯನ್ನು ಎಲ್ಲರೂ ಅನುಸರಿಸಿ ಎಂದು ಹೇಳಿದರು.

ವಿವಿಧ ಸಮುದಾಯದಲ್ಲಿರುವ ಸಂಪ್ರದಾಯಗಳು ಯಾವುವೂ ಮೂಢನಂಬಿಕೆಯಲ್ಲ. ಮೂಲ ನಂಬಿಕೆ. ಅದಕ್ಕಾಗಿ ಈ ಮೂಲ ನಂಬಿಕೆ ಅನುಸರಿಸುತ್ತ ಹೋಗಿ. ಎರಡು ವಾರಗಳ ಕಾಲ ಜನರು ಯಾವ ದೇವಸ್ಥಾನಗಳಿಗೂ ಹೋಗಬೇಡಿ. ಕೊರೋನೊ ಶಂಕಿತ ವ್ಯಕ್ತಿ ದೇವಸ್ಥಾನಕ್ಕೆ ಹೋದರೆ ಇಲ್ಲಿ ಬರುವ ಎಲ್ಲ ಭಕ್ತರಿಗೂ ಸೋಂಕು ಹರಡುವ ಭೀತಿ ಇರುವುದರಿಂದ ಜನರ ಮೇಲೆ ದುಷ್ಪರಿಣಾಮ ಆಗಬಾರದೆಂದು ದೊಡ್ಡ ದೊಡ್ಡ ದೇವಾಲಯಗಳ ಬಾಗಿಲು ಮುಚ್ಚಿವೆ ಎಂದರು.

ರಾಜ್ಯ ಸರಕಾರ ಹೇಳಿದ ಸೂಚನೆಯನ್ನು ಎಲ್ಲರೂ ಪಾಲಿಸಬೇಕು. ಕರ್ನಾಟಕದ ಜನರು ಕೆಲ ದಿನಗಳ ಕಾಲ ಮಹಾರಾಷ್ಟ್ರಕ್ಕೆ ಹೋಗುವುದು. ಮಹಾರಾಷ್ಟ್ರದ ಜನರು ಕರ್ನಾಟಕಕ್ಕೆ ಬರುವುದನ್ನು ನಿಲ್ಲಿಸಬೇಕು. ಬೇರೆ ಬೇರೆ ರಾಜ್ಯಗಳ ದೇವಸ್ಥಾನಕ್ಕೂ ಹೋಗಬೇಡಿ. ಸರಕಾರದ ಆದೇಶವನ್ನು ಪಾಲಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.

ಹುಕ್ಕೇರಿ ಹಿರೇಮಠದಲ್ಲಿ ಕೊರೋನೊ ವೈರಸ್ ಹೊಗಲಾಡಿಸಲು ಧನ್ವಂತರಿ ಹಾಗೂ ಅಗ್ನಿಹೋತ್ರ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಧನ್ವಂತರಿ ಹೋಮದಲ್ಲಿ ಪ್ರಮುಖವಾಗಿ ಆಯುರ್ವೇದದ ಔಷಧಿಗಳನ್ನು ಹಾಕುತ್ತೇವೆ. ಹೋಮವನ್ನು ಕೆಲವರು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಆದರೆ ಇದು ಪರಿಸರವನ್ನು ಶುದ್ದಗೊಳಿಸುವ ಪ್ರಕ್ರಿಯೆಯಾಗಿದೆ. ಕೆಟ್ಟ ವೈರಸ್‌ಗಳು ಇಲ್ಲಿ ಬರಬಾರದು ಎಂದು ಹೋಮ ಮಾಡಲಾಯಿತು ಎಂದರು.

ಅರವಿಂದ ಜೋಶಿ, ಉಮಾ ಹುಲಿಕಂತಿಮಠ, ಸುಮತಿ ಶೆಟ್ಟಿ, ಗೀತಾ ಹೆಗಡೆ, ದ್ರಾಕ್ಷಾಯಣಿ, ರಾಜಶ್ರೀ ಗುರುವಣ್ಣವರ, ಮಮತಾ ಪಾಟೀಲ, ಯಶೋಧಾ ಗುಡಮಟ್ಟಿ, ಜ್ಯೋತಿ ಗುಡಮಟ್ಟಿ, ಕಾಡಪ್ಪ ಗುರವಣ್ಣವರ, ಪುರೋಹಿತರಾದ ಉದಯ ಕೋರಿಮಠ, ಮಹಾಂತೇಶ ಹಿರೇಮಠ, ಶಿವಕುಮಾರ ಕಾತಾಪೂರಮಠ, ಶಾಂತವೀರ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button