Karnataka News

ಕೊರೋನಾ ಮತ್ತು ಮಾನವೀಯತೆ

✍️ ಪುಷ್ಪ ಪ್ರಸಾದ್ ಉಡುಪಿ
ಇಂದಿನ ದಿನಗಳಲ್ಲಿ ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಈ ಕೊರೋನ ಎಂಬ ಮಹಾಮಾರಿ ವೈರಸ್ ಸದ್ಯಕ್ಕೆ ಶಮನವಾಗುವಂತೆ ಕಾಣುತ್ತಿಲ್ಲ. ಸಾಂಕ್ರಾಮಿಕ ಕಾಯಿಲೆಗಳ ವಿಚಾರದಲ್ಲಿ ಕಳೆದ ಮೂರು ಸಾವಿರ ವರ್ಷಗಳಿಂದ ಅಪಾರ ಹಾನಿಗೊಳಗಾಗಿರುವ ಮನುಷ್ಯ ಸಮುದಾಯಕ್ಕೆ ಕೊರೋನ ಹಲವು ರೀತಿಯ ಸಂದೇಶಗಳನ್ನು ಒಟ್ಟಿಗೆ ನೀಡುತ್ತಿದೆ. ದೀರ್ಘ ಕಾಲದ ಸಂಕಟಗಳು ಮನುಷ್ಯನನ್ನು ಹೆಚ್ಚು ಮಾನವೀಯಗೊಳಿಸಬೇಕು. ಜಾತಿ, ಧರ್ಮ, ಭಾಷೆ, ದೇಶಗಳ ನಡುವೆ ಸಂಘರ್ಷಗಳನ್ನು ಇಲ್ಲವಾಗಿಸಿ, ಪರಸ್ಪರ ಕರುಣೆ, ಪ್ರೀತಿ ಮತ್ತು ಸಹಕಾರ ಮನೋಭಾವಗಳಿಂದ ಒಟ್ಟಿಗೆ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಬೇಕು. ಆದರೆ ಕೆಲವು ಮನುಷ್ಯ ವಿರೋಧಿ ಶಕ್ತಿಗಳು ಉರಿವ ಬೆಂಕಿಗೆ ತುಪ್ಪ ಸುರಿಯಲು ನೋಡುತ್ತಿದ್ದಾರೆ. ಆದರೆ ಬೆಂಕಿ ಹಚ್ಚಿದವನು, ಅದಕ್ಕೆ ತುಪ್ಪ ಸುರಿದವನು, ಆದರೆ ಯಾರೂ ಸಹ ಈ ಗಂಡಾಂತರದಿಂದ ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ. ಎಲ್ಲಾ ಮನುಷ್ಯರಿಗೆ ಕೊರೋನಾ ಸೋಂಕು ಬರದೇ ಹೋಗಬಹುದು. ಆದರೆ ಈ ಸೋಂಕು ಉಂಟು ಮಾಡುವ ಪರಿಣಾಮಗಳಿಂದ ಮಾತ್ರ ಯಾರಿಗೂ ಬಿಡುಗಡೆಯಿಲ್ಲದಂತಾಗಿದೆ. ಇದರ ತೀವ್ರತೆ ಮತ್ತು ಹಾನಿಕಾರಕ ಶಕ್ತಿಯನ್ನು ಪತ್ತೆ ಹಚ್ಚಿ ಲಾಕ್‌ ಡೌನ್‌ನಂತಹ ಸಾಮೂಹಿಕ ದಿಗ್ಬಂಧನದ ಸೂತ್ರಗಳನ್ನು ಅಳವಡಿಸಿದರು ಕೂಡ ಈ ಮಹಾಮಾರಿ ವೈರಸ್ ಇನ್ನು ನಾಶವಾಗಿಲ್ಲ..
ನಿರ್ಲಕ್ಷ್ಯ, ಮೌಢ್ಯ ಮನೋಭಾವನೆಯಿಂದ ಸಂಪೂರ್ಣ ಹೊರಬಂದು ಜಾತಿ, ಧರ್ಮ, ರಾಷ್ಟ್ರಗಳ ನಡುವೆ ಪರಸ್ಪರ ಪ್ರೀತಿ, ಸಹಕಾರ ಮನೋಭಾವನೆಯಿಂದ ಸೋಂಕಿನ ವಿರುದ್ಧ ಹೋರಾಡಿದರೆ ಕಷ್ಟದಿಂದ ಬಹಳ ಬೇಗ ಪಾರಾಗಬಹುದು. ಇದನ್ನು ಸಮರ್ಥವಾಗಿ ನಿಭಾಯಿಸಬೇಕಾದರೆ ಆಳುವ ಸರ್ಕಾರಗಳು ಮತ್ತು ಮಾಧ್ಯಮಗಳು ಕ್ರಿಯಾಶೀಲ ಪಾತ್ರವನ್ನು ವಹಿಸಬೇಕು. ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ನಾವು ಸಹಕರಿಸಿದರೆ ಖಂಡಿತಾ ಇದನ್ನು ಮಟ್ಟ ಹಾಕಲು ಸಾಧ್ಯವಿದೆ. ಎಲ್ಲೆಂದರಲ್ಲಿ ಗುಂಪು ಸೇರದೆ, ಅನವಶ್ಯಕವಾಗಿ ತಿರುಗಾಟ ಮಾಡದೇ, ಹೊರಗೆ ಹೋಗಲೇ ಬೇಕಾದ ಸಂದರ್ಭದಲ್ಲಿ ಮುಖ ಗವಸ ತೊಟ್ಟು ಸಾಮಾಜಿಕ ಅಂತರ ಕಾಪಾಡುವಲ್ಲಿ ನಾವುಗಳೇ ಮುಂದೆ ನಿಂತು ಸಹಕರಿಸಿದರೆ ಲಾಕ್ಡೌನ್ ನಂತಹ ಪರಿಸ್ಥಿತಿ ಬರುವುದಿಲ್ಲ. ಅದು ಬಿಟ್ಟು ಅಯ್ಯೋ ನನಗೇನು ಆಗುವುದಿಲ್ಲ,  ನಾನು ಚೆನ್ನಾಗಿದ್ದೇನೆ, ನಾನು ಮಾಸ್ಕ್ ಹಾಕುವುದಿಲ್ಲ, ಅದು ಇದು ಉಡಾಫೇ ಮಾತಾಡಿದರೆ ಕೊರೋನ ಅಲ್ಲ ಅದರ ಆಚಿನದು ಬಂದು ವಕ್ಕರಿಸುವ ಸಾಧ್ಯತೆ ಇದೆ.
ಮಾಧ್ಯಮಗಳನ್ನು ನೋಡಿ ಭಯಪಡುವುದಕ್ಕಿಂತ ಅದನ್ನು ಎಚ್ಚರಿಕೆಯ ಗಂಟೆ ಎಂದು ತಿಳಿದು ನಾವು ಜಾಗ್ರತರಾದರೆ ಯಾವ ಸಮಸ್ಯೆಯೂ ಇರುವುದಿಲ್ಲ.
ಸಂಬಂಧಿಕರೂ ರೋಗಗ್ರಸ್ಥರನ್ನು ನೋಡಿದರೆ ಹೆದರಿ ಓಡುತ್ತಾರೆ. ಯಾಕೆ ಹೀಗೆ ಮಾಡುವುದು? ಸರಿಯಾದ ವ್ಯವಸ್ಥೆ ಮಾಡಿಕೊಂಡು ಅವರನ್ನು ಪ್ರೀತಿಯಲ್ಲಿ ಉಪರಿಸಿದರೆ  ಖಂಡಿತ ಬದುಕುಳಿಯಲು ಸಾಧ್ಯವಿದೆ. ಪ್ರತಿಯೊಬ್ಬರು ಕೂಡ ಹೆದರಿಕೊಂಡು ಬರಿ ಗಾಳಿ ಹಾಕುತ್ತಿದ್ದರೆ  ಆಗದು, ಅದು ಬಿಟ್ಟು ಒಂದೊಳ್ಳೆ ನಾಲ್ಕು ಪ್ರೀತಿಯಲ್ಲಿ ಮಾತನಾಡಿ ಅವರಿಗೆ ಒಳ್ಳೆಯ ಆಹಾರ ವ್ಯವಸ್ಥೆ, ಕಷಾಯ, ಬಿಸಿನೀರು ಹಾಗೂ ವೈದ್ಯರು ಹೇಳಿದಂತೆ ಉಪಚಾರ ಮಾಡಿದರೆ ಎಂದಿಗೂ ಸಾವಿನ ಸಂಖ್ಯೆ ಹೆಚ್ಚದು. ಮೊದಲು ನಮ್ಮಲ್ಲಿ ನಾವು ಮಾನವೀಯತೆ ಗುಣಗಳನ್ನು ಬೆಳೆಸಿಕೊಂಡು ಎಲ್ಲರನ್ನು ಉಪಚರಿಸಿದರೆ, ಜಾಗೃತಿ ಮೂಡಿಸಿದರೆ ಖಂಡಿತವಾಗಿಯೂ ಈ ಸೋಂಕನ್ನು ತಡೆಗಟ್ಟಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button