ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ (ವೈದ್ಯಕೀಯ ವಿಜ್ಞಾನ ಸಂಸ್ಥೆ -ಬಿಮ್ಸ್) ಜಿಲ್ಲೆಯ ಎಲ್ಲ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಎಲ್ಲ ರೀತಿಯ ಸೌಲಭ್ಯಗಳಿಲ್ಲದಿದ್ದರೂ ವೈದ್ಯರು, ನರ್ಸ್ ಗಳು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಇಲ್ಲಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕೊರೋನಾ ಕರ್ತವ್ಯಕ್ಕೆ ಹಾಲುಣಿಸುವ ತಾಯಂದಿರನ್ನೂ (ಫೀಡಿಂಗ್ ಮದರ್ಸ್) ನೇಮಿಸಲಾಗುತ್ತಿದೆ. 7 ತಿಂಗಳ ಮಗುವಿರುವ ತಾಯಂದಿರಿಂದ ಹಿಡಿದು ಒಂದು ವರ್ಷ, ಒಂದೂವರೆ ವರ್ಷದ ಮಗುವಿರುವವರನ್ನೂ ಕರ್ತವ್ಯಕ್ಕೆ ನೇಮಿಸಲಾಗುತ್ತಿದೆ.
ಮಾಹಿತಿಯ ಪ್ರಕಾರ ಕಳೆದ ಬ್ಯಾಚ್ ನಲ್ಲಿ 7 ತಿಂಗಳ ಮಗುವಿರುವ ನರ್ಸ್ ಒಬ್ಬರು ಕರ್ತವ್ಯ ನಿರ್ವಹಿಸಿದ್ದಾರೆ. ಇಂದಿನಿಂದ ಆರಂಭವಾಗುತ್ತಿರುವ ಬ್ಯಾಚ್ ನಲ್ಲಿ ಚಿಕ್ಕಮಕ್ಕಳಿರುವ 4 -5 ತಾಯಂದಿರಿದ್ದಾರೆ. ಸಾಮಾನ್ಯವಾಗಿ ಒಂದು ವರ್ಷದಿಂದ 2 ವರ್ಷದವರೆಗೂ ಮಕ್ಕಳು ತಾಯಿಯ ಎದೆ ಹಾಲನ್ನು ಕುಡಿಯುತ್ತಾರೆ. ಶಿಕ್ಷಕರಿಗೂ 15 ತಿಂಗಳವರೆಗೆ ಮಕ್ಕಳಿಗೆ ಹಾಲುಣಿಸಲು ಮೊದಲ ಮತ್ತು ಕೊನೆಯ ಕ್ಲಾಸ್ ಗಳಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ
ಆದರೆ ಕೊರೋನಾ ಕರ್ತವ್ಯದಲ್ಲಿ ಸಣ್ಣ ಸಣ್ಣ ಮಕ್ಕಳಿರುವ ತಾಯಂದಿರನ್ನು ರಾತ್ರಿ ಕರ್ತವ್ಯ ಸೇರಿದಂತೆ ಎಲ್ಲ ಕರ್ತವ್ಯಗಳಿಗೆ ನೇಮಕ ಮಾಡಲಾಗುತ್ತಿದೆ. ಇವರು 4 ದಿನದಿಂದ ಒಂದು ವಾರದ ವರೆಗೆ ಕರ್ತವ್ಯ ನಿರ್ವಹಿಸಿ ನಂತರ 14 ದಿನ ನಿಗದಿತ ವಸತಿ ಗೃಹದಲ್ಲಿ ಕ್ವಾರಂಟೈನ್ ಮಾಡಬೇಕಾಗುತ್ತದೆ. ಅಂದರೆ ಸುಮಾರು 21 ದಿನ ಆ ಎಳೆಯ ಮಗು ತಾಯಿಯಿಂದ ಸಂಪೂರ್ಣ ದೂರ ಉಳಿಯಬೇಕಾಗಿದೆ.
ಇಷ್ಟು ಸಣ್ಣ ಮಕ್ಕಳನ್ನು ತಾಯಿಯಿಂದ ಬೇರ್ಪಡಿಸಲು ಅಧಿಕಾರಿಗಳಿಗೆ ಮನಸ್ಸಾದರೂ ಹೇಗೆ ಬರುತ್ತದೆ ಎನ್ನುವುದು ಪ್ರಶ್ನೆಯಾಗಿದೆ. ಕನಿಷ್ಟ 3 ವರ್ಷದ ಮಗುವಿರುವ ತಾಯಂದಿರನ್ನಾದರೂ ಕೊರೋನಾ ಕರ್ತವ್ಯದಿಂದ ಹೊರಗಿಡುವುದು ಒಳಿತು. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಾರೋ ನೋಡಬೇಕಿದೆ.
ಈ ಕುರಿತು ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ ಅವರನ್ನು ಪ್ರಗತಿವಾಹಿನಿ ಪ್ರಶ್ನಿಸಿದಾಗ, 3 ರಿಂದ 6 ತಿಂಗಳ ನಂತರ ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಬೇಕೆನ್ನುವುದು ಸಾಮಾನ್ಯ ನಿಯಮ. ಹಾಗಾಗಿ 6 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಗು ಇರುವವರನ್ನು ಕರ್ತವ್ಯಕ್ಕೆ ಹಾಕುವುದು ನಮಗೆ ಅನಿವಾರ್ಯ. ಅಂತವರನ್ನು ಬಿಟ್ಟರೆ ಮ್ಯಾನೇಜ್ ಮಾಡುವುದು ಸಾಧ್ಯವಿಲ್ಲ ಎನ್ನುತ್ತಾರೆ.
ಬೇರೆ ಕಡೆಯಿಂದ ಸಿಬ್ಬಂದಿ ಕರೆಸಲಿ
ಬಿಮ್ಸ್ ನಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಹಾಗಾಗಿ ಬೇರೆ ಕಡೆಯಿಂದ ಕರೆಸಬೇಕು. ತಾಲೂಕು ಪ್ರದೇಶದಿಂದ, ಖಾಸಗಿ ವಲಯದಿಂದ ವೈದ್ಯರು, ನರ್ಸ್ ಗಳನ್ನು ಸೇವೆಗೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ದೊಡ್ಡ ಸಮಸ್ಯೆಯಾಗಲಿದೆ. ಆದರೆ ಇಲ್ಲಿ ಯಾರನ್ನೂ ಕರೆಸುತ್ತಿಲ್ಲ. ಇರುವವರಲ್ಲೇ ಮ್ಯಾನೇಜ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಹಾಲುಣಿಸುವ ತಾಯಂದಿರನ್ನೂ ಕೆಲಸಕ್ಕೆ ನೇಮಿಸಬೇಕಾಗಿದೆ. ಈಗ ಎಲ್ಲ ವೈದ್ಯರದ್ದು ಒಂದು ಸುತ್ತಿನ ಕರ್ತವ್ಯ ಮುಗಿದಿದ್ದು ಇನ್ನು ಮುಂದೆ ವೈದ್ಯರದ್ದೂ ಸಮಸ್ಯೆಯಾಗಲಿದೆ ಎಂದು ಹೆಸರು ಹೇಳಲಿಚ್ಚಿಸದ ವೈದ್ಯರೊಬ್ಬರು ಪ್ರಗತಿವಾಹಿನಿ ಗೆ ತಿಳಿಸಿದರು.
ಹಾಲುಣಿಸುವ ತಾಯಂದಿರನ್ನು ನಾವು ಕರ್ತವ್ಯಕ್ಕೆ ನೇಮಿಸುತ್ತಿಲ್ಲ. ಹಾಗೊಮ್ಮೆ ಹಾಕಿದರೆ ಅಂತವರು ಬಂದು ನನ್ನನ್ನು ಭೇಟಿಯಾಗಲಿ. ಆದರೆ 6 ತಿಂಗಳ ನಂತರ ಹಾಲುಣಿಸುವುದನ್ನು ನಿಲ್ಲಿಸಬೇಕೆನ್ನುವುದು ಸಾಮಾನ್ಯ ನಿಯಮ. ಹಾಗಾಗಿ ಅಂತವರನ್ನು ಕರ್ತವ್ಯಕ್ಕೆ ಹಾಕಲೇಬೇಕಾಗುತ್ತದೆ. ವಿಶ್ವದಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಹಿಳೆಯರು ಗರ್ಭಿಣಿಯರು ಇಲ್ಲವೇ ಫೀಡಿಂಗ್ ಮದರ್ ಇರುತ್ತಾರೆ. ಅವರನ್ನೆಲ್ಲ ಹೊರಗಿಟ್ಟು ಆಸ್ಪತ್ರೆ ನಡೆಸಲು ಸಾಧ್ಯವಿಲ್ಲ.
-ವಿನಯ ದಾಸ್ತಿಕೊಪ್ಪ, ಬಿಮ್ಸ್ ನಿರ್ದೇಶಕ
6 ತಿಂಗಳವರೆಗೆ ಮಗುವಿಗೆ ಕೇವಲ ಎದೆಹಾಲು ಉಣಿಸಬೇಕು. ಆ ನಂತರ ಹಂತಹಂತವಾಗಿ ಬೇರೆ ಆಹಾರವನ್ನು ಹಾಕುತ್ತ ಎದೆಹಾಲನ್ನು ನಿಲ್ಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಒಂದು ವರ್ಷದವರೆಗೂ ಎದೆ ಹಾಲು ಉಣಿಸಬೇಕು ಎಂದು ಮಕ್ಕಳ ತಜ್ಞರು ಸಲಹೆ ನೀಡುತ್ತರೆ. ಈಗ ಬಿಮ್ಸನಲ್ಲಿ ಸಿಬ್ಬಂದಿ ಕೊರತೆ ಇದ್ದಿರಬಹುದು. ಅದಕ್ಕಾಗಿ ಎಳೆಯ ಮಗುವಿನ ತಾಯಂದಿರನ್ನೂ ಕೊರೋನಾ ಕರ್ತವ್ಯಕ್ಕೆ ಹಾಕುತ್ತಿದ್ದಾರೆ. ಆದರೆ 21 ದಿನಗಳಷ್ಟು ಸುದೀರ್ಘ ಕಾಲ ತಾಯಿ -ಮಗುವನ್ನು ದೂರ ಮಾಡಬಾರದೆನ್ನುವುದು ಸಾಮಾಜಿಕ, ಮಾನವೀಯ ಕಳಕಳಿ
-ಡಾ.ಎಚ್.ಬಿ. ರಾಜಶೇಖರ, ಹಿರಿಯ ವೈದ್ಯರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ