ಗದಗದಲ್ಲಿ ಬಟ್ಟೆ ವ್ಯಾಪಾರಿಗೂ ವಕ್ಕರಿಸಿದ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಗದಗ: ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕಿತರು ಗುಣಮುಖರಾಗುತ್ತಿರುವುದು ಸ್ಂತಸದ ವಿಚಾರ. ಇನ್ನೊಂದೆಡೆ ದ್ವಿತಿಯ ಸಂಪರ್ಕದಲ್ಲಿದ್ದ ವ್ಯಕ್ತಿಯಲ್ಲಿಯೂ ಕೊರೊನಾ ಕಣಿಸಿಕೊಳ್ಳುತ್ತಿರುವುದು ಆತಂಕವನ್ನುಂಟುಮಾಡಿದೆ.

ಗದಗ ಜಿಲ್ಲೆಯಲ್ಲಿ 3ನೇ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಈ ವ್ಯಕ್ತಿ ಕೊರೊನಾ ಸೋಂಕಿತ ವ್ಯಕ್ತಿಯ ಸೆಕೆಂಡರಿ ಕಾಂಟೆಕ್ಟ್ ನಲ್ಲಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಮೂರು ಸೋಂಕಿತ ಪ್ರಕರಣಗಳು ಕೂಡ ನಗರದ ರಂಗನವಾಡಿ ಗಲ್ಲಿಯಲ್ಲಿಯೇ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ಏಪ್ರಿಲ್ 6ರಂದು 80 ವರ್ಷದ ವೃದ್ಧೆಯಲ್ಲಿ(ರೋಗಿ-166) ದೃಢಪಟ್ಟಿತ್ತು. ಆ ವೃದ್ಧೆ ಏಪ್ರಿಲ್ 8ರಂದು ಮೃತಪಟ್ಟಿದ್ದರು. ವೃದ್ಧೆ ಬಳಿಕ 2ನೇ ಪ್ರಕರಣ ಏಪ್ರಿಲ್ 16ರಂದು 59 ವರ್ಷದ ಮಹಿಳೆಗೆ(ರೋಗಿ-304) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು 3ನೇ ಪ್ರಕರಣ ಬೆಳಕಿಗೆ ಬಂದಿದ್ದು, ರೋಗಿ-304 ಮಹಿಳೆಯಿಂದ 42 ವರ್ಷದ ವ್ಯಕ್ತಿಗೆ(ರೋಗಿ-370) ಸೋಂಕು ತಗುಲಿರುವುದು ವರದಿಯಾಗಿದೆ.

ಇಂದು ಸೋಂಕು ದೃಢಪಟ್ಟ ರೋಗಿ-370 ಬಟ್ಟೆ ವ್ಯಾಪಾರಿಯಾಗಿದ್ದು, ನಗರದ ಗಲ್ಲಿ ಗಲ್ಲಿಗಳಲ್ಲಿ ಹಾಗೂ ಸುತ್ತಲಿನ ಅನೇಕ ಪಟ್ಟಣಗಳಿಗೆ ಸಂಚರಿಸಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಸದ್ಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿತರ ಇನ್ನಷ್ಟು ಟ್ರಾವೆಲ್ ಹಿಸ್ಟರಿಯನ್ನು ಕಲೆಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button