ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆರೋಗ್ಯ ಸಮತೋಲನಕ್ಕಾಗಿ ವಿವಿಧತೆಯಲ್ಲಿ ಏಕತೆ ತೋರುವ ಚಿಕಿತ್ಸಾ ಪರಿಕಲ್ಪನೆಗಳಲ್ಲಿ ಎಲ್ಲ ಮಾದರಿಯ ಉಪಚಾರಕ್ಕಿಂತ ಜಾಗೃತಿ ಅತ್ಯುತ್ತಮವಾದುದು ಎಂದು ಯು ಎಸ್ ಎಮ್ ಕೆ ಎಲ್ ಇ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಹೇಳಿದರು.
ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ಪ್ರಸ್ತುತ ಕೊವಿಡ್-೧೯ರ ಸನ್ನಿವೇಶದಲ್ಲಿ ಆಯುಷ್ ಮಾದರಿಯ ಪಾತ್ರ ಎಂಬ ವಿಷಯದ ಮೇಲೆ ಹೆಸರಾಂತ ಹೋಮಿಯೊಪಥಿ ತಜ್ಞ ಹಾಗೂ ಕೆ ಎಲ್ ಇ ಹೋಮಿಯೊಪಥಿ ಕಾಲೇಜಿನ ಪ್ರಾಂಶುಪಾಲ ಡಾ;. ಎಮ್ ಎ ಉಡಚನಕರ ರವರ ವಿಶೇಷ ಉಪನ್ಯಾಸದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅನೇಕ ವೈದ್ಯಕೀಯ ಸಂಶೋಧನಾ ಕೇಂದ್ರಗಳು ತೊಡಗಿದ್ದು, ಕೊರೊನಾ ಹೆಮ್ಮಾರಿಯನ್ನು ತಡೆಯುವ ಲಸಿಕೆಯನ್ನು ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹೋಮಿಯೊಪಥಿ ತಜ್ಞ ಹಾಗೂ ಕೆ ಎಲ್ ಇ ಹೋಮಿಯೊಪಥಿ ಕಾಲೇಜಿನ ಪ್ರಾಂಶುಪಾಲ ಡಾ. ಎಮ್ ಎ ಉಡಚನಕರ್ ಅವರು ಮಾತನಾಡುತ್ತಾ, ಕೊರೊನಾ ವೈರಾಣು ವಿರುದ್ದ ಹೋರಾಡುವ ಹಾಗೂ ನಮ್ಮ ಆರೋಗ್ಯವನ್ನು ಹೇಗೆ ಸಮತೋಲನದಲ್ಲಿ ಇಟ್ಟುಕೊಳ್ಳಲು ಆಯುಷ್ಯ ಔಷಧಗಳು ಸಹಾಯಕಾರಿಯಾಗಿರುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಮಾತನಾಡುತ್ತಾ, ನಾವು ನಮ್ಮ ಮುಂದಿನ ದಿನಗಳನ್ನು ಕೊರೊನಾ ಜೊತೆಗೆ ಬಾಳುವುದನ್ನು ಕಲಿಯಬೇಕು, ಏಕೆಂದರೆ ಕೊರೊನಾ ಸೋಂಕು ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯ ಲಕ್ಷಣಗಳಿಂದ ಕೂಡಿದೆ. ದೇಶ ವಿದೇಶಗಳಲ್ಲಿ ಅಲ್ಲಿರುವ ಹವಾಮಾನದ ಆಧಾರದ ಮೇಲೆ ಅಮೂರ್ತತೆಯನ್ನು ಹೊಂದಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾವು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಸಾಮಾಜಿಕವಾಗಿ ಎದುರಿಸಲು ಸಿದ್ದರಾಗಿ, ಸರ್ಕಾರದ ಆದೇಶವನ್ನು ಪಾಲಿಸುತ್ತಾ ಪ್ರತಿಯೊಬ್ಬರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆರೋಗ್ಯದಿಂದಿರಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಬಿ ಎಸ್ ಮಹಾಂತಶೆಟ್ಟಿ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಇತಾಪೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ೫೦ ಕ್ಕೂ ಅಧಿಕ ವೈದ್ಯ ವೃಂದದವರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ