ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೀಲ್ ಡೌನ್ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಕರುನಾಡು ಸಿಲ್ ಡೌನ್ ಗೆ ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಮುನ್ನುಡಿ ಬರೆಯಲಾಗಿದ್ದು, ಬೆಂಗಳೂರಿನ ಎರಡು ಪ್ರದೇಶಗಳನ್ನು ಆರಂಭಿಕವಾಗಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಬೆಂಗಳೂರು ಕೊರೊನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದ್ದು, ಕೊರೊನಾ ಸೋಂಕಿತರು ಹೆಚ್ಚು ಇರುವ ಬೆಂಗಳೂರಿನ ವಾರ್ಡ್ ನಂಬರ್ 134 ಪಾದರಾಯನಪುರ ಹಾಗೂ ವಾರ್ಡ್ ನಂಬರ್ 135 ಬಾಪೂಜಿನಗರಗಳಲ್ಲಿ ಸೀಲ್ ಡೌನ್ ಜಾರಿಮಾಡಲಾಗಿದೆ. ಅಲ್ಲದೇ ಬೆಂಗಳೂರಿನ ಇತರ ಪ್ರದೇಶಗಳಲ್ಲೂ ಸಂಪೂರ್ಣ ಸೀಲ್ ಡೌನ್ ಜಾರಿಮಾಡಲು ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಸಿದ್ಧತೆ ನಡೆಸಿದ್ದು, ನಗರದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಬ್ಯಾರಿಕೇಡ್ ಗಳನ್ನು ಹಾಕುತ್ತಿದ್ದಾರೆ.
ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ಪ್ರಕಾರ ಈಗಾಗಲೇ ಬೆಂಗಳೂರಿನ ಪಾದರಾಯನಪುರ ಹಾಗೂ ಬಾಪುಜಿ ನಗರದಲ್ಲಿ ಕ್ಲಾಂಪ್ ಡೌನ್ ಘೋಷಿಸಲಾಗಿದ್ದು, ಯಾರೊಬ್ಬರು ಕೂಡ ಮನೆಯಿಂದ ಹೊರಬರುವಂತಿಲ್ಲ. ಅಗತ್ಯವಸ್ತುಗಳು, ತರಕಾರಿ ಖರೀದಿ ನೆಪದಲ್ಲಿ ಯಾರೂ ಆಚೆಬರಲು ಸಾಧ್ಯವಿಲ್ಲ. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು ನಿಷೇಧಾಜ್ನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಅಗತ್ಯ ವಸ್ತುಗಳನ್ನು ಮನೆಗಳಿಗೆ ಪೂರೈಸುವ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಲಿದೆ. ಸೀಲ್ ಡೌನ್ ಆದ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಹೆಲ್ತ್ ಸರ್ವೆ ಮಾಡಲಿದ್ದಾರೆ. ಇನ್ನೂ 14 ದಿನಗಳ ಕಾಲ ಸೀಲ್ ಡೌನ್ ಆಗಲಿದೆ ಎಂದು ತಿಳಿಸಿದರು.
ಈಗಾಗಲೇ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದ್ದು, 6 ಜನರು ಸಾವನ್ನಪ್ಪಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಜನರು ಅಲ್ಲಲ್ಲಿ ಓಡಾಟ ನಡೆಸುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಸಂಪೂರ್ಣ ಸೀಲ್ ಡೌನ್ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ