ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೊನಾ ವೈರಸ್ ಅಲ್ಲಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ವಿಶೇಷ ಮನವಿ ಮಾಡಿದೆ.
ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ದಾಖಲಾಗಿರುವ ರೋಗಿಗಳನ್ನು ನೋಡಲು ಅವರ ಸಂಬಂಧಿಕರು ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿ, ರೋಗಿಗಳಿಗೆ ಚಿಕಿತ್ಸೆ ನೀಡುವುದು ಮತ್ತು ಅವರ ಸಂಬಂಧಿಕರ ಆರೋಗ್ಯ ಕಾಪಾಡುವುದು ಆಸ್ಪತ್ರೆಯ ಪ್ರಮುಖ ಆದ್ಯತೆಯಾಗಿದೆ. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಲಿದೆ.
ಅಲ್ಲದೇ ರೋಗಿಗಳನ್ನು ಭೇಟಿ ಮಾಡಲು ಆಸ್ಪತ್ರೆಯು ಸಂಜೆ ೫ ರಿಂದ ೬ ಘಂಟೆಯವೆರೆಗೆ ಮಾತ್ರ ಸಮಯಾವಕಾಶವನ್ನು ನೀಡಿದೆ. ಆದ್ದರಿಂದ ಸಾರ್ವಜನಿಕರು ಮತ್ತು ರೋಗಿಗಳ ಸಂಬಂಧಿಕರು ಸಹಕರಿಸಬೇಕೆಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಎಂ ವಿ ಜಾಲಿ ಅವರು ಮನವಿ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ತಾವು ಅತ್ಯಂತ ಪ್ರೀತಿ ಪಾತ್ರರು ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದಂತೆ ಕೋವಿಡ್ -೧೯ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಾದ್ದರಿಂದ ಅದನ್ನು ತಡೆಗಟ್ಟಲು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಕೇಂದ್ರ ಸರಕಾರದ ನಿಯಮಾನುಸಾರ, ಗುಂಪು ಕಟ್ಟಿ ನಿಲ್ಲುವದು, ಸಾಕಷ್ಟು ಜನ ಇರುವಲ್ಲಿ ಚರ್ಚೆ ಮಾಡುವುದು ಸೇರಿದಂತೆ ಅನೇಕ ಜನರು ಸೇರಿಕೊಳ್ಳುವುದನ್ನು ಮಾಡಬೇಡಿ. ಇದರಿಂದ ರೋಗವನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಅನಾವಶ್ಯಕವಾಗಿ ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿ. ರೋಗಿಗಳನ್ನು ಭೇಟಿ ಮಾಡಲು ನಿಗಧಿತ ಸಮಯದಲ್ಲಿ ಬಂದು ಭೇಟಿಯಾಗಿ. ಜನಸಂದಣಿಯನ್ನು ತಪ್ಪಿಸಿ, ಆರೋಗ್ಯವಾಗಿರಿ. ಸರಕಾರದ ನೀತಿ ನಿಯಮಗಳನ್ನು ಪಾಲಿಸಿ, ರೋಗ ಹರಡುವದನ್ನು ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ