ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಮಾರಣಾಂತಿಕ ಕೊರೊನಾ ವೈರಸ್ ಗೆ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಗೊಡಿದ್ದು, ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಈವರೆಗೆ ಕೊರೋನಾ ವೈರಸ್ಗೆ 1500 ಮಂದಿ ಬಲಿಯಾಗಿದ್ದಾರೆ.
ಕಳೆದ 24 ಗಂಟೆಯಲ್ಲಿ ಅಮೆರಿಕದಲ್ಲಿ 18 ಸಾವಿರ ಮಂದಿಗೆ ಕೊರೊನಾ ಬಂದಿದ್ದರೆ 345 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಅಮೆರಿಕದಲ್ಲಿ 1.04 ಲಕ್ಷ ಜನರಿಗೆ ಕೊರೊನಾ ಬಂದಿದೆ. ಈ ಪೈಕಿ 1,706 ಮಂದಿ ಕೊರೊನಾದಿಂದ ಮೃತಪಟ್ಟರೆ 2,465 ಮಂದಿ ಗುಣಮುಖರಾಗಿದ್ದಾರೆ.
ಕೊರೊನಾ ಪರಿಣಾಮ ಅಮೆರಿಕದ ಆರ್ಥಿಕತೆ ಅಧೋಗತಿಗೆ ಕುಸಿದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದುರ್ಬಲಗೊಂಡಿರುವ ಅಮೆರಿಕದ ಆರ್ಥಿಕತೆಯನ್ನು ಮೇಲೆತ್ತಲು 2 ಟ್ರಿಲಿಯನ್ ಡಾಲರ್ ಯೋಜನೆಗೆ ಸಹಿ ಹಾಕಿದ್ದಾರೆ. ಶ್ವೇತಭವನದಲ್ಲಿ 2 ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ಗೆ ಅನುಮೋದನೆ ನೀಡಲಾಗಿದೆ.
ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ದೇಶಾದ್ಯಂತ ಆಸ್ಪತ್ರೆಗಳ ನಿರ್ಮಾಣಕ್ಕೆ ಟ್ರಂಪ್ ಚಿಂತನೆ ನಡೆಸಿದ್ದು, ಎಂಜಿನಿಯರ್ಗಳ ಜೊತೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಅಮೆರಿಕದ್ಯಾಂತ ವೆಂಟಿಲೇಟರ್ ಮತ್ತು ವೈದ್ಯಕೀಯ ಉಪಕರಣಗಳನ್ನು ಪೂರೈಸಲು ಟ್ರಂಪ್ ಮುಂದಾಗಿದ್ದಾರೆ. ಅಲ್ಲದೇ ವಿಶ್ವಾದ್ಯಂತ ಅಗತ್ಯವಿರುವ ದೇಶಗಳಿಗೆ ವೆಂಟಿಲೇಟರ್ಗಳನ್ನು ಪೂರೈಸಲು ಸಿದ್ದವಾಗಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಅಮೆರಿಕ(1.04 ಲಕ್ಷ), ಇಟಲಿ(86,498), ಚೀನಾ(81,285), ಸ್ಪೇನ್ (65,718), ಜರ್ಮನಿ(50,871) ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ