ಕೊರೊನಾ ಭೀತಿ: ರಾಜ್ಯಾದ್ಯಂತ ಕಟ್ಟೆಚ್ಚರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್​ ಮೂಲದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಆತನಿಗೆ ಹೈದರಾಬಾದ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಕಟ್ಟೆಚ್ಚ ವಹಿಸಿದ್ದಾರೆ.

ಪ್ರಮುಖವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, 12 ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದೆ. ಜನವರಿ 20ರಿಂದ ಇಲ್ಲಿವರೆಗೆ ಒಟ್ಟು 34,490 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ ಬೆಂಗಳೂರಿನ 369 ಮಂದಿ 19 ಕೊರೊನಾ ಸೋಂಕಿತ ದೇಶಗಳಿಗೆ ಭೇಟಿ ಕೊಟ್ಟವರು ಎಂದು ತಿಳಿದು ಬಂದಿದೆ. ಬೆಂಗಳೂರಿನ 369 ಮಂದಿ ಪೈಕಿ 269 ಮಂದಿಯನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ.

ಹೈದಾರಾಬಾದ್ ಟೆಕ್ಕಿ ಬೆಂಗಳೂರಿನ ಮೆಜೆಸ್ಟಿಕ್ ನಿಂದ ಪ್ರಯಾಣ ಬೆಳೆಸಿರುವ ಹಿನ್ನಲೆಯಲ್ಲಿ ಸಾರಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮುಂಜಾಗೃತಾ ಕ್ರಮಾವಾಗಿ ಮಾಸ್ಕ್, ಗ್ಲೌಸ್ ಧರಿಸಿಕೊಳ್ಳುವಂತೆ ಹಾಗೂ ಕೆಮ್ಮು, ನೆಗಡಿ, ಜ್ವರ ಕಂದು ಬಂದಲ್ಲಿ ನಿರ್ಲಕ್ಷ್ಯ ವಹಿಸದೇ ಆರೋಗ್ಯ ತಪಾಸಣೆ ನಡೆಸಿಕೊಳ್ಳುವಂತೆ ಬಿಎಂಟಿಸಿ ಎಂ ಡಿ ಶಿಖಾ ಸೂಚನೆ ನೀಡಿದ್ದಾರೆ.

ಹೈದರಾಬಾದ್ ಮೂಲದ ಟೆಕ್ಕಿ ಜೊತೆ ಪ್ರಯಾಣಿಸಿದ ಮತ್ತು ಆತನ ಜೊತೆ ಇದ್ದ ಎಲ್ಲರನ್ನೂ ತಪಾಸಣೆ ಮಾಡಲಾಗುತ್ತಿದೆ. ದುಬೈನಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿನ ಸಹ ಪ್ರಯಾಣಿಕರು, ಬೆಂಗಳೂರಿನಲ್ಲಿ ಒಂದು ದಿನ ಆತ ಸಂಪರ್ಕಿಸಿದ್ದ ವ್ಯಕ್ತಿಗಳು, ಹೈದರಾಬಾದ್​​​ಗೆ ಪ್ರಯಾಣಿಸಿದ ಸಹ ಪ್ರಯಾಣಿಕರು ಎಲ್ಲರನ್ನೂ ಸಂಪರ್ಕಿಸಲಾಗಿದೆ. ಜೊತೆಗೆ ಒಂದು ದಿನ ಬೆಂಗಳೂರಿನ ಪಿಜಿಯಲ್ಲಿ ಇದ್ದವರು. ಹೀಗೆ ಒಟ್ಟು 80 ಜನರ ಪಟ್ಟಿ ತಯಾರಿಸಿ ಅವರೆಲ್ಲರನ್ನೂ ಸಂಪರ್ಕಿಸಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ವಿಮಾನ ಮತ್ತು ಬಸ್ ಟಿಕೆಟ್ ಮಾಹಿತಿ ಪಡೆದು ಎಲ್ಲರನ್ನೂ ಸಂಪರ್ಕಿಸಿದ್ದಾರೆ. ಈಗ ಎಲ್ಲಾ 80 ಜನರಲ್ಲಿ ಯಾರಿಗೂ ರೋಗ ಲಕ್ಷಣಗಳು ಇಲ್ಲ ಎಂಬುದು ತಿಳಿದು ಬಂದಿದೆ.

ಹೈದರಾಬಾದ್​ ಮೂಲದ ಟೆಕ್ಕಿ ಫೆಬ್ರವರಿ 20ಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಒಂದು ದಿನ ಬೆಂಗಳೂರಿನಲ್ಲಿ ಇದ್ದರು. 21ರಂದು ಹೈದರಾಬಾದ್ ಗೆ ತೆರಳಿದ್ದರು. 27ರಂದು ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಆತ ದುಬೈನಲ್ಲಿದ್ದ ಸಂಸ್ಥೆಯಲ್ಲಿ ಚೀನಾ ಮೂಲದ ಜನರಿದ್ದರು. ಅಲ್ಲಿಂದಲೇ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾರ್ಚ್ 2ರಂದು ರೋಗಪತ್ತೆಯಾಗಿದೆ. ಸದ್ಯ ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಆತನನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button