ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ರಾಜ್ಯ ಸರ್ಕಾರ ಇಡೀ ರಾಜ್ಯವನ್ನೇ ಬಂದ್ ಮಾಡಿರುವ ಹಿನ್ನಲೆಯಲ್ಲಿ ಬಡ ಜನರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಕೊರೊನಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಉತ್ತರಿಸಿದ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಬಡ ಜನರಿಗೆ ಅನುಕೂಲವಾಗಬೇಕೆಂಬ ಕಾರಣಕ್ಕೆ 2 ತಿಂಗಳ ಪಡಿತರ ತಕ್ಷಣ ಮುಂಚಿತವಾಗಿ ವಿತರಣೆ ಮಾಡಲಾಗುವುದು. 13.20 ಕೋಟಿ ರೂ ಬಡವರ ಬಂಧು ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಿಸಿದರು.

ಸಾಮಾಜಿಕ ಭದ್ರತಾ ಪಿಂಚಣಿ ಮುಂಗಡವಾಗಿ ಕೊಡಲಾಗುವುದು. ನರೇಗಾ ಕೂಲಿಕಾರರಿಗೆ ಎರಡು ತಿಂಗಳ ಮುಂಗಡ ಹಣ, 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1000 ರೂ ವೇತನ ನಿಡಲಾಗುವುದು ಎಂದು ಭರವಸೆ ನೀಡಿದರು.

ಇನ್ನು ಕೊರೊನಾ ವೈರಸ್ ಗೆ ಇಡೀ ದೇಶದಲ್ಲೇ ಕರ್ನಾಟಕದಲ್ಲೇ ಮೊದಲ ಬಲಿಯಾಗಿರುವ ಹಿನಲೆಯಲ್ಲಿ ವೈರಾಣು ಹರಡಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೊರೊನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಲ್ಲಿ ರಾಜಕೀಯ ಮಾಡದೇ ವಿಪಕ್ಷಗಳು ಬೆಂಬಲ ನೀಡುತ್ತಿರುವುದು ಸಂತಸದ ವಿಚಾರ. ಆದರೆ ವಿಧಾನ ಮಂಡಲ ಅಧಿವೇಶನ ಮೊಟಕುಗೊಳಿಸಬೇಕೆಂದು ಒತ್ತಾಯಿಸಿ ವಿಪಕ್ಷಗಳು ಇಂದು ಕಲಾಪಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಇದೇ ವೇಳೆ ನಾನು ಹಸಿರು ಶಾಲು ಹಾಕಿ ಬಜೆಟ್ ಮಂಡಿಸಿದ ಬಗ್ಗೆ ವಿಪಕ್ಶ ನಾಯಕ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾನು ಹಸಿರುವ ಶಾಲು ಹಾಕಿ ಕೃಷಿ ಬಜೆಟ್ ಮಂಡಿಸಿ, ಕೇಸರಿ ಶಾಲು ಹಾಕಿ ಹೊರಗೆ ಓಡಾಡ್ತೀನಿ ಎಂದು ಟೀಕೆ ಮಾಡಿದ್ದಾರೆ. ಕೇಸರಿ ತ್ಯಾಗದ ಸಂಕೇತ ಎನ್ನುವುದು ಅವರಿಗೆ ಗೊತ್ತಿರಲಿ ಎಂದು ತಿರುಗೇಟು ನೀಡಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button