ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನದಲ್ಲಿ 6000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನದಲ್ಲಿ 44 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುಧಾಕರ್, ಕೇರಳ ಹಾಗೂ ಮಹಾರಾಷ್ಟ್ರಗಳಿಂದ ರಸ್ತೆ ಮಾರ್ಗವಾಗಿ ರಾಜ್ಯಕ್ಕೆ ಜನರು ಬರುತ್ತಾರೆ. ಹಾಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಹಿಬ್ಬಳ್ಳಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಇದೇ ವೇಳೆ ಸರ್ಕಾರ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತಿದ್ದರೂ ಕೂಡ ಆರೋಗ್ಯ ಕಾರ್ಯಕರ್ತರೇ ಇಂದು ಲಸಿಕೆ ಪಡೆದುಕೊಳ್ಳಲು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈವರೆಗೆ ಶೇ.51ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ನಮ್ಮ ರಾಜ್ಯದಲ್ಲಿ ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಅಂದರೆ ಶೇ.78ರಷ್ಟು ಲಸಿಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಅತಿ ಕಡಿಮೆ ಶೇ.36ರಷ್ಟು ಲಸಿಕೆ ಪಡೆಯಲಾಗಿದೆ. ಇದು ಅತ್ಯಂತ ಖೇದಕರ ವಿಷಯ. ಜನರ ಆತ್ಮ ರಕ್ಷಣೆ ನಮ್ಮ ಗುರಿ. ಡಿಸಿಗಳು ಎಸ್ ಪಿ ಗಳು ಕೂಡ ಪಡೆಯುತ್ತಿದ್ದಾರೆ. ಆದರೆ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಲಸಿಕೆ ಪಡೆಯುತ್ತಿಲ್ಲ. ವೈದ್ಯರಾಗಿ ನಾವೇ ಕೊರೊನಾ ಲಸಿಕೆ ಪಡೆಯದಿದ್ದರೆ ಸಾಮಾನ್ಯ ಜನರು ಹೇಗೆ ಮುಂದೆ ಬಂದು ಲಸಿಕೆ ಪಡೆಯುತ್ತಾರೆ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ